ನಾಗ್ಪುರದ ದೀಕ್ಷಾ ಭೂಮಿ ಸಮಾರಂಭಕ್ಕೆ ತೆರಳಲು ಅಗತ್ಯ ಸಿದ್ಧತೆ

| Published : Sep 30 2024, 01:16 AM IST

ನಾಗ್ಪುರದ ದೀಕ್ಷಾ ಭೂಮಿ ಸಮಾರಂಭಕ್ಕೆ ತೆರಳಲು ಅಗತ್ಯ ಸಿದ್ಧತೆ
Share this Article
  • FB
  • TW
  • Linkdin
  • Email

ಸಾರಾಂಶ

ನಾಗ್ಪುರದ ತ್ರಿಮೂರ್ತಿ ಸರ್ಕಲ್ ಬಾಗೇನದಲ್ಲಿ ವಾಸ್ತವ್ಯ, ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಎರಡು ದಿನ ಕಾರ್ಯಕ್ರಮ ಜರುಗುತ್ತದೆ. ಬಾಬಾಸಾಹೇಬ ಅಂಬೇಡ್ಕರ ಮೊಮ್ಮಗ ಭೀಮರಾವ್ ಯಶವಂತ ಅಂಬೇಡ್ಕರ ಅವರನ್ನು ಆಹ್ವಾನಿಸಲಾಗಿದೆ.

ಮುಂಡಗೋಡ: ಪ್ರತಿ ವರ್ಷದಂತೆ ಈ ಬಾರಿಯೂ ನಾಗ್ಪುರದಲ್ಲಿ ನಡೆಯುವ ದೀಕ್ಷೆ ಭೂಮಿಯ ಸಮಾರಂಭಕ್ಕೆ ಕರ್ನಾಟಕದಿಂದ ಹೋಗುವ ಬೌದ್ಧ ಮತ್ತು ಅಂಬೇಡ್ಕರ ಅನುಯಾಯಿಗಳಿಗೆ ವಾಸ್ತವ್ಯ, ಉಪಾಹಾರದ ವ್ಯವಸ್ಥೆ ಸೇರಿದಂತೆ ಸಕಲ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಭಾರತೀಯ ಬೌದ್ಧ ಮಹಾಸಭಾದ ರಾಜ್ಯ ಯುವ ಘಟಕದ ಅಧ್ಯಕ್ಷ ದರ್ಶನ ಸೋಮಶೇಖರ ತಿಳಿಸಿದರು.

ಭಾನುವಾರ ಪಟ್ಟಣದ ನಗರಸಭಾ ಭವನದಲ್ಲಿ ಸಭೆಯಲ್ಲಿ ಮಾತನಾಡಿ, ರಾಜ್ಯದ ಪ್ರತಿ ಜಿಲ್ಲೆಯಿಂದ ಸರ್ಕಾರ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಿದೆ. ನಾಗ್ಪುರದಲ್ಲಿ ರಾಜ್ಯದ ಅನುಯಾಯಿಗಳಿಗೆ ಏನಾದರೂ ತೊಂದರೆಯಾದರೆ ಕರ್ನಾಟಕ ಬಿಎಸ್‌ಐ ಪದಾಧಿಕಾರಿಗಳನ್ನು ಸಂರ್ಪಕಿಸಬೇಕು. ನಾಗ್ಪುರದ ತ್ರಿಮೂರ್ತಿ ಸರ್ಕಲ್ ಬಾಗೇನದಲ್ಲಿ ವಾಸ್ತವ್ಯ, ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಎರಡು ದಿನ ಕಾರ್ಯಕ್ರಮ ಜರುಗುತ್ತದೆ. ಬಾಬಾಸಾಹೇಬ ಅಂಬೇಡ್ಕರ ಮೊಮ್ಮಗ ಭೀಮರಾವ್ ಯಶವಂತ ಅಂಬೇಡ್ಕರ ಅವರನ್ನು ಆಹ್ವಾನಿಸಲಾಗಿದೆ.

