ನೀರಿನ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ: ಶಾಸಕ ಆರ್‌.ವಿ. ದೇಶಪಾಂಡೆ

| Published : Mar 24 2024, 01:32 AM IST

ಸಾರಾಂಶ

ಗ್ರಾಮಾಂತರ ಭಾಗದಲ್ಲಿ ಕೊಳವೆ ಬಾವಿಗಳ ಮೂಲಕ ನೀರನ್ನು ಪೂರೈಸಲು ಸರ್ಕಾರ ಅನುದಾನ ಮಂಜೂರು ಮಾಡಿದೆ.

ಹಳಿಯಾಳ: ಕ್ಷೇತ್ರದಲ್ಲಿ ನೀರಿನ ಸಮಸ್ಯೆಯು ಎದುರಾಗದಂತೆ ಸೂಕ್ತ ಕ್ರಮ ಕೈಗೊಳ್ಳಲು ಮೂರು ತಾಲೂಕುಗಳ ತಹಸೀಲ್ದಾರಗಳಿಗೆ ಸೂಚಿಸಿದ್ದು, ಪ್ರಗತಿ ಪರಿಶೀಲನಾ ಸಭೆಯಲ್ಲಿ ಸೂಕ್ತ ನಿರ್ದೇಶನಗಳನ್ನು ನೀಡಿದ್ದೇನೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದೆಲ್ಲೆಡೆ ಕುಡಿಯುವ ನೀರಿನ ಅಭಾವ ಉಂಟಾಗಿದ್ದು, ರಾಜ್ಯ ಸರ್ಕಾರ ಎಲ್ಲೆಲ್ಲಿ ನೀರಿನ ಸಮಸ್ಯೆ ಎದುರಾಗಿದೆ, ಅಲ್ಲಿ ತಕ್ಷಣ ಸಮರೋಪಾದಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಆದೇಶಿಸಿದೆ ಎಂದರು.

ನೀರಿಗಾಗಿ ಅನುದಾನವಿದೆ: ಗ್ರಾಮಾಂತರ ಭಾಗದಲ್ಲಿ ಕೊಳವೆ ಬಾವಿಗಳ ಮೂಲಕ ನೀರನ್ನು ಪೂರೈಸಲು ಸರ್ಕಾರ ಅನುದಾನ ಮಂಜೂರು ಮಾಡಿದೆ. ಹಳಿಯಾಳ ತಹಸೀಲ್ದಾರರ ಬಳಿ ₹50 ಲಕ್ಷ ಅನುದಾನವಿದ್ದು, ಗ್ರಾಮೀಣ ನೀರು ಸರಬರಾಜು ಇಲಾಖೆಯು ₹46 ಲಕ್ಷ ವೆಚ್ಚದ ಕ್ರಿಯಾಯೋಜನೆಯನ್ನು ಸಲ್ಲಿಸಿದೆ. ದಾಂಡೇಲಿ ತಾಲೂಕಿಗೆ ₹50 ಲಕ್ಷ ಅನುದಾನವಿದ್ದು, ಅಲ್ಲಿ ₹25 ಲಕ್ಷ ವೆಚ್ಚದ ಕ್ರಿಯಾಯೋಜನೆಯನ್ನು ಸಲ್ಲಿಸಲಾಗಿದೆ. ಜೋಯಿಡಾ ತಾಲೂಕಿಗೆ ₹50 ಲಕ್ಷ ಅನುದಾನವಿದ್ದು, ಅಲ್ಲಿ ₹46 ಲಕ್ಷ ವೆಚ್ಚದ ಕ್ರಿಯಾಯೋಜನೆಯನ್ನು ಸಲ್ಲಿಸಲಾಗಿದೆ ಎಂದರು.

ಗ್ರಾಮಾಂತರ ಭಾಗದಲ್ಲಿ ಎಲ್ಲಿಯೂ ನೀರಿನ ಸಮಸ್ಯೆ ಎದುರಾಗಬಾರದು, ಅದಕ್ಕಾಗಿ ಆಯಾ ತಾಲೂಕಾಡಳಿತವು ಹೆಚ್ಚಿನ ಆಸಕ್ತಿ ವಹಿಸಿ ನೀರಿನ ಸಮಸ್ಯೆಯನ್ನು ಎದುರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದರು.

