ತುಂಗಭದ್ರಾ ಜಲಾಶಯ ಗೇಟ್‌ ಬದಲಿಸಲು ಎನ್‌ಡಿಟಿ ಪರೀಕ್ಷೆ ಮೊರೆ!

| Published : Mar 21 2025, 12:33 AM IST

ತುಂಗಭದ್ರಾ ಜಲಾಶಯ ಗೇಟ್‌ ಬದಲಿಸಲು ಎನ್‌ಡಿಟಿ ಪರೀಕ್ಷೆ ಮೊರೆ!
Share this Article
  • FB
  • TW
  • Linkdin
  • Email

ಸಾರಾಂಶ

ಕಲ್ಯಾಣ ಕರ್ನಾಟಕದ ರೈತರ ಜೀವನಾಡಿ ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ಗಳನ್ನು ಬದಲಿಸುವುದಕ್ಕಾಗಿ ತುಂಗಭದ್ರಾ ಮಂಡಳಿ ಆಂಧ್ರಪ್ರದೇಶ ಮೂಲದ ಏಜೆನ್ಸಿಯೊಂದರಿಂದ ವಿನಾಶಕಾರಿಯಲ್ಲದ ಪರೀಕ್ಷೆ (ಎನ್‌ಡಿಟಿ) ಯನ್ನು ಮಾಡಿಸುತ್ತಿದೆ. ಒಂದು ತಿಂಗಳಿನಿಂದ ಜಲಾಶಯದ ಗೇಟ್‌ಗಳಲ್ಲಿ ಈ ಪರೀಕ್ಷೆ ನಡೆಯುತ್ತಿದ್ದು, ಈ ಏಜೆನ್ಸಿ ನೀಡುವ ವರದಿ ಆಧಾರದ ಮೇಲೆ ಗೇಟ್‌ಗಳನ್ನು ಬದಲಿಸಲು ಇ-ಟೆಂಡರ್‌ ಪ್ರಕ್ರಿಯೆ ಆರಂಭಗೊಳ್ಳಲಿದೆ.

ಕೃಷ್ಣ ಲಮಾಣಿ

ಹೊಸಪೇಟೆ: ಕಲ್ಯಾಣ ಕರ್ನಾಟಕದ ರೈತರ ಜೀವನಾಡಿ ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ಗಳನ್ನು ಬದಲಿಸುವುದಕ್ಕಾಗಿ ತುಂಗಭದ್ರಾ ಮಂಡಳಿ ಆಂಧ್ರಪ್ರದೇಶ ಮೂಲದ ಏಜೆನ್ಸಿಯೊಂದರಿಂದ ವಿನಾಶಕಾರಿಯಲ್ಲದ ಪರೀಕ್ಷೆ (ಎನ್‌ಡಿಟಿ) ಯನ್ನು ಮಾಡಿಸುತ್ತಿದೆ.

ಕಳೆದ ಒಂದು ತಿಂಗಳಿನಿಂದ ಜಲಾಶಯದ ಗೇಟ್‌ಗಳಲ್ಲಿ ಈ ಪರೀಕ್ಷೆ ನಡೆಯುತ್ತಿದ್ದು, ಈ ಏಜೆನ್ಸಿ ನೀಡುವ ವರದಿ ಆಧಾರದ ಮೇಲೆ ಗೇಟ್‌ಗಳನ್ನು ಬದಲಿಸಲು ಇ-ಟೆಂಡರ್‌ ಪ್ರಕ್ರಿಯೆ ಆರಂಭಗೊಳ್ಳಲಿದೆ.

ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್‌ ಹಾಗೂ ಜಲಾಶಯದ ಗಟ್ಟಿತನ ಪತ್ತೆ ಹಚ್ಚಲು, ಮೌಲ್ಯಮಾಪನ ನಡೆಸಲು ಈ ಪರೀಕ್ಷೆ ನಡೆಸಲಾಗುತ್ತಿದೆ. ಆಂಧ್ರಪ್ರದೇಶ ಮೂಲದ ಕೆ.ಎಸ್‌. ಎನ್‌ಡಿಟಿ ಸರ್ವಿಸ್‌ ಎಂಬ ಏಜೆನ್ಸಿ ಈ ಕಾರ್ಯ ಕೈಗೆತ್ತಿಕೊಂಡಿದ್ದು, ಕಳೆದ ಒಂದು ತಿಂಗಳಿನಿಂದ ಹತ್ತಾರು ಜನ ತಜ್ಞರ ತಂಡ ಜಲಾಶಯದ ಗೇಟ್‌ಗಳಲ್ಲಿ ಇಳಿದು ಪರೀಕ್ಷೆ ನಡೆಸುತ್ತಿದ್ದು, ಐದಾರು ದಿನಗಳಲ್ಲೇ ಈ ಕಾರ್ಯ ಪೂರ್ಣಗೊಳ್ಳಲಿದೆ. ಬಳಿಕ ಆರಂಭಿಕ ಹಂತದಲ್ಲಿ 32 ಕ್ರಸ್ಟ್‌ಗೇಟ್‌ಗಳಲ್ಲಿ (19ನೇ ಕ್ರಸ್ಟ್‌ಗೇಟ್‌ಗೆ ಸ್ಟಾಪ್‌ಲಾಗ್‌ ಅಳವಡಿಸಲಾಗಿದೆ) ಯಾವ್ಯಾವ ಗೇಟ್‌ಗಳನ್ನು ತುರ್ತಾಗಿ ಬದಲಿಸಬೇಕು ಎಂಬುದರ ಕುರಿತು ಮಂಡಳಿಗೆ ವರದಿ ಸಲ್ಲಿಸಲಿದೆ ಎಂದು ವಿಶ್ವಸನೀಯ ಮೂಲಗಳು ''''ಕನ್ನಡಪ್ರಭ''''ಕ್ಕೆ ತಿಳಿಸಿವೆ.

19ನೇ ಕ್ರಸ್ಟ್‌ಗೇಟ್‌ನ ಡಿಸೈನ್‌ ಬಂದಿದೆ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ ಗೇಟ್‌ ಕಳಚಿ ಬಿದ್ದು, 40 ಟಿಎಂಸಿಯಷ್ಟು ನೀರು ನದಿಪಾಲಾಗಿತ್ತು. ಹೈದರಾಬಾದ್‌ನ ಪರಿಣಿತ ಕನ್ನಯ್ಯ ನಾಯ್ಡು ತಂಡ ಸ್ಟಾಪ್‌ಲಾಗ್‌ ಅಳವಡಿಕೆ ಮಾಡಿ, ಅಪಾಯದಿಂದ ಪಾರು ಮಾಡಿದ್ದರು. ಈಗ ಕೇಂದ್ರ ಸರ್ಕಾರದ ಡೈರೆಕ್ಟರ್ ಆಫ್‌ ಡಿಸೈನ್ ವಿಂಗ್‌, ಈ ಗೇಟ್‌ ಬದಲಿಸಲು ಡಿಸೈನ್‌ ತಯಾರಿಸಿ ಕಳುಹಿಸಿಕೊಟ್ಟಿದೆ. ಆಂಧ್ರಪ್ರದೇಶ ಸರ್ಕಾರದ ಪರಿಣಿತರ ತಂಡಕ್ಕೂ ಕಳುಹಿಸಲಾಗಿದೆ. ಈ ತಂಡ ಕೂಡ ಈ ಡಿಸೈನ್‌ಗೆ ಸಹಮತ ವ್ಯಕ್ತಪಡಿಸಿದೆ. ಹಾಗಾಗಿ ಶೀಘ್ರವೇ ಟೆಂಡರ್‌ ಕರೆದು; 19ನೇ ಗೇಟ್‌ಗೆ ಹೊಸ ವಿನ್ಯಾಸದ ಗೇಟ್‌ ಅಳವಡಿಸಲು ಮಂಡಳಿ ಮುಂದಾಗಲಿದೆ.

ತಜ್ಞರ ಸಮಿತಿಗಳಿಂದ ಪರಿಶೀಲನೆ: ತುಂಗಭದ್ರಾ ಜಲಾಶಯಕ್ಕೆ ಕೇಂದ್ರದ ಎ.ಕೆ. ಬಜಾಜ್‌ ನೇತೃತ್ವದ ತಾಂತ್ರಿಕ ಪರಿಣಿತರ ತಂಡ, ನ್ಯಾಶನಲ್ ಡ್ಯಾಂ‌ ಸೇಫ್ಟಿ‌ ಅಥಾರಿಟಿಯ ಚೇರಮನ್‌ ಅನಿಲ್ ಜೈನ್ ನೇತೃತ್ವದ ತಂಡ ಕೂಡ ಭೇಟಿ ನೀಡಿ ಜಲಾಶಯದ ಗೇಟ್‌ಗಳ ಸ್ಥಿತಿಗತಿ ಹಾಗೂ ಜಲಾಶಯದ ಗಟ್ಟಿತನದ ಬಗ್ಗೆ ಎನ್‌ಡಿಟಿ ಪರೀಕ್ಷೆ ನಡೆಸಲು ಸೂಚಿಸಿದ್ದರು. ಹಾಗಾಗಿ ಆಂಧ್ರಪ್ರದೇಶ ಮೂಲದ ಏಜೆನ್ಸಿಗೆ ಈ ಕಾರ್ಯ ವಹಿಸಲಾಗಿದೆ.

