ಸಾರಾಂಶ
ಕನ್ನಡಪ್ರಭ ವಾರ್ತೆ ಕಾರ್ಕಳ
ಕಾರ್ಕಳ ತಾಲೂಕಿನ ಗಡಿ ಭಾಗವಾದ ಈದು ಸಮೀಪದ ಬೊಳ್ಳೆಟ್ಟುನಲ್ಲಿ ನಕ್ಸಲ್ ಚಟುವಟಿಕೆ ಶಂಕೆ ವ್ಯಕ್ತವಾಗಿದೆ. ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಬೊಳ್ಳೆಟ್ಟು ಭಾಗದಲ್ಲಿ ಮಾಹಿತಿ ಕಲೆಹಾಕಿದ್ದು, ನಕ್ಸಲ್ ಚಟುವಟಿಕೆ ಇರುವಿಕೆಯ ಮಾಹಿತಿ ಖಚಿತವಾಗಿಲ್ಲ.ಆದರೆ ಕಾರ್ಕಳ ಎಎನ್‌ಎಫ್ ಪಡೆ ಕಾರ್ಯಾಚರಣೆಗೆ ಇಳಿದಿದ್ದು, ಕಾರ್ಕಳ, ಹೆಬ್ರಿ ತಾಲೂಕಿನ ಭಾಗಗಳಲ್ಲಿ ಕೂಬಿಂಗ್ ಕಾರ್ಯಾಚರಣೆ ಬಿರುಸುಗೊಳಿಸಿದೆ.* ನಡೆದಿದ್ದೇನು!?:
ನಾಲ್ವರು ಶಸ್ತ್ರಸಜ್ಜಿತ ಯುವಕರ ತಂಡವೊಂದು ಈದು ಗ್ರಾಮದ ಬೊಳ್ಳೆಟ್ಟು ಸಮೀಪದ ಮುಸ್ಲಿಂ ಕಾಲೋನಿಯ ಬಳಿಯಿರುವ ಬಂಡೆಕಲ್ಲು ಸಮೀಪ ಸೋಮವಾರ ಹಗಲಿನಲ್ಲಿ ಕಾಣಿಸಿಕೊಂಡಿದ್ದರು ಎಂಬ ಸುದ್ದಿ ಹರಿದಾಡಿದೆ. ಈ ಸುದ್ದಿ ಇನ್ನೂ ಅಧಿಕೃತವಾಗಿಲ್ಲ. ಸ್ಥಳೀಯರು ಕಾಡಿಗೆ ಶಿಕಾರಿಗೆ ಹೋಗಿದ್ದಾರೆಯೇ ಎಂದು ವಿಚಾರಿಸಿದಾಗಲೂ ಸ್ಪಷ್ಟ ಮಾಹಿತಿ ಲಭಿಸಿಲ್ಲ.ದಶಕಗಳ ಹಿಂದೆ ಹೆಬ್ರಿ ತಾಲೂಕಿನ ಕಬ್ಬಿನಾಲೆಯ ಮತ್ತಾವುವಿನಲ್ಲಿ ಬಾಂಬ್ ಬ್ಲಾಸ್ಟ್ ಆದಾಗ ನಕ್ಸಲ್ ಚಟುವಟಿಕೆ ಇರುವಿಕೆಯು ಬೆಳಕಿಗೆ ಬಂದಿತ್ತು. ಬಳಿಕ ಈದು ಗ್ರಾಮದಲ್ಲಿ ನಕ್ಸಲ್ ಚಟುವಟಿಕೆ ಬಗ್ಗೆ ವರದಿಯಾಗಿತ್ತು. ಈ ಬಾರಿಯು ಈದು ಗ್ರಾಮದ ಬೊಳ್ಳೆಟ್ಟುನಲ್ಲಿ ನಕ್ಸಲರು ಕಾಣಸಿಕ್ಕಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.
* ನವೆಂಬರ್‌ನಲ್ಲೇ ನಡೆದಿತ್ತು ಎನ್‌ಕೌಂಟರ್:ನಕ್ಸಲ್ ಕಾರ್ಯಾಚರಣೆ ವೇಳೆ 2003ರ ನ.17ರಂದು ಎನ್ ಕೌಂಟರ್ ನಡೆದಿತ್ತು. ಪರಿಣಾಮ ನಕ್ಸಲರಾದ ಹಾಜಿಮಾ ಮತ್ತು ಪಾರ್ವತಿ ಬಲಿಯಾಗಿದ್ದರು. ಯಶೋದಾ ಎಂಬಾಕೆ ಗಾಯಗೊಂಡಿದ್ದಳು. ದೇವೇಂದ್ರ ಯಾನೇ ವಿಷ್ಣು ಸಹಿತ ಇನ್ನುಳಿದವರು ಪರಾರಿಯಾಗಿದ್ದರು.
* ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಗದ್ದರ್:2003ರಲ್ಲಿ ನಕ್ಸಲ್ ಕಾರ್ಯಾಚರಣೆಯಲ್ಲಿ ನಡೆಸಿದ ಎನ್ ಕೌಂಟರ್ ವಿರುದ್ಧವಾಗಿ ನಡೆದ ಪ್ರತಿಭಟನೆಯಲ್ಲಿ ಆಂಧ್ರ ಪ್ರದೇಶದ ನಕ್ಸಲ್ ಪರ ಹೋರಾಟಗಾರ, ಕವಿ, ಗದ್ದರ್ ಭಾಗವಹಿಸಿದ್ದರು. ಅವರ ನೇತೃತ್ವದಲ್ಲಿ ಪ್ರಗತಿಪರರು ನಾರಾವಿ ಪರಿಸರದಲ್ಲಿ ಪ್ರತಿಭಟನಾ ಸಭೆ ನಡೆಸಿದ್ದರು.
* ಮಾಸದ ಎನ್‌ಕೌಂಟರ್ ನೆನಪು:21 ವರ್ಷಗಳ ಹಿಂದೆ ನಡೆದ ನಕ್ಸಲ್ ಎನ್‌ಕೌಂಟರ್ ನೆನಪು ಇನ್ನೂ ಮಾಸಿಲ್ಲ. ಈಗ ಮತ್ತೆ ಈ ಪ್ರದೇಶದಲ್ಲಿ ನಕ್ಸಲ್ ಚಟುವಟಿಕೆಯು ಸದ್ದು ಮಾಡಿದೆ.ಕೇರಳ ಭಾಗದಲ್ಲಿ ನಕ್ಸಲ್ ಎನ್‌ಕೌಂಟರ್‌ಗಳು ನಡೆಯುತ್ತಿದ್ದು, ಅದರಿಂದ ನಕ್ಸಲರು ಮತ್ತೆ ಪಶ್ಚಿಮಘಟ್ಟಗಳತ್ತ ಮುಖಮಾಡಿದ್ದಾರೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ.