ಸ್ವರ್ಣಾಂಬ ಬಡಾವಣೆಯಲ್ಲಿ ಮನೆ ನಿರ್ಮಿಸಿಕೊಳ್ಳಲು ಅಗತ್ಯಕ್ರಮ: ಭಂಡಾರಿ ಶ್ರೀನಿವಾಸ್

| Published : Jun 29 2025, 01:32 AM IST

ಸ್ವರ್ಣಾಂಬ ಬಡಾವಣೆಯಲ್ಲಿ ಮನೆ ನಿರ್ಮಿಸಿಕೊಳ್ಳಲು ಅಗತ್ಯಕ್ರಮ: ಭಂಡಾರಿ ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರುಆಶ್ರಯ ಯೋಜನೆಯಡಿ ಪಟ್ಟಣದ ಪುರಸಭೆ ವ್ಯಾಪ್ತಿಗೆ ಬರುವ ಸ್ವರ್ಣಾಂಬ ಬಡಾವಣೆಯಲ್ಲಿ ಹಕ್ಕುಪತ್ರ ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಳ್ಳಲು ಪುರಸಭೆಯಿಂದ ಅಗತ್ಯಕ್ರಮ ವಹಿಸಲಾಗುವುದು ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.

ಕನ್ನಡಪ್ರಭ ವಾರ್ತೆ, ಕಡೂರು

ಆಶ್ರಯ ಯೋಜನೆಯಡಿ ಪಟ್ಟಣದ ಪುರಸಭೆ ವ್ಯಾಪ್ತಿಗೆ ಬರುವ ಸ್ವರ್ಣಾಂಬ ಬಡಾವಣೆಯಲ್ಲಿ ಹಕ್ಕುಪತ್ರ ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಳ್ಳಲು ಪುರಸಭೆಯಿಂದ ಅಗತ್ಯಕ್ರಮ ವಹಿಸಲಾಗುವುದು ಎಂದು ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.

ಪಟ್ಟಣದ ಕನಕ ಸಭಾಂಗಣದಲ್ಲಿ ನಡೆದ ಪುರಸಭೆ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ 1996ರಲ್ಲಿ ಅಂದಿನ ಪುರಸಭೆ ಆಡಳಿತ 28 ಜನ ಫಲಾನುಭವಿಗಳಿಗೆ ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆ ಮಾಡಲು ಪಟ್ಟಣದ ಹೊರ ವಲಯದ ಮಲ್ಲೇಶ್ವರ ಗ್ರಾಮ ವ್ಯಾಪ್ತಿಯಲ್ಲಿ ಖಾಸಾಗಿಯವರ ಜಮೀನು ಖರೀದಿಸಿ ಬಡಾವಣೆ ನಿರ್ಮಿಸಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ನಿವೇಶನದ ಹಕ್ಕುದಾರ ಫಲಾನುಭವಿಗಳು ಬಡಾವಣೆ ಅಭಿವೃದ್ಧಿಗೆ ಬೆಂಬಲವಾಗಿ ನಿಲ್ಲಬೇಕು ಎಂದು ಪುರಸಭೆಗೆ ಮನವಿ ಸಲ್ಲಿಸಿದ್ದಾರೆ ಎಂದರು.

ಇತ್ತೀಚೆಗೆ ಫಲಾನುಭವಿಗಳು ಅಲ್ಲಿ ಮನೆ ನಿರ್ಮಿಸಲು ಮುಂದಾದಾಗ ಪುರಸಭೆಗೆ ಜಮೀನು ಮಾರಾಟ ಮಾಡಿದ್ದವರು ಅಡ್ಡಿಪಡಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣ ನ್ಯಾಯಾಲಯದಲ್ಲಿ ಖುಲಾಸೆಯಾಗಿ ಪುರಸಭೆ ಪರ ತೀರ್ಪು ಬಂದಿದೆ. ಅವರ ನ್ಯಾಯಯುತ ಬೇಡಿಕೆ ಈಡೇರಿಸಲು ಸಭೆಯಲ್ಲಿ ಸರ್ವಾನುಮತದ ತೀರ್ಮಾನ ಕೈಗೊಂಡರು.

ಕಡೂರು ಪಟ್ಟಣದ ಶ್ರೀ ಪೇಟೆ ಗಣಪತಿ ಆಂಜನೇಯ ಸ್ವಾಮಿ ದೇವಸ್ಥಾನದ ರಸ್ತೆ ವಿಸ್ತರಣೆಗೊಂಡಿದ್ದು, ದೇವಾಲಯದ ಬದಿಯಲ್ಲಿ ಶ್ರೀ ಗುರು ರೇವಣ ಸಿದ್ದೇಶ್ವರ ವೃತ್ತ ನಿರ್ಮಿಸುವ ಚರ್ಚಿತ ವಿಷಯಕ್ಕೆ ಒಮ್ಮತದಿಂದ ಸಭೆ ಅಂಗೀಕರಿಸಿತು.

ಸದಸ್ಯ ಈರಳ್ಳಿ ರಮೇಶ್ ಮಾತನಾಡಿ, ಪಟ್ಟಣದ ಕಲ್ಲುಹೊಳೆ ರಸ್ತೆ, ದೊಡ್ಡಪೇಟೆ, ಸಿದ್ದನಾಯ್ಕನ ಬೀದಿ ಮತ್ತು ಲಕ್ಷ್ಮಿ ಆಸ್ಪತ್ರೆ ರಸ್ತೆಗಳ ಅಭಿವೃದ್ಧಿಗೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ನಮ್ಮ ಮನವಿಗೆ ಯಾವುದೇ ಬೆಲೆ ಇಲ್ಲ... ಈ ರಸ್ತೆಗಳ ಅಭಿವೃದ್ಧಿಗೆ ನಗರೋತ್ಥಾನ ಯೋಜನೆಯಡಿ ಕಾಮಗಾರಿ ಮಂಜೂರಾದರೂ ಕೆಲಸ ಮಾಡಿಲ್ಲ ಎಂದು ದೂರಿದರು.

ಮತ್ತೋರ್ವ ಸದಸ್ಯ ತೋಟದಮನೆ ಮೋಹನ್ ಮಾತನಾಡಿ, ಪುರಸಭೆ ಆಡಳಿತ ತಮಗೆ ಬೇಕಾದ ಕೆಲ ಸದಸ್ಯರ ವಾರ್ಡುಗ ಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ಉಳಿದ ಸದಸ್ಯರ ವಾರ್ಡುಗಳ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ. ಇಂತಹ ಧೋರಣೆ ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಾರ್ಡುಗಳಲ್ಲಿ ನಡೆಯುತ್ತಿರುವ ಯಾವುದೇ ಕಾಮಗಾರಿ ಬಗ್ಗೆ ನಮಗೆ ಮಾಹಿತಿಯೇ ಇಲ್ಲ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಸಂಭಂಧಿಸಿದ ವಾರ್ಡಿನ ಸದಸ್ಯರ ಗಮನಕ್ಕೆ ತಾರದೆ ಕೆಲಸ ಮಾಡುವುದು ಸಮಂಜಸವಲ್ಲ ಎಂದು ಸದಸ್ಯೆ ಹಾಲಮ್ಮ ದೂರಿದರು.

ಕೋಟೆ ಬಡಾವಣೆಯಲ್ಲಿ ನೀರಿನ ಸಂಪರ್ಕಕ್ಕೆ ಪೈಪ್ ಲೈನ್ ಅಳವಡಿಸಲು ಕಾಮಗಾರಿ ನಿರ್ವಹಿಸಿ ತಿಂಗಳಾದರೂ ಸಂಪೂರ್ಣ ವಾಗಿಲ್ಲ. ಅನೇಕ ಭಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಬಗೆಹರಿಸಿಲ್ಲ ಎಂದು ಸದಸ್ಯ ಸೈಯ್ಯದ್ ಯಾಸೀನ್ ಪುರಸಭೆ ಎಂಜಿನಿಯರ್ ಮೇಲೆ ಅಕ್ರೋಶ ವ್ಯಕ್ತಪಡಿಸಿದರು.