ತುಂಗಭದ್ರಾ ಜಲಾಶಯ ರಾಜ್ಯದ ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ 10 ಲಕ್ಷ ಎಕರೆ ಪ್ರದೇಶಕ್ಕೆ ನೀರು ಒದಗಿಸುತ್ತದೆ. ಇನ್ನೂ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಗೂ ನೀರು ಒದಗಿಸುತ್ತದೆ.

ಮಂಡಳಿ ಬಳಿ ಹಣ ಇಲ್ಲ: ಕ್ರಸ್ಟ್‌ ಗೇಟ್‌ಗಳನ್ನು ಬದಲಿಸಲು ತುಂಗಭದ್ರಾ ಮಂಡಳಿ ಬಳಿ ನಯಾ ಪೈಸೆ ಇಲ್ಲ. ಹಾಗಾಗಿ ಆಂಧ್ರಪ್ರದೇಶ ಸರ್ಕಾರ ₹40ರಿಂದ ₹50 ಕೋಟಿ ಬಿಡುಗಡೆ ಮಾಡಿದರೆ, ಟೆಂಡರ್‌ ಕರೆಯಲು ಅನುಕೂಲ ಆಗಲಿದೆ ಎಂಬ ಮಾತು ಕೂಡ ಕೇಳಿಬಂದಿದೆ. ಕರ್ನಾಟಕ ಸರ್ಕಾರ ಹಣ ಒದಗಿಸಲು ಮುಂದಾಗಿದೆ. ಆದರೆ, ಆಂಧ್ರಪ್ರದೇಶ ಸರ್ಕಾರ ಇದಕ್ಕೆ ಸಹಮತ ವ್ಯಕ್ತಪಡಿಸಿಲ್ಲ. ಹಾಗಾಗಿ ಏಜೆನ್ಸಿ ನೀಡುವ ವರದಿ ಬಂದ ಬಳಿಕ ಮಂಡಳಿ ಬಳಿ ಹಣ ಇಲ್ಲದಿದ್ದರೂ ಉಭಯ ಸರ್ಕಾರಗಳ ಒಪ್ಪಿಗೆ ಪಡೆದು ಮಂಡಳಿ ಟೆಂಡರ್‌ ಕರೆಯುವ ಸಾಧ್ಯತೆ ಇದೆ.

₹2.3 ಕೋಟಿ ಬಿಡುಗಡೆ: 19ನೇ ಕ್ರಸ್ಟ್‌ಗೇಟ್‌ ಕಳಚಿ ಬಿದ್ದ ಬಳಿಕ ತುಂಗಭದ್ರಾ ಮಂಡಳಿ ಸ್ಟಾಪ್‌ಲಾಗ್‌ ಗೇಟ್‌ ಅಳವಡಿಕೆ ಮಾಡಿದೆ. ಈಗ ಆಂಧ್ರಪ್ರದೇಶ ಸರ್ಕಾರ ₹2.3 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಈ ಹಣದಲ್ಲಿ ಕನ್ನಯ್ಯ ನಾಯ್ಡು ನೇತೃತ್ವದ ಪರಿಣಿತರ ತಂಡ ಹಾಗೂ ಸ್ಟಾಪ್‌ಲಾಗ್ ಅಳವಡಿಕೆಗೆ ಎಲಿಮೆಂಟ್‌ ಒದಗಿಸಿದ ಸಂಸ್ಥೆಗಳು, ಕಾರ್ಮಿಕರಿಗೆ ವೇತನವನ್ನು ನೀಡಲು ಮಂಡಳಿ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ತುಂಗಭದ್ರಾ ಜಲಾಶಯದಲ್ಲಿ ಈಗ 18.573 ಟಿಎಂಸಿ ನೀರಿದೆ. ದಿನೇ ದಿನೇ ನೀರಿನ ಪ್ರಮಾಣ ಇಳಿಯುತ್ತಿದೆ. ಹಾಗಾಗಿ 19ನೇ ಕ್ರಸ್ಟ್‌ಗೇಟ್‌ ಸೇರಿದಂತೆ ತುರ್ತಾಗಿ ಬದಲಿಸಬಹುದಾದ ಗೇಟ್‌ಗಳನ್ನು ತುಂಗಭದ್ರಾ ಮಂಡಳಿ ಶೀಘ್ರವೇ ಬದಲಿಸುವ ಕೆಲಸ ಮಾಡಲಿ. ಇದರಿಂದ ಜಲಾಶಯ ನೆಚ್ಚಿರುವ ರೈತರ ಆತಂಕ ದೂರಾಗಲಿದೆ ಎಂದು ವಿಜಯನಗರ ರೈತ ಶ್ರೀನಿವಾಸ್‌ ನಾಗೇನಹಳ್ಳಿ ಹೇಳುತ್ತಾರೆ.