ಕನ್ನಡಪ್ರಭ ವಾರ್ತೆ ಪಾಂಡವಪುರ
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಅಗತ್ಯವಿರುವ ಅನುದಾನವನ್ನು ಶ್ರೀಬಾಲಭೈರಶ್ವರ ಎಜುಕೇಷನಲ್ ಚಾರಿಟಬಲ್ ಟ್ರಸ್ಟ್‌ನಿಂದ ಒದಗಿಸಲಾಗುವುದು. ಶಿಕ್ಷಕರು ಮತ್ತು ಗ್ರಾಮಸ್ಥರು ಸದ್ಬಳಕೆ ಮಾಡಿಕೊಂಡು ಮಕ್ಕಳ ದಾಖಲಾತಿ ಹೆಚ್ಚಿಸಿ ಶಾಲೆಗಳ ಉಳಿವಿಗೆ ಮುಂದಾಗಬೇಕು ಎಂದು ಟ್ರಸ್ಟ್‌ನ ಅಧ್ಯಕ್ಷ, ವಕೀಲ ಅರವಿಂದ್ ರಾಘವನ್ ಹೇಳಿದರು.ತಾಲೂಕಿನ ಡಾಮಡಹಳ್ಳಿ, ಗಿರಿಯಾರಹಳ್ಳಿ, ಚಲುವರಸನಕೊಪ್ಪಲು, ಮಾಣಿಕ್ಯನಹಳ್ಳಿ, ಗೌಡಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಜಕ್ಕನಹಳ್ಳಿ ಸರ್ಕಾರಿ ಪ್ರೌಢ ಶಾಲೆಗಳಿಗೆ ಭೇಟಿ ನೀಡಿ ವಿವಿಧ ಸಲಕರಣೆಗಳ ಖರೀದಿಗೆ ಧನ ಸಹಾಯ ವಿತರಿಸಿ ಮಾತನಾಡಿದರು.
ಕಳೆದ 2006ರಿಂದ ತಾಲೂಕಿನ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನಮ್ಮ ಟ್ರಸ್ಟ್‌ನಿಂದ ಸಾಕಷ್ಟು ಅನುದಾನ ನೀಡಲಾಗಿದೆ. ಈವರೆಗೆ ಒಟ್ಟು 85ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಹಾಗೂ 156ಕ್ಕೆ ಹೆಚ್ಚು ಅಂಗನವಾಡಿ ಕೇಂದ್ರಗಳನ್ನು ಅನುದಾನ ಒದಗಿಸಲಾಗಿದೆ ಎಂದರು.ಅಲ್ಲದೇ, ಮತ್ತಷ್ಟು ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಗೆ ಅನುದಾನ ಒದಗಿಸುವಂತೆ ಮನವಿ ಬಂದಿವೆ. ಮುಂದಿನ ದಿನಗಳಲ್ಲಿ ಅವುಗಳ ಅಭಿವೃದ್ಧಿಗೂ ಟ್ರಸ್ಟ್‌ನಿಂದ ಅನುದಾನ ಒದಗಿಸಲಾಗುವುದು ಎಂದರು.
ತಾಲೂಕಿನ ಸಣಬ, ಮಾಣಿಕ್ಯಹಳ್ಳಿ, ಗೌಡಗೆರೆ, ಸೇರಿದಂತೆ ಇತರೆ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಿಂತಲೂ ಮಿಗಿಲಾಗಿ ಅಭಿವೃದ್ಧಿ ಪಡಿಸಲಾಗಿದೆ. ಜಕ್ಕನಹಳ್ಳಿ ಪ್ರೌಢಶಾಲೆಯಲ್ಲಿ ಬ್ಯಾಂಡ್ ಸೆಟ್ ಮತ್ತು ಆಟದ ಸಾಮಗ್ರಿಗಳಿಗೆ ಧನ ಸಹಾಯ ಮಾಡಿ ಮತ್ತಷ್ಟು ಧನ ಸಹಾಯ ನೀಡಲಾಗುತ್ತದೆ. ಗ್ರಾಮಸ್ಥರು, ಶಿಕ್ಷಕರು ಸರ್ಕಾರಿ ಶಾಲೆಗಳ ಬಲವರ್ಧನೆಗೆ ಕೈ ಜೋಡಿಸುವಂತೆ ಮನವಿ ಮಾಡಿದರು.
ಸರ್ಕಾರಿ ಶಾಲೆಗಳ ಉಳಿವಿಗೆ ಪ್ರತಿ ಗ್ರಾಮಗಳಲ್ಲೂ ಗ್ರಾಮಸ್ಥರಿಂದ ಹಣ ಸಂಗ್ರಹ ಅಭಿಯಾನ ಆರಂಭಿಸಲಾಗಿದೆ. ಗ್ರಾಮಸ್ಥರು 100 ರು. ಗಿಂತಲೂ ಹೆಚ್ಚಿನ ಹಣ ಸಂಗ್ರಹ ಮಾಡಿದರೆ ಆ ಹಣದ ಜತೆಗೆ ನಮ್ಮ ಟ್ರಸ್ಟ್‌ನಿಂದ ಹೆಚ್ಚಿನ ಹಣ ಒದಗಿಸಿ ಶಾಲೆ ಅಭಿವೃದ್ಧಿಗೆ ಮುಂದಾಗುತ್ತೇವೆ. ಈ ಕುರಿತು ಅನ್ಯಥಾ ಭಾವಿಸಬಾರದು ಎಂದರು.
ಈ ವೇಳೆ ತಾಲೂಕಿನ ಗಿರಿಯಾರಹಳ್ಳಿ ಸರ್ಕಾರಿ ಶಾಲೆ ಶಿಕ್ಷಕರು ಹಾಗೂ ಗ್ರಾಮಸ್ಥರು ಸ್ಥಳದಲ್ಲೇ 37 ಸಾವಿರಕ್ಕೂ ಹೆಚ್ಚು ಹಣ ಸಂಗ್ರಹಿಸಿದರು. ಅದೇ ರೀತಿ ಡಾಮಡಹಳ್ಳಿ ಸರ್ಕಾರಿ ಶಾಲೆ ಶಿಕ್ಷಕರು, ಗ್ರಾಮಸ್ಥರು ಸ್ಥಳದಲ್ಲೇ 4 ಸಾವಿರಕ್ಕೂ ಹೆಚ್ಚು ಹಣ ಸಂಗ್ರಹಿಸಿದರು. ಬಳಿಕ ಗೌಡಗೆರೆ ಸರ್ಕಾರಿ ಶಾಲೆ ಶಿಕ್ಷಕರು, ಗ್ರಾಮಸ್ಥರು ಸ್ಥಳದಲ್ಲೇ 45 ಸಾವಿರಕ್ಕೂ ಹೆಚ್ಚು ಹಣವನ್ನು ಸಂಗ್ರಹಿಸಿ ಅಭಿಯಾನಕ್ಕೆ ಸಹಕರಿಸಿದರು.ಈ ವೇಳೆ ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಎನ್.ಕೆಂಪೇಗೌಡ, ಮಾಜಿ ಅಧ್ಯಕ್ಷ ಎಂ.ಡಿ.ಮರಿಸ್ವಾಮಿಗೌಡ, ಜಕ್ಕನಹಳ್ಳಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಆರ್.ಸಿ.ನಾಗೇಗೌಡ, ಹರವು ಶಾಲೆ ಶಿಕ್ಷಕ ಡಿ.ಶಿವಣ್ಣ, ಗೌಡಗೆರೆ ಶಾಲೆ ಶಿಕ್ಷಕ ವೆಂಕಟೇಶ್, ಚಲುವರಸನಕೊಪ್ಪಲು ಶಾಲೆ ಶಿಕ್ಷಕ ಕುಮಾರ್, ಮುಖಂಡರಾದ ಡಾಮಡಹಳ್ಳಿ ಸ್ವಾಮಿಗೌಡ, ಪ್ರಭು, ಗೌಡಗೆರೆ ರಮೇಶ್, ಮಧು ಬಿ.ಗೌಡ, ಸರ್ಕಾರಿ ಶಾಲೆ-ನಮ್ಮವ್ವ ಪಾದಯಾತ್ರೆ ರೂವಾರಿ ಸಂತೋಷ್ (ಮಂಡ್ಯಗೌಡ), ಎಸ್ ಡಿಎಂಸಿ ಅಧ್ಯಕ್ಷರು, ಸದಸ್ಯರು, ಶಿಕ್ಷಕರು ಇತರರಿದ್ದರು.