ಇದು ಮೊದಲನೇ ಬಾರಿ ಬಿಎಸ್‌ಐ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದೇಶದ ಯಾವ ರಾಜ್ಯದಲ್ಲಿಯೂ ಈ ರೀತಿ ಮಾಡಿಲ್ಲ. ಈ ಕೆಲಸವನ್ನು ರಾಜ್ಯದ ಯುವಕರಾದ ನಾವು ಮಾಡುತ್ತಿದ್ದು, ಕರ್ನಾಟಕವನ್ನು ಮಾಡೆಲ್ ಆಗಿ ಮಾಡುತ್ತೇವೆ. ಕಾರ್ಯಕ್ರಮಕ್ಕೆ ಲಕ್ಷಾಂತರ ಜನ ಸೇರುತ್ತಾರೆ ಎಂಬ ನಂಬಿಕೆ ಇದೆ. ರಾಜ್ಯದ ಜನರು ಸಹಕಾರ ನೀಡಬೇಕೆಂದರು. ಬೌದ್ಧ ಸಾಹಿತಿ ಬಿ.ಆರ್. ಕೃಷ್ಣಯ್ಯ ಮಾತನಾಡಿ, ಬಾಬಾ ಸಾಹೇಬ ಅಂಬೇಡ್ಕರ ಅವರು ಮಹಾಗ್ರಂಥ ಸಂವಿಧಾನ ನೀಡಿದ್ದರಿಂದ ನಾವು ದೇಶದಲ್ಲಿ ನಿರಾಳವಾಗಿ ಬದುಕಲು ಅವಕಾಶವಾಗಿದೆ. ಕರಾವಳಿ ಭಾಗದಲ್ಲಿ ಬೌದ್ಧ ತತ್ವವನ್ನು ಎಲ್ಲ ಜನಾಂಗ ಅಳವಡಿಸಿಕೊಂಡಿದ್ದಾರೆ. ಆ ಕಾರಣಕ್ಕೆ ಎಲ್ಲರೂ ಈ ಭಾಗದಲ್ಲಿ ತುಂಬ ಖುಷಿಯಿಂದ ಜೀವನ ನಡೆಸುತ್ತಿದ್ದಾರೆ. ಇದಕ್ಕೆ ಕಾರಣ ಬೌದ್ಧನ ತತ್ವಗಳು. ಅಂಬೇಡ್ಕರ ಕೊಟ್ಟಿರುವ ಆ ಬೌದ್ಧ ಧರ್ಮದ ಪುಣ್ಯ ಸ್ಥಳವನ್ನು ರಾಜ್ಯದ ಯುವ ಸಮುದಾಯ ಆ ಸ್ಥಳಕ್ಕೆ ಹೋಗುವ ಮೂಲಕ ಬಿಎಸ್‌ಐ ಯುವ ಘಟಕ ಆಯೋಜಿಸಿದ ಕಾರ್ಯಕ್ರಮ ಸದಪಯೋಗ ಪಡೆದುಕೊಳ್ಳಬೇಕು ಎಂದರು.ಪೂಜ್ಯ ಕಮಲ್ ರತ್ನ ಬಂತೇಜಿ ಮಾತನಾಡಿ, ಅಂಬೇಡ್ಕರ್ ಅವರು ಆಯ್ಕೆ ಮಾಡಿದ್ದ ಸ್ಥಳದಲ್ಲಿ ಭಾರತೀಯ ಬೌದ್ಧ ಮಹಾಸಭಾದ ರಾಜ್ಯ ಯುವ ಘಟಕವು ವಾಸ್ತವ್ಯ, ಉಪಾಹಾರದ ವ್ಯವಸ್ಥೆ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಿದೆ. ಇದು ಯುವ ಜನತೆಗೆ ಮಾದರಿ ಎಂದರು. ನ್ಯಾಯವಾದಿ ಲಕ್ಷ್ಮಣ ಮಾತನಾಡಿದರು. ಮುಖಂಡರಾದ ಗೋಪಿ ಬಳ್ಳಾರಿ, ಮಲ್ಲಿಕಾರ್ಜುನ್ ಬಳ್ಳಾರಿ, ನಾಗಸೇನ್ ಮೌರ್ಯ, ಚಂದ್ರಕಾಂತ್ ಕಲಾಬಾವಿ, ಮಹಿಳಾ ಘಟಕದ ಮುಖಂಡರಾದ ರೇಣುಕಾ ಗೋರಿಮಟ್ಟಿ, ಶಾಂತಾ ಹೊಸೂರು, ಉದಯ್ ಚಲವಾದಿ, ಲಿಂಗರಾಜ್ ಪಾರ್ವತ, ನಾಗರಾಜ್ ಚಲವಾದಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.