ನಕ್ಸಲ್‌ ಪೀಡಿತ ಈದು: ‘ಇಲ್ಲ’ಗಳ ನಡುವೆ ದುಸ್ತರ ಬದುಕು

| Published : Nov 14 2024, 12:51 AM IST

ಸಾರಾಂಶ

2020-21ರ ಸಾಲಿನ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಹೊಸ್ಮಾರು ಗುಂಡೋನಿ 4.5 ಕಿ.ಮೀ. ವರೆಗಿನ ರಸ್ತೆ ಅಭಿವೃದ್ಧಿ ಗಾಗಿ ಸುಮಾರು 1 ಕೋಟಿ ರುಪಾಯಿ ಮಂಜೂರಾಗಿ ಮೇಲ್ದರ್ಜೆಗೆ ಏರಿಸಲಾಗಿತ್ತು. ಈಗ ಈ ರಸ್ತೆ ಸಂಚಾರಕ್ಕೆ ಯೋಗ್ಯವಾಗಿಲ್ಲ. ಅದರಲ್ಲೂ ಕಾರ್ಕಳ ಹೊಸ್ಮಾರು ನಾರಾವಿ ಸಾಗುವ ರಾಜ್ಯ ಹೆದ್ದಾರಿಯಲ್ಲಿ ಹೊಂಡಾಗುಂಡಿಗಳೇ ತುಂಬಿ ವಾಹನ ಸಂಚಾರಕ್ಕೆ ತೊಡಕಾಗುತ್ತಿದೆ‌.

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳ

ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಒಂದಾದ ಈದುವಿನಲ್ಲಿ ಸಮಸ್ಯೆಗಳದ್ದೇ ಸರಮಾಲೆ ಎದ್ದು ಕಾಣುತ್ತಿದೆ. ರಸ್ತೆಗಳಲ್ಲಿ ಹೊಂಡಾಗುಂಡಿ, ನೆಟ್ವರ್ಕ್ ಸಮಸ್ಯೆಗಳು ಗ್ರಾಮವಾಸಿಗಳನ್ನು ಕಾಡುತ್ತಿದೆ. ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ದಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ‌.

ಬಸ್ ಪಾಸ್ ಇದ್ದರೂ ಬಸ್ ಇಲ್ಲ: ಈದು ಗ್ರಾಮ ವ್ಯಾಪ್ತಿಯಲ್ಲಿ ಎಂಡೋಸಲ್ಫಾನ್ ಪೀಡಿತರು ಹೆಚ್ಚಿನ ಸಂಖ್ಯೆಯಲಲ್ಿ ಸರ್ಕಾರ ಅವರಿಗಾಗಿ ಬಸ್ ಪಾಸ್ ವ್ಯವಸ್ಥೆ ಕಲ್ಪಿಸಿದೆ. ಈ ಪ್ರದೇಶದ ಎಂಡೋಸಲ್ಫಾನ್ ಪೀಡಿತರಿಗೆ ಬಸ್ ಪಾಸ್ ಇದ್ದರೂ

ಒಂದೇ ಒಂದು ಸರಕಾರಿ ಬಸ್ ಇಲ್ಲಿ ಇಲ್ಲ. ಕಾರ್ಕಳ ನಕ್ಸಲ್ ಪೀಡಿತ ಪ್ರದೇಶಗಳಾದ ಕಾಡಂಚಿನ ನಾರಾವಿ, ನೂರಲ್ಬೆಟ್ಟು, ಗುಮ್ಮೆತ್ತು, ಗಂಗೆನೀರು ಭಾಗಗಳಲ್ಲಿ ಸುಮಾರು7000ಕ್ಕೂ ಹೆಚ್ಚು ಜನಸಂಖ್ಯೆ ಇದೆ. ನೂರಾಲ್‌ಲೆಟ್ಟು ಗ್ರಾಮವು ಈದು ಗ್ರಾಮ ಪಂಚಾಯತಿ ಕಾರ್ಯಾಲಯದಿಂದ ಸುಮಾರು ಐದು ಕಿ.ಮೀ ದೂರದಲ್ಲಿದೆ. ಈ ಭಾಗದಲ್ಲಿ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಗಳಿಗೆ ಹೋಗಲು ರಿಕ್ಷಾ ಹಾಗೂ ಇತರ ವಾಹನಗಳನ್ನು ಆಶ್ರಯಿಸಬೇಕಿದೆ. ಇಲ್ಲದಿದ್ದರೆ ಅರ್ಧಕ್ಕೆ ಶಾಲೆ ಮೊಟಕುಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಭಾಗದಲ್ಲಿ ಸರ್ಕಾರಿ ಬಸ್‌ಗಳ ಸಂಚಾರ ಆರಂಭವಾದರೆ ವಿದ್ಯಾರ್ಥಿಗಳು ಹಾಗೂ ಕೂಲಿಕಾರ್ಮಿಕರಿಗೂ ಅನುಕೂಲವಾಗಲಿದೆ.

ಟವರ್ ಉಂಟು, ನೆಟ್ವರ್ಕ್‌ ಇಲ್ಲ: ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಒಂದಾದ ನೂರಾಲ್‌ಬೆಟ್ಟು ಗ್ರಾಮದಲ್ಲಿ ಕಳೆದ ಒಂದು ವರ್ಷ ಹಿಂದೆ ಬಿಎಸ್‌ಎನ್‌ಎಲ್ ಟವರ್ ನಿರ್ಮಾಣ ಮಾಡಲಾಗಿದೆಯಾದರೂ ಇಲ್ಲಿ ಇನ್ನೂ ನೆಟ್ವರ್ಕ್ ಸಿಗುವುದಿಲ್ಲ. ಸ್ಥಳೀಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಾಗಿ ಮುಂದುವರೆಯಲು ನೆಟ್ವರ್ಕ್ ಸಮಸ್ಯೆ ಗಳು ಕಾಡುತ್ತಿವೆ. ಮನೆಯಿಂದ ಕೆಲಸಮಾಡುವ ನೌಕರರಿಗೆ ನೆಟ್ವರ್ಕ್ ಸಮಸ್ಯೆ ಹಿನ್ನೆಲೆಯಲ್ಲಿ ಊರಿನಿಂದ ನಾಲ್ಕೈದು ಕಿ.ಮೀ. ದೂರದೂರಿಗೆ ಹೋಗಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ.

ಗುಂಡಿ ನಡುವೆ ರಸ್ತೆ!: ಅರಣ್ಯ ಪ್ರದೇಶದಿಂದ ಆವೃತವಾದ ಮಾಳದ ಹುಕ್ರಟ್ಟೆ ಮಾರ್ಗವಾಗಿ ನೂರಾಲ್‌ಬೆಟ್ಟು ಹೊಸ್ಮಾರು ಗುಂಡೋನಿವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯಲ್ಲಿ ವಾಹನಗಳ ಸಂಚಾರವು ತೀರಾ ದುಸ್ತವಾಗಿದ್ದು ಜಲ್ಲಿಕಲ್ಲುಗಳು ಎದ್ದು ಚೆಲ್ಲಪಿಲ್ಲಿಯಾಗಿವೆ. ದ್ವಿಚಕ್ರ ಸಹಿತ ಯಾವುದೇ ವಾಹನಗಳ ಸಂಚಾರಕ್ಕೆ ಈ ರಸ್ತೆ ಯೋಗ್ಯವಾಗಿಲ್ಲ.

2020-21ರ ಸಾಲಿನ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಹೊಸ್ಮಾರು ಗುಂಡೋನಿ 4.5 ಕಿ.ಮೀ. ವರೆಗಿನ ರಸ್ತೆ ಅಭಿವೃದ್ಧಿ ಗಾಗಿ ಸುಮಾರು 1 ಕೋಟಿ ರುಪಾಯಿ ಮಂಜೂರಾಗಿ ಮೇಲ್ದರ್ಜೆಗೆ ಏರಿಸಲಾಗಿತ್ತು. ಈಗ ಈ ರಸ್ತೆ ಸಂಚಾರಕ್ಕೆ ಯೋಗ್ಯವಾಗಿಲ್ಲ. ಅದರಲ್ಲೂ ಕಾರ್ಕಳ ಹೊಸ್ಮಾರು ನಾರಾವಿ ಸಾಗುವ ರಾಜ್ಯ ಹೆದ್ದಾರಿಯಲ್ಲಿ ಹೊಂಡಾಗುಂಡಿಗಳೇ ತುಂಬಿ ವಾಹನ ಸಂಚಾರಕ್ಕೆ ತೊಡಕಾಗುತ್ತಿದೆ‌.

