ನಗರದಲ್ಲಿ 27 ಸ್ಲಂ ಪ್ರದೇಶಗಳಿದ್ದು, ಕೆಲವೆಡೆ ಹಕ್ಕುಪತ್ರಗಳೊಂದಿಗೆ ಮನೆಗಳನ್ನು ನಿರ್ಮಿಸಲಾಗಿದೆ

ಗಂಗಾವತಿ:ಅಗತ್ಯ ದಾಖಲೆಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿದರೆ, ಕಾಲಮಿತಿಯೊಳಗೆ ಕೊಳಗೇರಿ ಪ್ರದೇಶ ಘೋಷಿಸಲಾಗುವುದು ಎಂದು ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಹೇಳಿದರು.

ನಗರದ ನೀಲಕಂಠೇಶ್ವರ ಕ್ಯಾಂಪ್‌ನಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಾಣವಾದ ಮನೆಗಳನ್ನು ವೀಕ್ಷಿಸಿ ಅವರು ಮಾತನಾಡಿದರು. ನಗರದಲ್ಲಿ 27 ಸ್ಲಂ ಪ್ರದೇಶಗಳಿದ್ದು, ಕೆಲವೆಡೆ ಹಕ್ಕುಪತ್ರಗಳೊಂದಿಗೆ ಮನೆಗಳನ್ನು ನಿರ್ಮಿಸಲಾಗಿದೆ. ಇನ್ನೂ ಕೆಲವು ಪ್ರದೇಶಗಳನ್ನು ಕೊಳಚೆ ಪ್ರದೇಶಗಳನ್ನಾಗಿ ಘೋಷಿಸಬೇಕಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕೆಲವು ತಾಂತ್ರಿಕ ಕಾರಣಗಳಿಗೆ ನನೆಗುದಿಗೆ ಬಿದ್ದಿದೆ. ಮಂಡಳಿಯಿಂದ ಒಂದು ಸಾವಿರ ಮನೆಗಳನ್ನು ನಿರ್ಮಿಸುವ ಗುರಿಯಿದ್ದು, ಈಗಾಗಲೇ 800 ಮನೆಗಳನ್ನು ನಿರ್ಮಿಸಲಾಗಿದೆ. ರಾಜ್ಯದಾದ್ಯಂತ 1.80 ಲಕ್ಷ ಮನೆಗಳ ಪೈಕಿ ಈಗಾಗಲೇ ಮೊದಲ ಹಂತದಲ್ಲಿ ಒಂದು ಲಕ್ಷ ಮನೆಗಳನ್ನು ನಿರ್ಮಿಸಿ, ಜನರಿಗೆ ಹಸ್ತಾಂತರಿಸಲಾಗಿದೆ. ಕೊಳಚೆ ಪ್ರದೇಶದಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿರುವ ಜನರಿಗೆ ಹಕ್ಕುಪತ್ರ ವಿತರಣೆ ಕಾರ್ಯವೂ ಮುಂದುವರಿದಿದೆ ಎಂದರು.

ಪರಿಶೀಲನೆ: ಕೊಳಗೇರಿ ಪ್ರದೇಶದಲ್ಲಿ ಇತ್ತೀಚಿಗೆ ವಿತರಿಸಲಾದ ಹಕ್ಕುಪತ್ರಗಳ ಮನೆಗಳ ಕಾಲನಿಗೆ ಭೇಟಿ ನೀಡಿ ವಾಸ್ತವಾಂಶ ಪರಿಶೀಲಿಸಿದರು. ಜೈಭೀಮನಗರ, ನೀಲಕಂಠೇಶ್ವರ, ಅಮರಭಗತ್ ಸಿಂಗ್ ನಗರ ಸೇರಿ ವಿವಿಧೆಡೆ ತೆರಳಿ ಜನರಿಂದ ಅಭಿಪ್ರಾಯ ಸಂಗ್ರಹಿಸಿದರು. ಈ ವೇಳೆ ನಗರಸಭೆ ಮಾಜಿ ಸದಸ್ಯ ಎಫ್. ರಾಘವೇಂದ್ರ, ಕೊಳಗೇರಿ ಅಭಿವೃದ್ಧಿ ಮಂಡಳಿ ಇಇ ಪ್ರವೀಣ, ಎಇಇ ಮಂಜುನಾಥ, ಮುಖಂಡರಾದ ಅಜಯಕುಮಾರ, ದೊಡ್ಡಭೋಜಪ್ಪ ಇತರರಿದ್ದರು.

ಕಲಿತ ಶಾಲೆಗೆ ಭೇಟಿ, ಅಭಿವೃದ್ಧಿ ಪಣ: ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ನಗರದ ಹಿರೇಜಂತಕಲ್ ಸ.ಹಿ.ಪ್ರಾ. ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದು, ಕಲಿತ ಶಾಲೆ ಅಭಿಮಾನದಿಂದ ಶಾಲೆಗೆ ಭೇಟಿ ನೀಡಿ, ಅಭಿವೃದ್ಧಿ ಕುರಿತು ಎಸ್‌ಡಿಎಂಸಿ ಮತ್ತು ಶಿಕ್ಷಕರೊಂದಿಗೆ ಸಭೆ ನಡೆಸಿದರು. ಶಾಲಾಭಿವೃದ್ಧಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ಅಜಯ್‌ಸಿಂಗ್‌ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಒಂದು ಕೋಟಿ ರು. ಅನುದಾನ ಮಂಜೂರು ಮಾಡಿಸಿದರು. ಅದರಂತೆ ಸಿಎಂ ನಿಧಿಯಿಂದ ₹2 ಕೋಟಿ ಅನುದಾನ ಮಂಜೂರಿಗೆ ಭರವಸೆ ನೀಡಿದರು. ಶಾಲೆಯ 75ನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಣೆ ಕುರಿತು ಚರ್ಚಿಸಲಾಯಿತು. ತರಗತಿ ಕೊಠಡಿಗೆ ತೆರಳಿ ಮಕ್ಕಳ ಕಲಿಕಾಗುಣಮಟ್ಟ ಪರಿಶೀಲಿಸಿದರು. ನಗರಸಭೆ ಮಾಜಿ ಸದಸ್ಯರಾದ ಹುಲಿಗೆಮ್ಮ ಕಿರಿಕಿರಿ, ಹುಸೇನಪ್ಪ ಹಂಚಿನಾಳ್, ಎಸ್‌ಡಿಎಂಸಿ ಅಧ್ಯಕ್ಷ ಜಡಿಯಪ್ಪ, ಮುಖಂಡರಾದ ರಮೇಶ ಮಾಗಿ, ಹುಸೇನಪ್ಪ, ಪರಶುರಾಮ ಕಿರಿಕಿರಿ, ಮುಖ್ಯಶಿಕ್ಷಕ ತಿಪ್ಪವ್ವ ಉಳ್ಳಟ್ಟಿ ಇತರರಿದ್ದರು.