ಕನಿಷ್ಠ ವೇತನ ಘೋಷಣೆ ಮಾಡಿ

| Published : Jan 24 2024, 02:06 AM IST

ಸಾರಾಂಶ

ದೇಶದ ಅಭಿವೃದ್ಧಿಯ ಸಂಕೇತಗಳಾದ ಮಹಿಳೆಯರು ಮತ್ತು ಮಕ್ಕಳಿಗೆ ಕೊಡುವ ಸವಲತ್ತುಗಳಿಗೆ ಶೇ.90 ರಿಂದ 60 ಪಾಲನ್ನು ಕಡಿತ ಮಾಡಿ, 2021ರ ಬಜೆಟ್ ನಲ್ಲಿ 8542 ಕೋಟಿ ರು. ಕಡಿತ ಮಾಡಲಾಗಿದೆ. ಇದರಿಂದ ದೇಶದ 11- 12 ಕೋಟಿ ಫಲಾನುಭವಿಗಳು ವಂಚಿತರಾಗುತ್ತಿದ್ದಾರೆ

- ಐಸಿಡಿಎಸ್ ಗೆ ಅನುದಾನ ಹೆಚ್ಚಳ ಮಾಡಲು ಆಗ್ರಹ

ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದಿಂದಹಿಸಿ ಪ್ರತಿಭಟನೆ

---

ಕನ್ನಡಪ್ರಭ ವಾರ್ತೆ ಮೈಸೂರು

2024-25ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಐಸಿಡಿಎಸ್ ಗೆ ಅನುದಾನ ಹೆಚ್ಚಳ ಮತ್ತು ಕನಿಷ್ಠ ವೇತನವನ್ನು ಘೋಷಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದವರು (ಸಿಐಟಿಯು ಸಂಯೋಜಿತ) ಮೈಸೂರಿನ ಹಳೆಯ ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರದಿಂದ ಪ್ರತಿಭಟನೆ ಆರಂಭಿಸಿದರು.

ದೇಶದ ಅಭಿವೃದ್ಧಿಯ ಸಂಕೇತಗಳಾದ ಮಹಿಳೆಯರು ಮತ್ತು ಮಕ್ಕಳಿಗೆ ಕೊಡುವ ಸವಲತ್ತುಗಳಿಗೆ ಶೇ.90 ರಿಂದ 60 ಪಾಲನ್ನು ಕಡಿತ ಮಾಡಿ, 2021ರ ಬಜೆಟ್ ನಲ್ಲಿ 8542 ಕೋಟಿ ರು. ಕಡಿತ ಮಾಡಲಾಗಿದೆ. ಇದರಿಂದ ದೇಶದ 11- 12 ಕೋಟಿ ಫಲಾನುಭವಿಗಳು ವಂಚಿತರಾಗುತ್ತಿದ್ದಾರೆ ಎಂದು ಅವರು ದೂರಿದರು.

ಹಿಂದು ಮಹಿಳೆಯರ ಬಗ್ಗೆ ಮಾತನಾಡುವ ಕೇಂದ್ರ ಸರ್ಕಾರ ಅಂಗನವಾಡಿ ನೌಕರರನ್ನು 4500 ರೂ., ಸಹಾಯಕಿಯರಿಗೆ 2250 ರೂ., ಬಿಸಿಯೂಟದವರಿಗೆ 600 ರೂ. ಆಶಾ ಕಾರ್ಯಕರ್ತೆಯರಿಗೆ 2 ಸಾವಿರ ರೂ.ಗೆ ದುಡಿಸುವುದು ಸಾಮಾಜಿಕ ನ್ಯಾಯವೇ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಆಹಾರ, ಆರೋಗ್ಯ, ಶಿಕ್ಷಣದ ಯೋಜನೆಗಳಾದ ಐಸಿಡಿಎಸ್, ಎಂಡಿಎಂ, ಎನ್ಎಚ್ಎಂ, ಐಸಿಪಿಎಸ್, ಎಸ್ಎಸ್ಎ, ನರೇಗಾ ಯೋಜನೆಗಳಿಗೆ ನೌಕರರನ್ನು ಕಾಯಂ ಮಾಡಬೇಕು. ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸಿನಂತೆ ದುಡಿಯುತ್ತಿರುವ ಸಿಬ್ಬಂದಿ ಸೇರಿ 1 ಕೋಟಿ ನೌಕರರಿಗೆ ಕನಿಷ್ಠ ವೇತನ, ನಿವೃತ್ತಿ ಸೌಲಭ್ಯಗಳನ್ನು ನೀಡಬೇಕು ಎಂದು ಅವರು ಒತ್ತಾಯಿಸಿದರು.

3 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಉಚಿತ, ಕಡ್ಡಾಯ ಮತ್ತು ಸಾರ್ವತ್ರಿಕವಾಗಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಅಂಗನವಾಡಿ ಕೇಂದ್ರಗಳಲ್ಲಿಯೇ ಕೊಡಲು ಕಾನೂನು ರೂಪಿಸಬೇಕು. ಎನ್ಇಪಿ ನಿಲ್ಲಿಸಬೇಕು. ಅಂಗನವಾಡಿ, ಬಿಸಿಯೂಟ ನೌಕರರು, ಆಶಾ ಕಾರ್ಯಕರ್ತೆಯರಿಗೆ 31 ಸಾವಿರ ಕನಿಷ್ಠ ವೇತನ, 10 ಸಾವಿರ ಪಿಂಚಣಿ ಕೊಡಬೇಕು ಎಂದು ಅವರು ಆಗ್ರಹಿಸಿದರು.

ಕಾರ್ಯಕರ್ತೆಯರಿಗೆ ಹೊಸ ಮೊಬೈಲ್ ಗಳನ್ನು ಕೊಡಬೇಕು. ಪುಸ್ತಕದಲ್ಲಿ ಬರೆಯುವುದನ್ನು ನಿಲ್ಲಿಸಬೇಕು. ಚುನಾವಣೆ, ಸರ್ವೇ ಕೆಲಸಗಳಿಗೆ ನಿಯೋಜಿಸಬಾರದು. ಮಿನಿ ಅಂಗನವಾಡಿ ಕೇಂದ್ರಗಳನ್ನು ಪೂರ್ಣ ಅಂಗನವಾಡಿ ಕೇಂದ್ರಗಳಾಗಿ ಪರಿವರ್ತಿಸಬೇಕು. ಪೂರಕ ಪೌಷ್ಠಿಕ ಆಹಾರಕ್ಕೆ ಕೊಡುವ ಅನುದಾನವನ್ನು ಹೆಚ್ಚಿಸಬೇಕು. 2022ರ ಏಪ್ರಿಲ್ ಸುಪ್ರೀಂ ಕೋರ್ಟ್ ತೀರ್ಪಿನಂತೆ ಎಲ್ಲಾ ಅಂಗನವಾಡಿ ನೌಕರರನ್ನು ಉದ್ಯೋಗಸ್ಥರೆಂದು ಪರಿಗಣಿಸಿ ಗ್ರಾಜ್ಯುಟಿ ಕಾಯಿದೆಯನ್ನು ಜಾರಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕು. ಖಾಲಿ ಹುದ್ದೆಗಳನ್ನು 3 ತಿಂಗಳ ಒಳಗಡೆ ಭರ್ತಿ ಮಾಡದಿದ್ದರೆ ಹೆಚ್ಚುವರಿ ವೇತನ ಕೊಡಬೇಕು. ತಾತ್ಕಾಲಿಕ ಸಹಾಯಕಿ ನೇಮಕಕ್ಕೆ ಅನುಮತಿ ಕೊಡಬೇಕು. ಮುಂಗಡವಾಗಿ ಕರೆನ್ಸಿ ಹಣ, ಕೋಳಿಮೊಟ್ಟೆ, ಬಾಡಿಗೆ, ಗ್ಯಾಸ್, ತರಕಾರಿ, ಕಾಂಟೆಜಿನ್ಸಿ ಬಿಲ್ ಗಳನ್ನು ಹಾಕದೇ ಫಲಿತಾಂಶ ಕೇಳಬಾರದು ಎಂದು ಅವರು ಆಗ್ರಹಿಸಿದರು.

ಸಂಘದ ಜಿಲ್ಲಾಧ್ಯಕ್ಷೆ ಎಚ್.ಎಸ್. ಸುನಂದಾ, ಪ್ರಧಾನ ಕಾರ್ಯದರ್ಶಿ ಪುಷ್ಪಲತಾ, ಖಜಾಂಚಿ ಕಾರ್ಯದರ್ಶಿ, ಮುಖಂಡರಾದ ಕಾವೇರಮ್ಮ, ಲೀಲಾವತಿ, ಲತಾ, ಕಮಲಾಕ್ಷಿ, ಹೇಮಾವತಿ, ಮಂಗಳಗೌರಮ್ಮ, ಸಿಐಟಿಯುನ ಎನ್.ಕೆ. ಬಾಲಾಜಿ ರಾವ್, ಜಯರಾಂ ಮೊದಲಾದವರು ಇದ್ದರು.

----

ಬಾಕ್ಸ್...

-- ಸಂಸದರ ಕಚೇರಿ ಚಲೋಗೆ ಪೊಲೀಸರ ಅಡ್ಡಿ--

ಬಜೆಟ್ ನಲ್ಲಿ ಐಸಿಡಿಎಸ್ ಅನುದಾನ ಹೆಚ್ಚಳ ಮತ್ತು ಕನಿಷ್ಠ ವೇತನವನ್ನು ಘೋಷಿಸುವಂತೆ ಆಗ್ರಹಿಸಿ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ಜ.23 ರಿಂದ 25 ರವರೆಗೆ ಸಂಸದರ ಕಚೇರಿ ಚಲೋ ಆಯೋಜಿಸಿದ್ದು, ಅದರಂತೆ ಜಲದರ್ಶಿನಿ ಆವರಣದಲ್ಲಿರುವ ಸಂಸದ ಪ್ರತಾಪ್ ಸಿಂಹ ಕಚೇರಿ ಮುಂಭಾಗದಲ್ಲಿ ಪ್ರತಿಭಟಿಸಲು ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರು ಮಂಗಳವಾರ ಮುಂದಾದರು.

ಆದರೆ, ಪೊಲೀಸರು ಜಲದರ್ಶಿನಿ ಪ್ರವೇಶ ದ್ವಾರದ ಬಳಿಯೇ ಬ್ಯಾರಿಕೇಡ್ ಅಳವಡಿಸಿ ಪ್ರತಿಭಟನಾಕಾರರು ಒಳ ಬರದಂತೆ ತಡೆಯೊಡ್ಡಿದರು. ಹಳೆಯ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟಿಸಲು ಪೊಲೀಸರು ಅನುಮತಿ ನೀಡಿದರು. ಹೀಗಾಗಿ, ಸಂಸದರ ಕಚೇರಿ ಚಲೋ ಕೈಬಿಟ್ಟ ಸಂಘಟನೆಯ ನೂರಾರು ಮಂದಿ, ಹಳೆಯ ಜಿಲ್ಲಾಧಿಕಾರಿ ಕಚೇರಿ ಬಳಿಯೇ ಪ್ರತಿಭಟನೆ ಆರಂಭಿಸಿದರು.