ತಾಕತ್ತಿದ್ರೆ ಕಳೆದ ಸಲದಷ್ಟು ಗೆಲ್ಲಿ- 28ಕ್ಕೆ 28 ಸ್ಥಾನದಲ್ಲೂ ಈ ಸಲ ಜಯ ನಮ್ದೇ : ಬಿಎಸ್‌ವೈ

| Published : Apr 21 2024, 02:28 AM IST / Updated: Apr 21 2024, 11:15 AM IST

BS Yediyurappa
ತಾಕತ್ತಿದ್ರೆ ಕಳೆದ ಸಲದಷ್ಟು ಗೆಲ್ಲಿ- 28ಕ್ಕೆ 28 ಸ್ಥಾನದಲ್ಲೂ ಈ ಸಲ ಜಯ ನಮ್ದೇ : ಬಿಎಸ್‌ವೈ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ ಮುಖಂಡರು ಹಣ ಬಲ, ಹೆಂಡ, ತೋಳ್ಬಲದಿಂದ ಜಾತಿ ವಿಷಬೀಜ ಬಿತ್ತಿ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದಾರೆ. ನಿಮಗೆ ತಾಕತ್‌ ಇದ್ದರೆ ಕಳೆದ ಬಾರಿ ಗೆದ್ದಷ್ಟು ಸ್ಥಾನಗಳನ್ನು ಈ ಬಾರಿ ಗೆದ್ದು ತೋರಿಸಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸವಾಲು ಹಾಕಿದ್ದಾರೆ.

  ಬೆಂಗಳೂರು :  ಕಾಂಗ್ರೆಸ್‌ ಮುಖಂಡರು ಹಣ ಬಲ, ಹೆಂಡ, ತೋಳ್ಬಲದಿಂದ ಜಾತಿ ವಿಷಬೀಜ ಬಿತ್ತಿ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದಾರೆ. ನಿಮಗೆ ತಾಕತ್‌ ಇದ್ದರೆ ಕಳೆದ ಬಾರಿ ಗೆದ್ದಷ್ಟು ಸ್ಥಾನಗಳನ್ನು ಈ ಬಾರಿ ಗೆದ್ದು ತೋರಿಸಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸವಾಲು ಹಾಕಿದ್ದಾರೆ.

ಅರಮನೆ ಮೈದಾನದಲ್ಲಿ ಶನಿವಾರ ನಡೆದ ಬಿಜೆಪಿಯ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಇಡೀ ವಿಶ್ವವೇ ಸಮಸ್ಯೆಗಳಿಗೆ ಪರಿಹಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆ ಪಡೆಯಲು ಎದುರು ನೋಡುತ್ತಿದೆ. ಇಡೀ ಜಗತ್ತೇ ಮೆಚ್ಚಿರುವ ನರೇಂದ್ರ ಮೋದಿ ಅವರಿಗೆ ಭರವಸೆ ನೀಡುತ್ತೇನೆ. ರಾಜ್ಯದ 28 ಲೋಕಸಭಾ ಸ್ಥಾನಗಳನ್ನು ಗೆದ್ದು ಸಂಸದರನ್ನು ನಿಮ್ಮ ಜತೆಗೆ ಕಳುಹಿಸಿಕೊಡುತ್ತೇನೆ ಎಂದರು.

ಇಡೀ ರಾಜ್ಯದಲ್ಲಿ ನಮಗೆ ಅನುಕೂಲಕರ ವಾತಾವರಣವಿದೆ. ಬಿಜೆಪಿ-ಜೆಡಿಎಸ್‌ ಹೊಂದಾಣಿಕೆಯಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳನ್ನೂ ಗೆಲ್ಲುವುವು ನಿಶ್ಚಿತ. ರಾಜ್ಯದ ನಮ್ಮ ಕಾಂಗ್ರೆಸ್‌ ಸ್ನೇಹಿತರು ಅಧಿಕಾರದ ಮದದಿಂದ ಜನಹಿತ ಮರೆತು ತೊಘಲಕ್‌ ದರ್ಬಾರ್‌ ನಡೆಸುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ದೇಶದದಲ್ಲಿ ಕಾಂಗ್ರೆಸ್‌ 52 ಸ್ಥಾನ ಗೆದ್ದಿತ್ತು. ಈ ಬಾರಿ ಅಧಿಕಾರಕ್ಕೆ ಬಂದರೆ ಅದು-ಇದು ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ನಾನು ಕೇಳುತ್ತೇನೆ. ನೀವು ಕಳೆದ ಬಾರಿ ಗೆದ್ದಿರುವ 52 ಸ್ಥಾನಗಳನ್ನು ಈ ಬಾರಿಯೂ ಗೆದ್ದು ತೋರಿಸಿ ಎಂದು ಸವಾಲು ಹಾಕಿದರು.

28 ಸ್ಥಾನಗಳಲ್ಲಿ ಗೆಲ್ಲಲು ಕೆಲಸ  

ಮೊದಲ ಹಂತದ ಚುನಾವಣೆಗೆ ಐದಾರು ದಿನ ಸಮಯವಿದೆ. ಹೀಗಾಗಿ ಕಾರ್ಯಕರ್ತರು ಮನೆ-ಮನೆಗೆ ತೆರಳಿ ಕಳೆದ ಹತ್ತು ವರ್ಷಗಳ ಮೋದಿ ಸಾಧನೆಗಳನ್ನು ತಿಳಿಸಿ, ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿಗೆ ಮತ ಹಾಕುವಂತೆ ಮನವಿ ಮಾಡಬೇಕು. ಈ ಬಾರಿ 28 ಸ್ಥಾನಗಳನ್ನು ನಾವು ಗೆಲ್ಲಬೇಕು. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು ಎಂದು ಕಾರ್ಯಕರ್ತರಿಗೆ ಯಡಿಯೂರಪ್ಪ ಕರೆ ನೀಡಿದರು.ಜನತೆಗೆ ಬಿಜೆಪಿ-ಜೆಡಿಎಸ್‌ ಸಮಿಶ್ರ ಸರ್ಕಾರದ ಅಪೇಕ್ಷೆ:

ಮುಂಬರುವ ದಿನಗಳಲ್ಲಿ ರಾಜ್ಯದ ಜನತೆಗೆ ಬಿಜೆಪಿ-ಜೆಡಿಎಸ್‌ ಸರ್ಕಾರ ಬರುವ ಅಪೇಕ್ಷೆ ಇದೆ. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಈ ದೇಶದಲ್ಲಿ ಕಾಂತ್ರಿಕಾರ ಬದಲಾವಣೆಗಳಾಗಿವೆ. ಕಾಂಗ್ರೆಸ್‌ನ ಮನಸ್ಥಿತಿ ಹೇಗಿದೆಯೆಂದರೆ, ಅವರಿಗೆ ಈ ದೇಶದ ಅಭಿವೃದ್ಧಿ ಬೇಕಿಲ್ಲ. ಹೊರದೇಶಗಳಲ್ಲಿ ಭಾರತದ ಗೌರವ ಹೆಚ್ಚಳವಾಗಿರುವುದನ್ನು ಸಹಿಸಲು ಆಗುತ್ತಿಲ್ಲ. ಪ್ರಧಾನಿ ಮೋದಿ ಬಗ್ಗೆ ಇಡೀ ವಿಶ್ವವೇ ಮಾತನಾಡುತ್ತಿದೆ. ಕಾಂಗ್ರೆಸ್‌ ಇದನ್ನು ಸಹಿಸಲಾಗದೆ ಮನಬಂದಂತೆ ಮಾಡುತ್ತಿದೆ ಎಂದು ಕಿಡಿಕಾರಿದರು.