ಕನ್ನಡಪ್ರಭ ವಾರ್ತೆ ಮಡಿಕೇರಿ

ದೇಶದ ಮೂರು ಪ್ರಮುಖ ರಾಜ್ಯಗಳಾದ ಪಶ್ಚಿಮ ಬಂಗಾಳ, ಅಸ್ಸಾಂ ಹಾಗೂ ಪುದುಚೇರಿಯಲ್ಲಿ ಬಿಜೆಪಿ (ಎನ್‌ಡಿಎ) ಐತಿಹಾಸಿಕ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಸಿದ್ದಾಪುರದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.

ದೇಶದ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಹಾಗೂ ಗೃಹ ಮಂತ್ರಿ ಅಮಿತ್ ಶಾ ಸೇರಿದಂತೆ ಬಿಜೆಪಿ ನಾಯಕರ ಮತ್ತು ಕಾರ್ಯಕರ್ತರ ಪರಿಶ್ರಮದ ಫಲವಾಗಿ ಇಂದು ಮೂರು ರಾಜ್ಯಗಳಲ್ಲಿ ಈ ಭರ್ಜರಿ ಜಯ ಸಾಧಿಸಲು ಸಾಧ್ಯವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ ಕಾರ್ಯಕರ್ತರು ಜಯ ಘೋಷಗಳನ್ನು ಕೂಗಿ ಸಂಭ್ರಮಿಸಿದರು.

ಈ ಸಂದರ್ಭ ಮಾತನಾಡಿದ ಸಿದ್ದಾಪುರ ಶಕ್ತಿಕೇಂದ್ರದ ಅಧ್ಯಕ್ಷ ರೂಪೇಶ್ ʼಇಂದು ನಾವು ಆಚರಿಸುತ್ತಿರುವ ಈ ವಿಜಯೋತ್ಸವ ಕೇವಲ ಗೆಲುವಿನ ಸಂಭ್ರಮವಲ್ಲ. ಇದು ಜನರ ಸೇವೆಗೆ ಸಿಕ್ಕ ಗೌರವ ಹಾಗೂ ಉತ್ತಮ ಆಡಳಿತಕ್ಕೆ ದೊರೆತ ಮನ್ನಣೆಯಾದಾಗಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಸಹ ಬಿಜೆಪಿ ಅಧಿಕಾರಕ್ಕೆ ಬರಲಿದೆ ಕೊಡಗಿನ ಎರಡು ಕ್ಷೇತ್ರಗಳಲ್ಲಿ ಸಹ ಮತ್ತೆ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉಪಾಧ್ಯಕ್ಷ ಡಿಜಿತ್, ಗ್ರಾ.ಪಂ ಸದಸ್ಯ ಆನಂದ್, ಪ್ರಮುಖರಾದ ಕುಮಂಡ ದರ್ಶನ್, ಸುಧನಾ ಸತೀಶ್, ಸಜೀಲ್, ವಿಜೇಶ್, ಸೂರಿ, ಅನಿಲ್, ಹರೀಶ್, ಜಯಪ್ರಕಾಶ್, ಗಿರೀಶ್, ಸುಜಯ್, ಅಯ್ಯಪ್ಪ, ರಾಧಾಕೃಷ್ಣ ಸೇರಿದಂತೆ ಮತ್ತಿತರರು ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು.