ರಾಮನಗರ: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಫೆ.8ರಿಂದ 11ರವರೆಗೆ ಕನಕಪುರ ತಾಲೂಕಿನ ಬೊಮ್ಮಸಂದ್ರ ಗ್ರಾಮದ ಬಳಿ ಹರಿಯುವ ಕಾವೇರಿ ನದಿ ದಾಟಿ ಮಲೈ ಮಹದೇಶ್ವರಸ್ವಾಮಿ ಬೆಟ್ಟಕ್ಕೆ ಪಾದಯಾತ್ರೆ ಕೈಗೊಳ್ಳುವ ಭಕ್ತಾದಿಗಳಿಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು

ರಾಮನಗರ: ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಫೆ.8ರಿಂದ 11ರವರೆಗೆ ಕನಕಪುರ ತಾಲೂಕಿನ ಬೊಮ್ಮಸಂದ್ರ ಗ್ರಾಮದ ಬಳಿ ಹರಿಯುವ ಕಾವೇರಿ ನದಿ ದಾಟಿ ಮಲೈ ಮಹದೇಶ್ವರಸ್ವಾಮಿ ಬೆಟ್ಟಕ್ಕೆ ಪಾದಯಾತ್ರೆ ಕೈಗೊಳ್ಳುವ ಭಕ್ತಾದಿಗಳಿಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಲೈ ಮಹದೇಶ್ವರ ಬೆಟ್ಟಕ್ಕೆ ಭಕ್ತಾದಿಗಳು ಪಾದಯಾತ್ರೆ ಸಂದರ್ಭದಲ್ಲಿ ಮುನ್ನೆಚ್ಚರಿಕಾ ಕ್ರಮಗಳ ಚರ್ಚಿಸಲು ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು, ಭಕ್ತಾದಿಗಳು ಪಾದಯಾತ್ರೆ ಕೈಗೊಳ್ಳುವ ದಿನಗಳಲ್ಲಿ ಕೆಆರ್‌ಎಸ್, ಕಬಿನಿ, ಶಿಂಷಾ ಜಲಾಶಯ ಹಾಗೂ ಇತರೆ ಮೂಲಗಳಿಂದ ಬರುವ ನೀರಿನ ಪ್ರಮಾಣ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ಮೋಹನ್ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ನೇಮಿಸಿದ ಜಿಲ್ಲಾಧಿಕಾರಿಯವರು ಫೆ.8ರಿಂದ 11ರವರೆಗೆ ನದಿ ನೀರಿನ ಪ್ರಮಾಣ ಗರಿಷ್ಠ 3 1/2 ಅಡಿ ಮೀರದಂತೆ ಸಂಬಂಧಿಸಿದ ಅಧಿಕಾರಿಗಳ ಸಮನ್ವಯದೊಂದಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಪಾದಯಾತ್ರೆಯಲ್ಲಿ ಭಕ್ತಾದಿಗಳ ಭದ್ರತೆಗಾಗಿ ಹಾಗೂ ನದಿ ದಾಟುವ ಸಂದರ್ಭದಲ್ಲಿ ನೂಕು ನುಗ್ಗಲು ಉಂಟಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಅಗತ್ಯ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು. ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಲ್ಲಿ ಕೂಡಲೇ ರಕ್ಷಣಾ ಕಾರ್ಯ ಕೈಗೊಳ್ಳಲು ಎಸ್‌ಡಿಆರ್‌ಎಫ್‌ ತಂಡವನ್ನು ಫೆ.8ರಂದು ಬೆಳಿಗ್ಗೆ 8ರಿಂದ ಫೆ.11ರವರೆಗೆ ನಿಯೋಜಿಸುಂತೆ ಎಎಸ್ಪಿ ರಾಮಚಂದ್ರಯ್ಯ ಅವರಿಗೆ ಜಿಲ್ಲಾಧಿಕಾರಿ ನಿರ್ದೇಶಿಸಿದರು.

ಪಾದಯಾತ್ರೆ ಮಾರ್ಗದಲ್ಲಿ ಕಾಡು ಪ್ರಾಣಿಗಳಿಂದ ರಕ್ಷಣೆ ಒದಗಿಸಲು ಅಗತ್ಯ ಅರಣ್ಯ ಸಿಬ್ಬಂದಿಯನ್ನು ನಿಯೋಜಿಸಬೇಕು. ಸಂಜೆ 5.30ರ ನಂತರ ಕಾಡು ಮಾರ್ಗದಲ್ಲಿ ಭಕ್ತರ ಪ್ರವೇಶ ನಿರ್ಬಂಧಿಸುವಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಕಾವೇರಿ ವನ್ಯಜೀವಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ನಿರ್ದೇಶಿಸಿ, ವನ್ಯ ಪ್ರಾಣಿಗಳ ಸಂಚಾರ ನಿಗಾ ವಹಿಸಲು ಡ್ರೋನ್ ಕ್ಯಾಮರಾ ಬಳಸುವಂತೆ ಸೂಚಿಸಿದರು.