ವಿದ್ಯುತ್ ಪೂರೈಕೆ ಇಲ್ಲ; ಪಶ್ಚಿಮ ತೀರಾ ತಪ್ಪಲಿನ ಪ್ರದೇಶದ ಈದು ಗ್ರಾಮದ ಕನ್ಯಾಲು ಭಾಗದ ಮಲೆಕುಡಿಯ ಸಮುದಾಯದ ಮನೆಗಳಲ್ಲಿ ವಿದ್ಯುತ್ ಪೂರೈಕೆಯೇ ಇಲ್ಲವಾಗಿದೆ. ಕುದುರೆಮುಖ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿ ಬರುವ ಕಾರಣ ಅರಣ್ಯ ಪ್ರದೇಶದಲ್ಲಿ ವಿದ್ಯುತ್ ಕಂಬಗಳನ್ನು ಹಾಕಲು ಇಲಾಖೆ ಸಹಕರಿಸುತಿಲ್ಲ.

...................

ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದು, ಮನೆಯಿಂದ ಕೆಲಸ ಮಾಡುತ್ತಿದ್ದೇನೆ. ಆದರೆ ನೆಟ್ವರ್ಕ್ ಇಲ್ಲದ ಕಾರಣ ಮನೆಯಿಂದ 5 ಕಿ.ಮೀ. ದೂರ ಕ್ರಮಿಸಿ ಹೊಸ್ಮಾರಿನಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ಬಂದಿದೆ. ನೆಟ್ವರ್ಕ್ ಬೇಕಾದರೆ ಗುಡ್ಡ ಹತ್ತಿ ಕೂರಬೇಕು

- ರಾಜೀವಿ, ನೂರಲ್ಬೆಟ್ಟು.

---

ಈದು ಗ್ರಾಮಕ್ಕೆ ವಿಶೇಷ ಪ್ಯಾಕೇಜ್ ನೀಡಲು ಸjdkeರಕ್ಕೆ ಮನವಿ ಸಲ್ಲಿಸಲಾಗುವುದು. ನೂರಲ್ಬೆಟ್ಟು ಗ್ರಾಮ ವ್ಯಾಪ್ತಿಯಲ್ಲಿ ಸರಕಾರಿ ಬಸ್ ಸಂಪರ್ಕಕ್ಕಾಗಿ ಮನವಿ ಸಲ್ಲಿಸಿದರೆ ಪರಿಶೀಲನೆ ನಡೆಸಲಾಗುವುದು. ಬಿಎಸ್‌ಎನ್‌ಎಲ್‌ ಟವರ್ ಬಗ್ಗೆ ಮಾಹಿತಿ ತರಿಸಿಕೊಂಡು ಶೀಘ್ರದಲ್ಲೇ ನೆಟ್ವರ್ಕ್ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು

- ವಿದ್ಯಾಕುಮಾರಿ, ಉಡುಪಿ ಜಿಲ್ಲಾಧಿಕಾರಿ

---

ಕಾರ್ಕಳದಿಂದ ಈದು, ನೂರಲ್ಬೆಟ್ಟು, ಉಡುಪಿ ಕಾರ್ಕಳ ಬಜಗೋಳಿ ಹೊಸ್ಮಾರ್ ನಾರಾವಿ, ನಾರಾವಿ ಶಿರ್ತಾಡಿ ಮೂಡುಬಿದಿರೆ ಮಾರ್ಗವಾಗಿ ಸರಕಾರಿ ಬಸ್ ಕಲ್ಪಿಸುವಂತೆ ಜಿಲ್ಲಾಡಳಿತ ಕ್ಕೆ ಮನವಿ ಸಲ್ಲಿಸಲಾಗುವುದು‌

- ದಾನಂದ ಪೂಜಾರಿ, ಈದು ಗ್ರಾ.ಪಂ ಅಧ್ಯಕ್ಷ