ಸದಸ್ಯೆ ಜ್ಯೋತಿ ಆನಂದ್‌, ಪಟ್ಟಣದ 21 ನೇ ವಾರ್ಡಿನಲ್ಲಿ ಕಿರಿದಾದ ರಸ್ತೆಗಳಿದ್ದು ಅಲ್ಲಿನ ನಿವಾಸಿಗಳು ರಸ್ತೆಯಲ್ಲಿಯೇ ಕುರಿ, ಎಮ್ಮೆ, ಜಾನುವಾರುಗಳನ್ನು ಕಟ್ಟಿ ಪರಿಸರ ಹಾಳು ಮಾಡುತ್ತಿದ್ದಾರೆ. ಇದರಿಂದ ಜನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಸಾಕಷ್ಟು ಭಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಕೂಡಲೇ ಕ್ರಮ ವಹಿಸುವಂತೆ ಒತ್ತಾಯಿಸಿದರು.

ಸದಸ್ಯರ ಹಲವು ಪ್ರಶ್ನೆ, ಆರೋಪಗಳಿಗೆ ಪ್ರತಿಕ್ರಿಯಿಸಿದ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಪುರಸಭೆಯ ಲಭ್ಯ ಅನುದಾನದಲ್ಲಿ ಪಟ್ಟಣದ ಅನೇಕ ವಾರ್ಡುಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ, ಇದಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸುತ್ತಿದ್ದು. ಯಾವುದೇ ತಾರತಮ್ಯದ ಪ್ರಶ್ನೆ ಇಲ್ಲ. ಕ್ಷೇತ್ರದ ಶಾಸಕರ ಬಳಿ ಅಭಿವೃದ್ಧಿ ಕಾರ್ಯಗಳಿಗೆ ₹5 ಕೋಟಿ ಅನುದಾನದ ಬೇಡಿಕೆಗೆ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ಈ ಅನುದಾನದಲ್ಲಿ ಪ್ರತಿ ವಾರ್ಡಿಗೆ ಕನಿಷ್ಠ ₹15 ಲಕ್ಷ ಅನುದಾನ ಮೀಸಲಿಡಲಾಗುವುದು. ಸದಸ್ಯರು ತುರ್ತು ಅಥವಾ ಪ್ರಮುಖ ಎನಿಸಿದ ಅಭಿವೃದ್ಧಿ ಕಾರ್ಯಗಳಿಗೆ ಈ ಅನುದಾನ ಬಳಸಿ ಕೊಳ್ಳಬಹುದು ಎಂದರು.

ಸಭೆಯಲ್ಲಿ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಮುಖ್ಯಾಧಿಕಾರಿ ಕೆ.ಎಸ್. ಮಂಜುನಾಥ್, ಸದಸ್ಯರಾದ ಜಿ.ಸೋಮಯ್ಯ, ಸುಧಾ ಉಮೇಶ್, ಮರುಗುದ್ದಿ ಮನು, ಗೋವಿಂದ, ಮಂಡಿ ಇಕ್ಬಾಲ್, ನಾಮ ನಿರ್ದೇಶಿತ ಸದಸ್ಯರಾದ ವಿನಯ್ ದಂಡಾವತಿ, ಕಡೂರು ದೇವೇಂದ್ರ, ಕೃಷ್ಣಪ್ಪ ಇದ್ದರು.

28ಕೆಕೆೆಡಿಯು1.ಕಡೂರು ಪುರಸಭೆಯ ಕನಕ ಸಭಾಂಗಣದಲ್ಲಿ ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.