ರಕ್ಷಣಾ ಕಾರ್ಯ ಹಾಗೂ ಅರಣ್ಯ ಬೆಂಕಿ ನಿಯಂತ್ರಿಸಲು ಅಗ್ನಿಶಾಮಕ ವಾಹನ, ಮೋಟಾರ್ ಬೋಟ್ ಹಾಗೂ ಅಗತ್ಯ ಸಿಬ್ಬಂದಿಗಳನ್ನು ಸ್ಥಳದಲ್ಲಿ ನಿಯೋಜಿಸಬೇಕು. ಆಂಬ್ಯುಲೆನ್ಸ್, ಔಷಧಿ, 24 ಗಂಟೆ ಲಭ್ಯವಿರುವ ವೈದ್ಯರು, ಆರೋಗ್ಯ ಸಿಬ್ಬಂದಿಗಳನ್ನು ಸ್ಥಳದಲ್ಲಿ ನಿಯೋಜಿಸುವಂತೆ ಹಾಗೂ ಮುಖ್ಯವಾಗಿ ಮುಂಜಾಗ್ರತಾ ಕ್ರಮವಾಗಿ ತುರ್ತು ಸಂದರ್ಭಗಳಲ್ಲಿ ಸಮೀಪದ ಆಸ್ಪತ್ರೆಗೆ ಏರ್‌ ಲಿಫ್ಟ್ ಮೂಲಕ ಸಾಗಿಸಲು ಏರ್‌ ಲಿಫ್ಟ್ ಸಂಸ್ಥೆಯ ಮಾಹಿತಿ ಸಂಗ್ರಹಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.

ಈ ಮಾರ್ಗಗಳಲ್ಲಿ ಅಗತ್ಯ ಲೈಟಿಂಗ್ ವ್ಯವಸ್ಥೆ ಕಲ್ಪಿಸುವಂತೆ ಕನಕಪುರ ವಿಭಾಗದ ಬೆಸ್ಕಾಂ ಕಾರ್ಯಪಾಲಕ ಅಭಿಯಂತರರಿಗೆ ತಿಳಿಸಿದ ಯಶವಂತ್, ಪಾದಯಾತ್ರೆ ಮಾರ್ಗದಲ್ಲಿ ಸ್ವಚ್ಛತೆ ಕಾಪಾಡಲು ಸಿಬ್ಬಂದಿ ನಿಯೋಜಿಸುವಂತೆ ಹಾಗೂ ಪಾದಯಾತ್ರಿಗಳಿಗೆ ಅರಿವು ಮೂಡಿಸುವ ಉದ್ದೇಶಕ್ಕೆ ಧ್ವನಿವರ್ಧಕಗಳನ್ನು ಅಳವಡಿಸುವಂತೆ ತಾಪಂ ಇಒಗೆ ತಿಳಿಸಿದರು.

ಪ್ರಮುಖವಾಗಿ ಸ್ಥಳೀಯ ನುರಿತ ಐವರು ಈಜುಗಾರರನ್ನು ಸ್ಥಳದಲ್ಲಿರಿಸಬೇಕು. ನದಿ ದಡದಲ್ಲಿ ಯಾವುದೇ ಅಂಗಡಿ, ಮುಂಗಟ್ಟುಗಳನ್ನು ಹಾಕದಂತೆ ಕ್ರಮ ಕೈಗೊಳ್ಳಬೇಕೆಂದು ಪಿಡಿಒಗೆ ಸೂಚಿಸಿದರು.

ಪಾದಯಾತ್ರೆ ಸಂದರ್ಭದಲ್ಲಿ ಭಕ್ತಾಧಿಗಳಿಗೆ ಅಗ್ನಿಶಾಮಕ ಇಲಾಖೆ ಹಾಗೂ ಅರಣ್ಯ ಇಲಾಖೆಯ ಸಮನ್ವಯದೊಂದಿಗೆ ನದಿ ದಾಟಲು ಸೂಕ್ತ ಮಾರ್ಗ ಗುರುತಿಸಿ, ಉತ್ತಮ ರೋಪ್ ವ್ಯವಸ್ಥೆ ಕಲ್ಪಿಸುವಂತೆ ತಹಸೀಲ್ದಾರ್ ಸಂಜಯ್‌ ಗೆ ತಿಳಿಸಿದರು.

ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ಧನರಾಜ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಿರಂಜನ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಮಂಜುನಾಥ್, ಮುಖಂಡರಾದ ಏಳಗಳ್ಳಿ ರವಿ, ಉಯ್ಯಂಬಳ್ಳಿ ಗ್ರಾಪಂ ಅಧ್ಯಕ್ಷರು ಹಾಗೂ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

4ಕೆಆರ್ ಎಂಎನ್ 10.ಜೆಪಿಜಿ

ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್.