ರಾಜ್ಯದ ಪಾರಂಪರಿಕ ಸ್ಥಳ, ಕಟ್ಟಡಗಳ ಸಂರಕ್ಷಣೆಗೆ ಅಗತ್ಯ ಕ್ರಮ: ಎ.ದೇವರಾಜು

| Published : Apr 19 2024, 01:08 AM IST

ರಾಜ್ಯದ ಪಾರಂಪರಿಕ ಸ್ಥಳ, ಕಟ್ಟಡಗಳ ಸಂರಕ್ಷಣೆಗೆ ಅಗತ್ಯ ಕ್ರಮ: ಎ.ದೇವರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚಿನ ವರ್ಷಗಳಲ್ಲಿ ಪ್ರಪಂಚದಾದ್ಯಂತ ಪಾರಂಪರಿಕ ಸ್ಥಳ, ಸ್ಮಾರಕ ಸಂರಕ್ಷಣೆ ಮಾಡುವ ಕಾರ್ಯ ನಡೆಸಲಾಗುತ್ತಿದೆ. ಶಾಸನಗಳ ಆಧಾರದ ಮೇಲೆ ಪಠ್ಯಕ್ರಮ ಹಾಗೂ ಪುಸ್ತಕ ರಚನೆ ಆಗುತ್ತಿದೆ. ಶಾಸನಗಳು ನಾಶವಾದರೆ ಇತಿಹಾಸ ನಾಶವಾದಂತೆ. ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರು ಶಾಸನ ಹಾಗೂ ಪ್ರಾಚ್ಯ ವಸ್ತುಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಪಾರಂಪರಿಕ ಸ್ಥಳ ಮತ್ತು ಕಟ್ಟಡಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತ ಎ. ದೇವರಾಜು ಹೇಳಿದರು.

ನಗರದ ದಸರಾ ವಸ್ತು ಪ್ರದರ್ಶನದ ಆವರಣದಲ್ಲಿನ ಪುರಾತತ್ವ, ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಪರಂಪರೆ ದಿನ ಹಾಗೂ ಶಿಲಾ ಶಾಸನಗಳ ಸಂರಕ್ಷಣೆ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಶಾಸನಗಳಿಂದ ಇತಿಹಾಸ ತಿಳಿಯಬಹುದು. ಹೊಸ ಹೊಸ ಶಾಸನಗಳು ಹೊಸ ವಿಚಾರಗಳನ್ನು ತಿಳಿಸುತ್ತದೆ. ಈ ಹಿನ್ನೆಲೆಯಲ್ಲಿ ಶಾಸನಗಳು ಹಾಗೂ ಪ್ರಾಚ್ಯ ವಸ್ತುಗಳ ಪ್ರಾಮುಖ್ಯತೆ ಹೊಂದಿದ್ದು, ಅವುಗಳ ಸಂರಕ್ಷಣೆಗೆ ಪುರಾತತ್ತ್ವ ಇಲಾಖೆಗೆ ಸಾರ್ವಜನಿಕರು ಕೈ ಜೋಡಿಸಬೇಕು ಎಂದು ಅವರು ಮನವಿ ಮಾಡಿದರು.

ಇತ್ತೀಚಿನ ವರ್ಷಗಳಲ್ಲಿ ಪ್ರಪಂಚದಾದ್ಯಂತ ಪಾರಂಪರಿಕ ಸ್ಥಳ, ಸ್ಮಾರಕ ಸಂರಕ್ಷಣೆ ಮಾಡುವ ಕಾರ್ಯ ನಡೆಸಲಾಗುತ್ತಿದೆ. ಶಾಸನಗಳ ಆಧಾರದ ಮೇಲೆ ಪಠ್ಯಕ್ರಮ ಹಾಗೂ ಪುಸ್ತಕ ರಚನೆ ಆಗುತ್ತಿದೆ. ಶಾಸನಗಳು ನಾಶವಾದರೆ ಇತಿಹಾಸ ನಾಶವಾದಂತೆ. ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕರು ಶಾಸನ ಹಾಗೂ ಪ್ರಾಚ್ಯ ವಸ್ತುಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ವಿದೇಶಗಳಲ್ಲಿ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿ ಸುಧಾರಣೆಗೆ ಹೆಚ್ಚಿನ ಆದ್ಯತೆ ನೀಡುವುದನ್ನು ಕಾಣಬಹುದು. ಆದರೆ ಭಾರತ ಹಾಗೂ ಕರ್ನಾಟಕದಲ್ಲಿ ಕಲೆ ಮತ್ತು ಸಂಸ್ಕೃತಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಯುವ ಪೀಳಿಗೆಗೆ ಇತಿಹಾಸ ತಿಳಿಸುವ ನಿಟ್ಟಿನಲ್ಲಿ ಶಾಸನಗಳ ಸಂರಕ್ಷಣೆ ಅಗತ್ಯ ಎಂದರು.

ರಾಜ್ಯದಲ್ಲಿ ಸುಮಾರು 844 ಸಂರಕ್ಷಿತ ಸ್ಮಾರಕಗಳಿವೆ. ದೇಶದಲ್ಲಿಯೇ ಹೆಚ್ಚು ಸ್ಮಾರಕ ಸಂರಕ್ಷಣೆ ಮಾಡಿದ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಈಗ ಶಾಸನಗಳನ್ನು ತ್ರಿಡಿ ತಂತ್ರಜ್ಞಾನದಲ್ಲಿ ಸ್ಕ್ಯಾನ್ ಮಾಡಿ ಸಂರಕ್ಷಣೆ ಮಾಡುವ ಹಾಗೂ ಡಿಜಿಟಲೀಕರಣ ಮಾಡುವ ಕಾರ್ಯದಲ್ಲಿ ತೊಡಗಿದ್ದು, ಇದುವರೆಗೂ 530 ಶಾಸನಗಳನ್ನು ಸ್ಕ್ಯಾನ್ ಮಾಡಿ ಸಂರಕ್ಷಿಸಲಾಗಿದೆ ಎಂದು ಅವರು ಹೇಳಿದರು.

ಪುರಾತತ್ವ ಇಲಾಖೆ ವತಿಯಿಂದ ಶಾಸನ ಸಂರಕ್ಷಣಾ ಯೋಜನೆ ಜಾರಿಗೊಳಿಸಿದ್ದು, ಅದರ ಮೂಲಕ ಗ್ರಾಮವಾರು ಸರ್ವೆ ಮಾಡಲಾಗುತ್ತದೆ. ಈ ಸರ್ವೆಯಲ್ಲಿ ಗುರುತಿಸದೇ ಇರುವ ಶಾಸನಗಳು, ಪ್ರಾಚ್ಯ ವಸ್ತುಗಳನ್ನು ಪತ್ತೆ ಹಚ್ಚಿ, ಸಂಶೋಧನೆ ನಡೆಸಲಾಗುವುದು. ಇದರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಶಾಸನಗಳು, ಪ್ರಾಚ್ಯ ವಸ್ತಗಳ ಸಂರಕ್ಷಣೆ ಮಾಡಿದಂತಾಗುತ್ತದೆ. ಅವುಗಳಿಂದ ಮಹತ್ತರ ಮಾಹಿತಿಯೂ ಲಭ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಶಾಸನ ಮತ್ತು ಪ್ರಾಚ್ಯ ವಸ್ತುಗಳ ಸಂರಕ್ಷಣೆಗಾಗಿ ದತ್ತು ಸ್ವೀಕಾರ ಯೋಜನೆಯನ್ನೂ ಜಾರಿಗೊಳಿಸಿದ್ದು, ಕಾರ್ಪೋರೇಟ್ ಸಂಸ್ಥೆಗಳಿಂದ ಸಿಎಸ್ಆರ್ ಫಂಡ್ ಬಳಸಿ ಶಾಸನ, ಪ್ರಾಚ್ಯ ವಸ್ತುಗಳ ಸಂರಕ್ಷಿಸುವ ಕಾರ್ಯಕ್ರಮಕ್ಕೂ ಇಲಾಖೆ ಮುಂದಾಗಿದೆ ಎಂದರು.

