ರಾಮನಗರ: ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ಕಳೆದ 7 ತಿಂಗಳಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆ ಸೇರಿದಂತೆ ರಾಜ್ಯದ 15 ಜಿಲ್ಲೆಗಳ ಪ್ರವಾಸ ಕೈಗೊಂಡು ಅಲ್ಲಿ ಅಹವಾಲು ಸ್ವೀಕರಿಸಿ, ಅಲ್ಲಿನ ಜನರ ಸಮಸ್ಯೆಗಳನ್ನು ಗಂಭೀರವಾಗಿ ಪರಿಶೀಲನೆ ನಡೆಸಿದ್ದು, ಈ ಕುರಿತ ಆಯೋಗದ ವರದಿಯನ್ನು ಮುಂಬರುವ 15 ದಿನಗಳೊಳಗೆ ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ಆಯೋಗದ ಅಧ್ಯಕ್ಷ ಡಾ.ಎಲ್.ಮೂರ್ತಿ ಹೇಳಿದರು

ರಾಮನಗರ: ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ಕಳೆದ 7 ತಿಂಗಳಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆ ಸೇರಿದಂತೆ ರಾಜ್ಯದ 15 ಜಿಲ್ಲೆಗಳ ಪ್ರವಾಸ ಕೈಗೊಂಡು ಅಲ್ಲಿ ಅಹವಾಲು ಸ್ವೀಕರಿಸಿ, ಅಲ್ಲಿನ ಜನರ ಸಮಸ್ಯೆಗಳನ್ನು ಗಂಭೀರವಾಗಿ ಪರಿಶೀಲನೆ ನಡೆಸಿದ್ದು, ಈ ಕುರಿತ ಆಯೋಗದ ವರದಿಯನ್ನು ಮುಂಬರುವ 15 ದಿನಗಳೊಳಗೆ ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ಆಯೋಗದ ಅಧ್ಯಕ್ಷ ಡಾ.ಎಲ್.ಮೂರ್ತಿ ಹೇಳಿದರು.

ನಗರದ ಜಿಪಂ ಸಭಾಂಗಣದಲ್ಲಿ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗದಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಆಯೋಗ ರಾಜ್ಯದಲ್ಲಿ ಪ್ರವಾಸ ಕೈಗೊಂಡು ವಿವಿಧ ಜಿಲ್ಲೆಗಳಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡ ಜನರ ಸಮಸ್ಯೆಗಳನ್ನು ತಿಳಿದುಕೊಂಡು ಅವುಗಳನ್ನು ಬಗೆಹರಿಸಲು ಶ್ರಮಿಸುತ್ತಿದೆ. ಈ ದಿಸೆಯಲ್ಲಿ ಬೆಂಗಳೂರು ದಕ್ಷಿಣ 15ನೇ ಜಿಲ್ಲೆಯಾಗಿದೆ. ಇನ್ನೊಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡ ಬಳಿಕ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.

ಇಲ್ಲಿ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟು ಜನರಿಂದ ಸಮಸ್ಯೆಗಳನ್ನು ಆಲಿಸಿ, ಅಹವಾಲುಗಳನ್ನು ಸ್ವೀಕರಿಸಿ ಅವುಗಳನ್ನು ಅವಲೋಕನ ಮಾಡಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಅವುಗಳನ್ನು ಕಳುಹಿಸಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಸಮಸ್ಯೆಗಳಿಗೆ ಸಂಬಂಧಿಸಿದಂತೆ ಅರ್ಜಿದಾರರಿಗೆ ದೂರವಾಣಿ ಕರೆ ಮೂಲಕವೂ ಮಾಹಿತಿ ನೀಡಲಾಗುವುದು. ಅಹವಾಲುದಾರರು ಸಂಬಂಧಿಸಿದ ಇಲಾಖೆಗೆ ಆಯೋಗ ನೀಡುವ ಪ್ರತಿಯನ್ನು ತೋರಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಅದಾಗ್ಯೂ ಈ ಸಮಸ್ಯೆಗಳು ಬಗೆಹರಿಯದಿದ್ದಲ್ಲಿ ಮುಂದಿನ ಒಂದೂವರೆ ತಿಂಗಳೊಳಗೆ ಮತ್ತೊಮ್ಮೆ ಆಯೋಗ ಸಭೆ ನಡೆಸಲಿದೆ ಎಂದು ತಿಳಿಸಿದರು.

ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ ಎಂಬುದನ್ನು ಅರಿತು ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು. ಆಯೋಗ ಜಿಲ್ಲೆಯ ಹಿರಿಯ ಅಧಿಕಾರಿಗಳಿಗೆ ಕಾನೂನಿನ ಮೂಲಕ ಚಾಟಿ ಬೀಸಲು ಹಿಂದೆ ಮುಂದೆ ನೋಡುವುದಿಲ್ಲ. ನೊಂದ ಜನರೊಂದಿಗೆ ಸೌಜನ್ಯಯುತವಾಗಿ ವರ್ತಿಸಿ ಅವರ ಅಹವಾಲುಗಳನ್ನು ಆಲಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಡಬೇಕು ಎಂದು ಸೂಚಿಸಿದರು.

ಸಲ್ಲಿಸಿರುವ ಎಲ್ಲಾ ಅಹವಾಲುಗಳನ್ನು ಆಯೋಗ ಗಂಭೀರವಾಗಿ ಪರಿಶೀಲಿಸಲಿದೆ. ಕೆಲವೊಂದು ಸಮಸ್ಯೆಗಳಿಂದಾಗಿ ಇಂದಿನ ಸಭೆಯನ್ನು ಮುಂದೂಡುವುದು ಯಾವುದೇ ಉತ್ತಮ ವಿಚಾರವಲ್ಲ ಆಯೋಗವು ಪ್ರವಾಸ ಮಾಡಿದ ಹಲವು ಜಿಲ್ಲೆಗಳಲ್ಲಿ ಶೇ. 50-60ರಷ್ಟು ಸಮಸ್ಯೆಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಲಾಗಿದೆ. ಆದರೆ ಬೆಂಗಳೂರು ದಕ್ಷಿಣ ಜಿಲ್ಲೆಯ ಸಮಸ್ಯೆಗಳು ಸಾಕಷ್ಟು ಗೋಚರಿಸುತ್ತಿದೆ. ಅವುಗಳನ್ನು ಪರಿಶೀಲಿಸಿ, ಪರಿಹರಿಸಲು ಆಯೋಗ ಅಗತ್ಯ ರೀತಿಯಲ್ಲಿ ಕಾರ್ಯ ಪ್ರವೃತ್ತರಾಗಲಿದೆ ಎಂದು ಮೂರ್ತಿ ಹೇಳಿದರು.

ಆಯೋಗದ ಸದಸ್ಯರಾದ ಎಂ.ಕುಂಬಯ್ಯ, ಸುನಿಲ್ ಎಂ.ಉಕ್ಕಲಿ, ಎನ್.ದಿವಾಕರ್, ಗೀತಾ ಥಾವಂಶಿ, ಕಾರ್ಯದರ್ಶಿ ಡಾ. ಎಚ್.ಎಸ್ ಶಿವರಾಮು, ಅಪರ ಜಿಲ್ಲಾಧಿಕಾರಿ ಆರ್.ಚಂದ್ಯಯ್ಯ, ಅಪರ ಪೊಲೀಸ್ ವರಿಷ್ಠಾಧಿಕಾರಿ ರಾಮಚಂದ್ರಯ್ಯ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಶಿವಕುಮಾರ್ ಉಪಸ್ಥಿತರಿದ್ದರು.

ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ, ವಿವಿಧ ಸಂಘಟನೆಗಳ ಅಧ್ಯಕ್ಷರು, ಉಪಾಧ್ಯಕ್ಷರು, ಪದಾಧಿಕಾರಿಗಳು, ಮಹಿಳಾ ಸಂಘಟನೆಗಳ ಪದಾಧಿಕಾರಿಗಳು, ಸಾರ್ವಜನಿಕರು ಸಭೆಯಲ್ಲಿ ಆಯೋಗಕ್ಕೆ ಅಹವಾಲು ಸಲ್ಲಿಸಿದರು.ಸಭೆಯಲ್ಲಿ ಆಯೋಗದ ಸದಸ್ಯರಾದ ಎಂ.ಕುಂಬಯ್ಯ, ಸುನಿಲ್ ಎಂ.ಉಕ್ಕಲಿ, ಎನ್.ದಿವಾಕರ್, ಗೀತಾ ಥಾವಂಶಿ ಮತ್ತು ಕಾರ್ಯದರ್ಶಿ ಡಾ. ಎಚ್.ಎಸ್.ಶಿವರಾಮು ಉಪಸ್ಥಿತರಿದ್ದರು.

13ಕೆಆರ್ ಎಂಎನ್ 5.ಜೆಪಿಜಿ

ರಾಮನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ಅಧ್ಯಕ್ಷ ಡಾ.ಎಸ್.ಮೂರ್ತಿ ಸಭೆ ನಡೆಸಿದರು.