ಸಾರಾಂಶ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರದಲ್ಲಿ ನೇಕಾರರು ಉತ್ಪಾದಿಸಿ ಜವಳಿ ಉತ್ಪನ್ನಗಳಿಗೆ ಸ್ಥಳೀಯ ಮಾರುಕಟ್ಟೆ ಹಾಗೂ ಕೌಶಲ್ಯಾಧಾರಿತ ತರಬೇತಿ ಒದಗಿಸುವ ನಿಟ್ಟಿನಲ್ಲಿ ನೇಕಾರ ಭವನ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಧೀರಜ್ ಮುನಿರಾಜ್ ತಿಳಿಸಿದರು.
ಇಲ್ಲಿನ ತಾಲೂಕು ಕಚೇರಿ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿದ್ದ ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಗರದ ಡಿ ಕ್ರಾಸ್ ಬಳಿಯಲ್ಲಿ ಗುರುತಿಸಲಾಗಿರುವ ಸ್ಥಳವನ್ನು ಈ ಹಿಂದೆ ರೇಷ್ಮೆ ಇಲಾಖೆಗೆ ಹಸ್ತಾಂತರಿಸಿದ್ದು, ಅದನ್ನು ಜವಳಿ ಇಲಾಖೆಗೆ ವರ್ಗಾಯಿಸುವ ಪ್ರಕ್ರಿಯೆ ನಡೆಯುತ್ತಿದೆ. ಜವಳಿ ಇಲಾಖೆಗೆ ಹಸ್ತಾಂತರವಾದ ಕೂಡಲೇ ಭವನ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸಲಾಗುವುದು. ಬೆಳಗಾವಿಯಲ್ಲಿ ರಾಜ್ಯದ ಮೊದಲ ನೇಕಾರ ಭವನ ಲೋಕಾರ್ಪಣೆಗೊಂಡಿದ್ದು, ದಕ್ಷಿಣ ಕರ್ನಾಟಕದ ಮೊದಲ ನೇಕಾರ ಭವನ ದೊಡ್ಡಬಳ್ಳಾಪುರದಲ್ಲೇ ನಿರ್ಮಾಣವಾಗಬೇಕು ಎಂಬುದು ತಮ್ಮ ಆಶಯವಾಗಿದೆ ಎಂದು ತಿಳಿಸಿದರು.ನೇಕಾರ ಸಮುದಾಯದ ಎಲ್ಲ ಉಪಪಂಗಡಗಳನ್ನೂ ಒಳಗೊಂಡಂತೆ ನೇಕಾರ ಅಭಿವೃದ್ಧಿ ನಿಗಮವನ್ನು ಕಳೆದ ಸರ್ಕಾರ ಘೋಷಣೆ ಮಾಡಿದ್ದು, ಈವರೆಗೆ ಸಮರ್ಪಕ ಅನುದಾನ ಲಭಿಸಿಲ್ಲ. ಮುಂಬರುವ ದಿನಗಳಲ್ಲಿ ನಿಗಮವನ್ನು ರಚನಾತ್ಮಕವಾಗಿ ಬೆಳೆಸುವ ಅಗತ್ಯವಿದೆ. ದೇವರ ದಾಸಿಮಯ್ಯನವರ ಚಿಂತನೆಗಳಿಗೆ ಪೂರಕವಾಗಿ ಸಮಾಜದಲ್ಲಿ ಸಶಕ್ತ ಭಾವನೆಗಳನ್ನು ಬಿತ್ತಬೇಕಿದೆ ಎಂದು ಹೇಳಿದರು.
ದಾಸಿಮಯ್ಯ ಸಂಶೋಧನಾತ್ಮಕ ಅಧ್ಯಯನ ಅಗತ್ಯ:ಪ್ರೊ.ರವಿಕಿರಣ್ ಮಾತನಾಡಿ, ವಚನ ಸಾಹಿತ್ಯದ ಪ್ರವರ್ತಕ ಎಂದೇ ಗುರುತಿಸಲ್ಪಡುವ ದೇವರ ದಾಸಿಮಯ್ಯ ಜನಭಾಷೆಯ ಮೂಲಕ ಬದುಕಿನ ನೈಜ ಸಂವೇದನೆಗಳು ಮತ್ತು ಮಹತ್ವವನ್ನು ಸಾರಿದ ದಾರ್ಶನಿಕ. ಮಾನವೀಯ ಸಂಬಂಧಗಳು, ಆಧ್ಯಾತ್ಮಿಕ ಚಿಂತನೆ ಹಾಗೂ ಸಾಹಿತ್ಯದ ಗಟ್ಟಿತನವನ್ನು ಪ್ರತಿಪಾದಿಸಿದ ಶರಣರಾಗಿದ್ದಾರೆ. ರಾಜ್ಯದ ಕಲಬುರಗಿ ವಿಶ್ವವಿದ್ಯಾಲಯದಲ್ಲಿ ಸ್ಥಾಪನೆಯಾಗಿರುವ ದೇವರ ದಾಸಿಮಯ್ಯ ಅಧ್ಯಯನ ಪೀಠ ರಚನಾತ್ಮಕವಾಗಿ ಕಾರ್ಯನಿರ್ವಹಿಸುವ ಮೂಲಕ ಅಧ್ಯಯನಗಳಿಗೆ ಮುಂದಾಗಬೇಕು. ಬಸವಪೂರ್ವ ಯುಗದ ವಚನ ಸಾಹಿತ್ಯದ ಗಂಭೀರ ಅಧ್ಯಯನ ನಡೆಯಬೇಕು ಎಂದು ತಿಳಿಸಿದರು.