ರಾಜ್ಯದಲ್ಲಿ 16 ವಸ್ತು ಸಂಗ್ರಹಾಲಯಗಳಿದ್ದು, ಅವುಗಳ ವೆಬ್ ಸೈಟ್ ನಲ್ಲಿ ಒಂದು ವೇಳೆ ಶಾಸನಗಳು ನಾಶವಾದರೂ ಅವುಗಳಲ್ಲಿನ ಮಾಹಿತಿ ಸಂರಕ್ಷಿಸುವ ನಿಟ್ಟಿನಲ್ಲಿ ಡಿಜಿಟಲೀರಣ ಕಾರ್ಯ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಅವರು ತಿಳಿಸಿದರು.

ಬೇಲೂರು, ಹಳೇಬೀಡು ಹಾಗೂ ಸೋಮನಾಥಪುರವನ್ನು ವಿಶ್ವ ಪಾರಂಪರಿಕ ತಾಣವಾಗಿ ವಿಶ್ವಸಂಸ್ಥೆ ಘೋಷಿಸಿದೆ. ಈ ಮ ಊರು ಸ್ಥಳವೂ ವಿಶ್ವ ಪ್ರವಾಸೋದ್ಯಮದಲ್ಲಿ ಗುರುತಿಸಿಕೊಂಡಿದೆ. ವಿಶ್ವದಲ್ಲಿನ 1,199 ಪಾರಂಪರಿಕ ಸ್ಥಳಗಳಿದ್ದು, ಅವುಗಳಲ್ಲಿ 52 ಸ್ಥಳ ಭಾರತದಲ್ಲೂ, ಈ ಪೈಕಿ 4 ಸ್ಥಳ ಕರ್ನಾಟಕದಲ್ಲಿವೆ. ವಿಶ್ವ ಪಾರಂಪರಿಕ ಸ್ಥಳಗಳು ಹೆಚ್ಚಾಗಿ ಗುರುತಿಸಿಕೊಳ್ಳುತ್ತಿದ್ದಂತೆ ಪ್ರವಾಸಿಗರ ಆಗಮನದ ಸಂಖ್ಯೆಯೂ ಹೆಚ್ಚಾಗುತ್ತದೆ ಎಂದು ಅವರು ಹೇಳಿದರು.

ಪ್ರವಾಸೋದ್ಯಮ ಅಭಿವೃದ್ಧಿಯಾದರೆ ಉದ್ಯೋಗಾವಕಾಶ ಹೆಚ್ಚುತ್ತದೆ. ಪ್ರವಾಸೋದ್ಯಮವನ್ನೇ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅವಲಂಬಿಸಿದವರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಎಂದರು.

ಕರ್ನಾಟಕ ರಾಜ್ಯ ಮುಕ್ತ ವಿವಿ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಶಲ್ವಪಿಳ್ಳೆ ಅಯ್ಯಂಗಾರ್ ಮಾತನಾಡಿ, ಇತಿಹಾಸ ರಚನೆಗೆ ಎರಡು ಶಾಸನಗಳೇ ಆಧಾರ. ಇವುಗಳೇ ಮೂಲ ದಾಖಲೆಯಾಗಿವೆ. ಈ ಹಿಂದೆ ರಾಜರ ಆಳ್ವಿಕೆ ಕಾಲದಲ್ಲಿ ಅಂದಿನ ಪರಿಸ್ಥಿತಿ, ಸಮಾಜದಲ್ಲಿ ಆಚರಣೆ, ಆಡಳಿತ ಸೇರಿದಂತೆ ಇನ್ನಿತರ ಅಂಶಗಳುಳ್ಳ ಮಾಹಿತಿಯನ್ನು ಶಾಸನಗಳಲ್ಲಿ ನಮೂದಿಸಲಾಗುತ್ತಿತ್ತು. ಶಾಸನಗಳಿಂದ ಸಾಕಷ್ಟು ಅನುಮಾನಗಳು ಈಡೇರಿವೆ ಎಂದರು.

ಈ ವೇಳೆ ಪುರಾತತ್ವ ಸಂರಕ್ಷಣಾ ಎಂಜಿನಿಯರ್ ಪುಟ್ಟಸ್ವಾಮಿ, ಸಿದ್ಧಾರ್ಥನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.