ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಗ್ರಾಮೀಣ ಜನರಿಗೆ ಕಾರ್ಮಿಕರ ಸಾಮಾಜಿಕ ಭದ್ರತೆ ಯೋಜನೆಗಳ ಬಗ್ಗೆ ಮಾಹಿತಿ ಅವಶ್ಯಕತೆ ಇದೆ ಎಂದು ದತ್ತೋಪಂತ್ ತೆಂಗಾಡಿ ರಾಷ್ಟ್ರೀಯ ಕಾರ್ಮಿಕರ ಶಿಕ್ಷಣ ಮತ್ತು ಅಭಿವೃದ್ಧಿ ಮಂಡಳಿ ಶಿಕ್ಷಣಾಧಿಕಾರಿ ಸತೀಶ್‌ಕುಮಾರ್ ತಿಳಿಸಿದರು.ತಾಲೂಕಿನ ಕೆರಗೋಡು ಗ್ರಾಮದಲ್ಲಿ ರಾಷ್ಟ್ರೀಯ ಕಾರ್ಮಿಕರ ಶಿಕ್ಷಣ ಮತ್ತು ಅಭಿವೃದ್ಧಿ ಮಂಡಳಿ, ಪರಿಸರ ರೂರಲ್ ಡೆವಲಪ್‌ಮೆಂಟ್ ಸೊಸೈಟಿ, ಕೆರಗೋಡು ಗ್ರಾಮ ಪಂಚಾಯ್ತಿ ಇತರೆ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಅಸಂಘಟಿತ ವಲಯಗಳ ಕಾರ್ಮಿಕರ ಸಾಮಾಜಿಕ ಭದ್ರತೆ ಯೋಜನೆಗಳ ಕುರಿತ ಜಾಗೃತಿ ಮತ್ತು ನೋಂದಣಿ ಆಂದೋಲನದಲ್ಲಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಜನರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳು ಮನೆ ಬಾಗಿಲಿಗೆ ತಲುಪಲು ಈ ಕಾರ್‍ಯಕ್ರಮಗಳು ಉಪಯೋಗವಾಗಿವೆ. ಜನರಲ್ಲಿಗೆ ಬಂದು ಜಾಗೃತಿ ಮತ್ತು ನೋಂದಣಿ ಆಂದೋಲನ ಹಮ್ಮಿಕೊಂಡಿರುವುದು ಶ್ಲಾಘನೀಯ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಕೇಂದ್ರ ಸರ್ಕಾರದ ಯೋಜನೆಗಳಾದ ಇಶ್ರಮ್ ಪೋರ್ಟಲ್, ಅಟಲ್ ಪಿಂಚಣಿ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ಯೋಜನೆ, ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್‌ದನ್ ಪಿಂಚಣಿ ಯೋಜನೆಗಳು ಸಾರ್ವತ್ರೀಕರಣಗೊಳ್ಳಬೇಕಿದೆ. ಯೋಜನೆಗಳು ಫಲಪ್ರದವಾಗಬೇಕಾದರೆ ಅರವಿನ ಅವಶ್ಯಕತೆ ಇದೆ. ಪ್ರತಿಯೊಬ್ಬ ಪ್ರಜೆಗೂ ಇದರ ಉಪಯೋಗ ಆಗಬೇಕು ಎಂದರು.
ಮಂಡ್ಯ ತಾಲೂಕಿನಲ್ಲಿ 7 ಗ್ರಾಮ ಪಂಚಾಯ್ತಿಗಳಲ್ಲಿ ಕಳೆದ ಒಂದು ತಿಂಗಳಿನಿಂದ ವಿವಿಧ ಯೋಜನೆಯಡಿ ಒಂದು ಸಾವಿರಕ್ಕೂ ಹೆಚ್ಚು ಮಂದಿ ನೋಂದಾಯಿಸಿ ಸರ್ಕಾರದ ವಿವಿಧ ಯೋಜನೆ ಪಡೆಯಲು ಸಹಕಾರಿಯಾಗಿದೆ ಎಂದರು.ಕಾರ್ಯಕ್ರಮ ಉದ್ಘಾಟಿಸಿದ ಗ್ರಾಪಂ ಅಧ್ಯಕ್ಷ ನವೀನ್‌ಕುಮಾರ್ ಮಾತನಾಡಿ, ಪ್ರತಿ ಗ್ರಾಪಂ ವ್ಯಾಪ್ತಿಯ ಪ್ರತೀ ಗ್ರಾಮಗಳಲ್ಲೂ ಶೇ.100ರಷ್ಟು ಮಂದಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಸಹಕಾರಿಯಾಗಲಿ ಎಂಬ ಕಾರಣಕ್ಕೆ ಈ ಕಾರ್‍ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಪರಿಸರ ಸಂಸ್ಥೆ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಮಾತನಾಡಿ, ಸರ್ಕಾರದ ಯೋಜನೆಗಳು ಸಕಾಲಕ್ಕೆ ಸಾಮಾನ್ಯ ಪ್ರಜೆಗಳಿಗೆ ತಲುಪಿಸಲು ಸ್ವಯಂ ಸೇವಾ ಸಂಸ್ಥೆಗಳು ಉಚಿತವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೂಪಿಸುವ ಕಾರ್‍ಯಕ್ರಮಗಳನ್ನು ಜಾಗೃತಿ ಮೂಡಿಸುವುದು ಅವಶ್ಯಕತೆ ಇದೆ ಎಂದರು.ಕಾರ್‍ಯಕ್ರಮದಲ್ಲಿ ಗ್ರಾಪಂ ಉಪಾಧ್ಯಕ್ಷೆ ನಾಗಮ್ಮ ಅಧ್ಯಕ್ಷತೆ ವಹಿಸಿದ್ದರು. ಪ್ರೊಬೆಷನರಿ ಜಿಲ್ಲಾ ಉದ್ಯೋಗಾಧಿಕಾರಿ ಕನ್ನಯ್ಯಕುಮಾರ್, ಗ್ರಾಪಂ ಪಿಡಿಒ ಸುನೀಲ್, ಬ್ಯಾಂಕ್ ಆಫ್ ಬರೋಡಾ ವ್ಯವಸ್ಥಾಪಕ ಗಿರೀಶ್, ಸಂಪನ್ಮೂಲ ವ್ಯಕ್ತಿ ಅರುಣಕುಮಾರಿ, ಗ್ರಾಪಂ ಸದಸ್ಯರಾದ ಮಹೇಶ್, ಶಾಂತಮ್ಮ, ದಿವಾಕರ್, ಶಾಂತಗಿರಿ ಇತರರು ಉಪಸ್ಥಿತರಿದ್ದರು.