ಸತಿ-ಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ ಎಂಬ ಮಾತಿನ ಮೂಲಕ ದಾಂಪತ್ಯದ ಅನನ್ಯತೆಯನ್ನು ಆಧ್ಯಾತ್ಮಿಕ ಮಹತ್ವದೊಂದಿಗೆ ಸಾರಿ ಹೇಳಿದ್ದಾರೆ. ಹಸಿವಿನ ತೀವ್ರತೆಯನ್ನು ತನ್ನ ವಚನದಲ್ಲಿ ಹೇಳಿರುವ ದಾಸಿಮಯ್ಯ, ತೀಕ್ಷ್ಣ ಸಂಕಷ್ಟವಾದ ಹಸಿವನ್ನು ನಿವಾರಿಸಿ, ಅನ್ನವನ್ನು ದಯಪಾಲಿಸಿದವನೇ ನಿಜವಾದ ದೈವ ಎಂದು ಕರೆದಿದ್ದಾನೆ. ಪ್ರಕೃತಿ ಮತ್ತು ಪಾರಮಾರ್ಥಿಕ ಚಿಂತನೆಗಳನ್ನು ಸಮೀಕರಿಸುವ ಮೂಲಕ ವಿಸ್ಮಯಗಳ ಬೆರಗುಗಳಿಗೆ ಮುಖಾಮುಖಿಯಾಗಿರುವುದು ವಿಶೇಷವಾಗಿದೆ ಎಂದರು.ದೇವಾಂಗ ಮಂಡಲಿ ಗೌರವ ಕಾರ್ಯದರ್ಶಿ ಪ್ರೊ.ಎಂ.ಜಿ.ಅಮರನಾಥ್ ಮಾತನಾಡಿ, ದೇವಾಂಗ ಹಾಗೂ ನೇಕಾರ ಸಮುದಾಯದ ಸಂತ ದೇವರ ದಾಸಿಮಯ್ಯ ಹುಣಸಗಿ ತಾಲೂಕಿನ ಮುದನೂರು ಗ್ರಾಮದಲ್ಲಿ 11ನೇ ಶತಮಾನದಲ್ಲಿ ಬದುಕಿದ್ದ ದಾರ್ಶನಿಕರು. ಒಬ್ಬ ಆಧ್ಯಾತ್ಮಿಕ ವ್ಯಕ್ತಿಯಾಗಿ, ನೇಕಾರನಾಗಿ, ವಚನಕಾರನಾಗಿ ಸಾಮಾಜಿಕ ವಿಮರ್ಶೆಯನ್ನು ತನ್ನದೇ ಆದ ರೀತಿಯಲ್ಲಿ ನಿರ್ವಹಿಸಿದ ಮಹನೀಯರು. ಅವರ ಆದರ್ಶಗಳ ಪಾಲನೆ ಎಲ್ಲರ ಕರ್ತವ್ಯವಾಗಬೇಕು ಎಂದರು.
ದೇವಾಂಗದ ಸಂಕಣ್ಣನವರ ಚಾರಿಟಬಲ್ ಟ್ರಸ್ಟ್‌ನ ನಾಗರಾಜ್ ಮಾತನಾಡಿ, ಮುಂಬರುವ ದಿನಗಳಲ್ಲಿ ದಾಸಿಮಯ್ಯ ಜಯಂತಿಯನ್ನು ಮತ್ತಷ್ಟು ಸಂಭ್ರಮದಿಂದ ಆಚರಿಸುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.ತಹಸೀಲ್ದಾರ್ ವಿಭಾ ವಿದ್ಯಾರಾಥೋಡ್, ನಗರಸಭೆ ಮಾಜಿ ಅಧ್ಯಕ್ಷರಾದ ಸುಧಾರಾಣಿ, ಮುದ್ದಪ್ಪ, ನಗರಸಭೆ ಸದಸ್ಯರಾದ ಲಕ್ಷ್ಮೀಪತಿ, ಅಖಿಲೇಶ್, ವತ್ಸಲ, ಮಹಿಳಾ ಸಮಾಜದ ಎಂ.ಕೆ.ವತ್ಸಲ, ದರ್ಗಾಜೋಗಿಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ನಾಗೇಶ್, ದೇವಾಂಗ ಮಂಡಲಿ ಉಪಾಧ್ಯಕ್ಷರಾದ ಬಿ.ಜಿ.ಅಮರನಾಥ್, ಗೋಪಾಲ್, ಸಹಕಾರ್ಯದರ್ಶಿ ಎ.ನಟರಾಜ್, ದೇವರ ದಾಸಿಮಯ್ಯ ಮಿತ್ರ ಮಂಡಲಿ ನೇಕಾರರ ಸಂಘದ ಅಧ್ಯಕ್ಷ ರಾಮಮೂರ್ತಿ ಸೇರಿದಂತೆ ದೇವಾಂಗ, ಪದ್ಮಶಾಲಿ, ತೊಗಟವೀರ ಸಮುದಾಯಗಳ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.2ಕೆಡಿಬಿಪಿ1- ದೊಡ್ಡಬಳ್ಳಾಪುರ ತಾಲೂಕು ಆಡಳಿತದ ನೇತೃತ್ವದಲ್ಲಿ ಆಯೋಜಿಸಿದ್ದ ಆದ್ಯವಚನಕಾರ ದೇವರ ದಾಸಿಮಯ್ಯ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶಾಸಕ ಧೀರಜ್ ಮುನಿರಾಜ್ ಮತ್ತಿತರರು ಪಾಲ್ಗೊಂಡಿದ್ದರು.