ಸಾರಾಂಶ
ಕನ್ನಡಪ್ರಭ ವಾರ್ತೆ ಕೊರಟಗೆರೆ
ಹೊಸ ಬಸದಿ ನಿರ್ಮಾಣಕ್ಕಿಂತ ಹಳೆಯ ಬಸದಿಗಳನ್ನು ಜೀರ್ಣೋದ್ಧಾರ ಮಾಡುವ ಮೂಲಕ ಸಮಾಜದಲ್ಲಿ ಧರ್ಮ ಪ್ರಭಾವನೆ ಆಗಬೇಕು ಎಂದು ಶ್ರೀ ಕ್ಷೇತ್ರ ಆರತಿಪುರ ದಿಗಂಬರ ಜೈನ ಮಠದ ಪೀಠಾಧ್ಯಕ್ಷ ಸಿದ್ದಾಂತಕೀರ್ತಿ ಭಟ್ಟರಕ ಪಟ್ಟಾಚಾರ್ಯ ಮಹಾಸ್ವಾಮೀಜಿ ಸಮಾಜಕ್ಕೆ ಸಲಹೆ ನೀಡಿದರು.ತಾಲೂಕಿನ ಅಕ್ಕಿರಾಂಪುರದ ಶ್ರೀ ಅನಂತನಾಥ ತೀರ್ಥಂಕರರ ಹಾಗೂ ಬ್ರಹ್ಮ ಯಕ್ಷರ ವಾರ್ಷಿಕ ಪೂಜಾ ಮಹೋತ್ಸವದ ಪಾವನ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿ, ವಿಶ್ವದಲ್ಲಿ ಜೈನ ಧರ್ಮ ಶ್ರೇಷ್ಠ, ಶಾಂತಿ, ಅಹಿಂಸೆಗೆ ಹೆಸರಾಗಿದ್ದು, ಜೈನ ಧರ್ಮದ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ಅಳವಡಿ ಸಿಕೊಳ್ಳುವಂತೆ ಯುವ ಜನಾಂಗಕ್ಕೆ ಕರೆ ನೀಡಿದರು.
ಸಾಮೂಹಿಕ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮ ಉದ್ಘಾಟನೆ ನಡೆಯಿತು. ಶ್ರೀ ಅನಂತನಾಥ ಸ್ವಾಮಿ ದೇವರ ಧರ್ಮ ಸಂಸ್ಥೆಯ ಮನ್ಮಥ ಕುಮಾರ್ ನೇತೃತ್ವದಲ್ಲಿ ಸಮಾರಂಭಗಳು ನಡೆದವು.ಇದೇ ಸಂದರ್ಭದಲ್ಲಿ ಶ್ರೀ ಸಿದ್ಧಾಂತ ಕೀರ್ತಿ ಶ್ರೀಗಳ ಪಾದಪೂಜೆ ಕಾರ್ಯಕ್ರಮ ನೆರವೇರಿತು. ನಂತರ ಅಭಿಷೇಕ ಹಾಗೂ ಆರಾಧನಾ ಕಾರ್ಯಕ್ರಮಗಳ ಹರಾಜು ಪ್ರಕ್ರಿಯೆ ನಡೆಯಿತು. ಕಾರ್ಯಕ್ರಮದಲ್ಲಿ ಕುಮದಾ ನಾಗಭೂಷಣ್, ಸುಜಾತಾ ಚಂದ್ರಕೀರ್ತಿ, ಸಂದೀಪ್ ಚಂದ್ರಕೀರ್ತಿ, ಶಿಶಿರ್ ವಿ., ಡಿ. ಶಾಂತರಾಜು, ಕಾರ್ಯದರ್ಶಿ ನಾಗೇಶ್ ಕುಮಾರ್ ಸೇರಿದಂತೆ ವಿವಿಧ ಜೈನ ಸಂಘಟನೆಗಳ ಪದಾಧಿಕಾರಿಗಳು ಮಹಿಳಾ ಸಂಘಟನೆಗಳು ಸೇರಿದಂತೆ ಕಾರ್ಯಕ್ರಮದಲ್ಲಿ ಕೊರಟಗೆರೆ, ವಡ್ಡಗೆರೆ, ರಂಗಸಮುದ್ರ, ಬೆಂಗಳೂರು, ಅರಸಪುರ, ಅಕ್ಕಿರಾಂಪುರ, ತುಮಕೂರು ಸೇರಿದಂತೆ ರಾಜ್ಯದ ವಿವಿಧಡೆಗಳಿಂದ ಜೈನ ಶ್ರಾವಕರುಗಳು, ಶ್ರಾವಕಿಯರು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.