ಈಗಾಗಲೇ ಗ್ರಾಮಾಂತರ ಭಾಗದಲ್ಲಿ ನೀರಿನ ಸಮಸ್ಯೆ ಎದುರಾದ ಗ್ರಾಮಗಳಲ್ಲಿ ಖಾಸಗಿ ಕೊಳವೆ ಬಾವಿಗಳಿಂದ ನೀರನ್ನು ಪೂರೈಸಲಾಗುತ್ತಿದೆ ಎಂದರು.

ಅಕಾಡೆಮಿಗಳಲ್ಲಿ ಜಿಲ್ಲೆಗೆ ಅನ್ಯಾಯ: ರಾಜ್ಯ ಸರ್ಕಾರ ವಿವಿಧ 18 ಅಕಾಡೆಮಿಗಳ ನೂತನ ಸದಸ್ಯರನ್ನು ಹಾಗೂ ಅಧ್ಯಕ್ಷರ ಹೆಸರನ್ನು ಘೋಷಿಸಿದ್ದು, ಆದರೆ ಈ ಅಕಾಡೆಮಿಗಳಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಸೂಕ್ತ ಪ್ರಾತಿನಿಧ್ಯ ಕೊಡದೇ ಅನ್ಯಾಯವೆಸಗಲಾಗಿದೆ ಎಂದು ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದರು.

ಉತ್ತರ ಕನ್ನಡ ಜಿಲ್ಲೆಯು ವಿಭಿನ್ನ ಸಂಸ್ಕೃತಿ, ಕಲೆ, ಸಂಪ್ರದಾಯಗಳ ಸಂಗಮವಾಗಿದ್ದು, ಜಿಲ್ಲೆಯಲ್ಲಿನ ಬುಡಕಟ್ಟು, ಜನಪದ ಕಲೆ, ಸಂಪ್ರದಾಯಗಳು ವಿಶಿಷ್ಟವಾಗಿವೆ. ಸಾಹಿತ್ಯ, ಕಲೆ, ಪತ್ರಿಕೋದ್ಯಮ, ಸಂಗೀತ, ಯಕ್ಷಗಾನ ಮುಂತಾದ ಕಲೆಗಳ ತವರೂರಾಗಿದೆ. ಹೀಗಿರುವಾಗ ಅಕಾಡೆಮಿಗಳಿಗೆ ಜಿಲ್ಲೆಯ ಬೆರಳಣಿಕೆಯಷ್ಟು ಸದಸ್ಯರಿಗೆ ಪ್ರಾತಿನಿಧ್ಯ ನೀಡಿ ಅನ್ಯಾಯವೆಸಗಲಾಗಿದೆ. ಅದಕ್ಕಾಗಿ ಜಿಲ್ಲೆಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಗಮನದಲ್ಲಿಟ್ಟುಕೊಂಡು ನ್ಯಾಯಬದ್ಧವಾಗಿ ದೊರೆಯಬೇಕಾಗಿದ್ದ ಸ್ಥಾನಮಾನ ನೀಡಬೇಕು. ಅಕಾಡೆಮಿಗಳ ಆದೇಶಗಳನ್ನು ಪುನರ್ ಪರಿಶೀಲಿಸಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಿಗೆ ಪತ್ರ ಬರೆದಿದ್ದೇನೆ ಎಂದರು.

ಹೋಳಿ ನೋಡಿ ಆಡಿ: ಹೋಳಿ ಬಣ್ಣದ ಹಬ್ಬ. ಅದನ್ನು ಆಡುವಾಗ ಸುರಕ್ಷತೆಗೆ ಹೆಚ್ಚಿನ ಗಮನ ಕೊಡಿ. ಪರೀಕ್ಷೆಗಳು ಆರಂಭಗೊಂಡಿದ್ದು, ಪರೀಕ್ಷೆಗೆ ತೆರಳುವ ಮಕ್ಕಳ ಮೇಲೆ ಬಣ್ಣ ಬಳಸಬೇಡಿ ಎಂದರು. ತುಳಜಾಭವಾನಿ ದೇವಸ್ಥಾನದ ಪ್ರತಿಷ್ಠಾವರ್ಧಂತಿ ಮಹೋತ್ಸವವು ಏ. 6ರಂದು ನಡೆಯಲಿದ್ದು, ಸರ್ವರೂ ಮಹೋತ್ಸವದಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗಬೇಕೆಂದರು.