ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ ಎನ್‌ಸಿಸಿ ವಿದ್ಯಾರ್ಥಿಗಳಿಗಾಗಿ ಎನ್‌ಸಿಸಿಯ ಕರ್ನಾಟಕ 25 ಬಟಾಲಿಯನ್ ಆಯೋಜಿಸಿದ್ದ ತರಬೇತಿ ಶಿಬಿರವನ್ನು ಶನಿವಾರ ಪೂರ್ಣಗಳಿಸಿತು. ಈ ಶಿಬಿರದಲ್ಲಿ ನಿಪ್ಪಾಣಿ, ಬೇಡಕಿಹಾಳ, ಸಂಕೇಶ್ವರ, ಖಾನಾಪುರ, ಬೈಲಹೊಂಗಲ, ನಂದಗಡ, ಎಂ.ಕೆ.ಹುಬ್ಬಳ್ಳಿ ಹೀಗೆ ಸ್ಥಳೀಯ ಶಾಲಾ-ಕಾಲೇಜುಗಳಿಂದ 550 ಕೆಡೆಟ್‌ಗಳು ಭಾಗವಹಿಸಿದ್ದರು. ರಸ ಪ್ರಶ್ನೆ ಕಾರ್ಯಕ್ರಮದ ಜೊತೆಗೆ ಹಾವು ನಿರ್ವಹಣೆಯ ಭೇಟಿಯನ್ನು ಒಳಗೊಂಡಂತೆ ಕೆಡೆಟ್‌ಗಳಿಗೆ ವಿವಿಧ ಉಪನ್ಯಾಸಗಳು ಮತ್ತು ಪ್ರಾತ್ಯಕ್ಷಿಕೆಗಳನ್ನು ನಡೆಸಲಾಯಿತು. ಪೋಕ್ಸೊ ಕಾಯ್ದೆ ಮತ್ತು ಸಾಮಾನ್ಯ ಸೂಕ್ಷ್ಮತೆಯ ಕುರಿತು ಕೆಡೆಟ್‌ಗಳಿಗೆ ಉಪನ್ಯಾಸ, ಬೆಂಕಿ ಅವಘಡ ಸಮಯದಲ್ಲಿ ಕೈಗೊಳ್ಳಬೇಕಾದ ತುರ್ತು ಕ್ರಮ ಕುರಿತು ಅಗ್ನಿಶಾಮಕ ದಳ ಅಧಿಕಾರಿಗಳು ಪ್ರಾತ್ಯಕ್ಷಕೆ ಮೂಲಕ ತಿಳಿಸಿದರು. ಅಲ್ಲದೇ ಸೈಬರ್ ಅಪರಾಧ, ವಂಚನೆ ಕುರಿತು ಜಾಗೃತಿ, ಆರೋಗ್ಯ ಮತ್ತು ನೈರ್ಮಲ್ಯ ತಿಳಿವಳಿಕೆ, ವಿವಿಧ ಕ್ರೀಡಾ ಸ್ಪರ್ಧೆಗಳು ವಾಲಿಬಾಲ್, ಥ್ರೋ ಬಾಲ್ ಮತ್ತು ಡ್ರಿಲ್ ಸ್ಪರ್ಧೆ ಆಯೋಜಿಸಲಾಗಿತ್ತು. ಬಳಿಕ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ 25ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು.