ಕುಷ್ಟರೋಗದ ಬಗ್ಗೆ ಅರಿವು ಮೂಡಿಸುವುದು ಅಗತ್ಯ: ಡಿಸಿ ವೆಂಕಟೇಶ್

| Published : Jan 31 2024, 02:17 AM IST

ಸಾರಾಂಶ

ಜಿಲ್ಲಾ ಮಟ್ಟದ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ವೆಂಕಟೇಶ್‌, ಕುಷ್ಠರೋಗ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಕನ್ನಡಪ್ರಭವಾರ್ತೆ ಚಿತ್ರದುರ್ಗ

ಕುಷ್ಠರೋಗದ ಕುರಿತು ಸಮುದಾಯದಲ್ಲಿ ಅರಿವು ಮೂಡಿಸಲು ಜ.30 ರಿಂದ ಫೆಬ್ರವರಿ 13 ರವರೆಗೆ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಂಬಂಧಪಟ್ಟ ಇಲಾಖೆಗಳು ತಮ್ಮ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ ಕಾರ್ಯಕ್ರಮದ ಜಿಲ್ಲಾ ಮಟ್ಟದ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಜಿಲ್ಲಾ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಅಂತರ್ ಇಲಾಖಾ ಸಮನ್ವಯ ಸಮಿತಿಗಳನ್ನು ರಚಿಸಲಾಗಿದ್ದು, ಈ ಸಮಿತಿಗಳು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ತಾಕೀತು ಮಾಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್ ಮಾತನಾಡಿ, ಪ್ರತಿ ವರ್ಷವೂ ಜ.30 ರಿಂದ ಫೆ.13 ರವರೆಗೆ ಸ್ಪರ್ಶ್ ಕುಷ್ಠರೋಗ ಜಾಗೃತಿ ಆಂದೋಲನ ಕಾರ್ಯಕ್ರಮವನ್ನು ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ ಮಟ್ಟಗಳಲ್ಲಿ ಆಚರಿಸಬೇಕಾಗಿರುತ್ತದೆ. ಸಾರ್ವಜನಿಕರಲ್ಲಿ ಕುಷ್ಠರೋಗದ ಬಗ್ಗೆ ಇರುವ ಅವೈಜ್ಞಾ ನಿಕ ನಂಬಿಕೆಗಳನ್ನು ಹೋಗಲಾಡಿಸಬೇಕು. ಇತರೆ ಖಾಯಿಲೆಗಳಂತೆ ಒಂದು ಸಾಮಾನ್ಯ ಖಾಯಿಲೆಯಾಗಿದ್ದು, ಬಹುಔಷಧಿ ಚಿಕಿತ್ಸಾ ವಿಧಾನದ ಮೂಲಕ ಕುಷ್ಠರೋಗವನ್ನು ಸಂಪೂರ್ಣವಾಗಿ ಗುಣಪಡಿಸ ಬಹುದು ಎಂದು ಸಮುದಾಯದಲ್ಲಿ ಅರಿವು ಮೂಡಿಸಲು ಈ ಪಾಕ್ಷಿಕ ಆಚರಿಸಲಾಗುತ್ತಿದೆ ಎಂದರು.

ಪಾಕ್ಷಿಕ ದಿನಾಚರಣೆ ಆಚರಿಸುತ್ತಿರುವ 15 ದಿನಗಳಲ್ಲಿ ಪ್ರತಿ ಮನೆ-ಮನೆ ಭೇಟಿ ನೀಡಿ ಕುಷ್ಠರೋಗ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಜನರಿಗೆ ಕುಷ್ಠರೋಗದ ಬಗ್ಗೆ ಜಾಗೃತಿ ಮೂಡಿಸುವರು ಎಂದರು.ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಜಿ.ಓ.ನಾಗರಾಜ್ ಮಾತನಾಡಿ, ಮಹಾತ್ಮ ಗಾಂಧೀಜಿಯವರು ಕುಷ್ಠರೋಗ ಮುಕ್ತ ಸಮಾಜವನ್ನು ನಿರ್ವಹಿಸಲು ಶ್ರಮಿಸಿದ್ದು, ಈ ನೆನಪಿಗಾಗಿ ಬಾಪೂಜಿಯವರು ಹುತಾತ್ಮರಾದ ಜನವರಿ 30ರಂದು ಸ್ಪರ್ಶ್ ಕುಷ್ಠರೋಗ ಅರಿವು ಪಾಕ್ಷಿಕ ಆಚರಿಸಲಾಗುತ್ತಿದೆ. ಗಾಂಧೀಜಿಯವರು ಕುಷ್ಠರೋಗದ ಕುರಿತು ಸಮಾಜದಲ್ಲಿ ಮೂಢನಂಬಿಕೆ, ಅಪನಂಬಿಕೆಗಳ ವಿರುದ್ಧ ಹೋರಾಟ ನಡೆಸಿದ್ದರು. ಕಳಂಕವನ್ನು ಕೊನೆಗೊಳಿಸಿ ಘನತೆಯನ್ನು ಎತ್ತಿ ಹಿಡಿಯಿರಿ ಎಂಬುವುದು ಈ ಬಾರಿಯ ಘೋಷವಾಕ್ಯವಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಹಾತ್ಮಾ ಗಾಂಧಿಜೀಯವರ ಕನಸಾದ ಕುಷ್ಠರೋಗ ಮುಕ್ತ ಭಾರತವನ್ನು ಕಟ್ಟಲು ಶ್ರಮಿಸುತ್ತೇನೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಸಿ.ಓ ಸುಧಾ, ತಾಲೂಕು ಆರೋಗ್ಯಾಧಿಕಾರಿಗಳಾದ ಡಾ.ಬಿ.ವಿ.ಗಿರೀಶ್, ಡಾ.ವೆಂಕಟೇಶ್, ಡಾ.ರೇಖಾ, ಜಿಲ್ಲಾ ಕುಷ್ಠರೋಗ ನಿವಾರಣಾಧಿಖಾರಿ ಕಚೇರಿ ಡಿಎನ್‍ಟಿ ತಂಡದ ಮೇಲ್ವಿಚಾರಕರಾದ ವೈ.ತಿಪ್ಪೇಶಿ, ಎಂ.ಚಂದ್ರಪ್ಪ, ಕೆ.ರಾಜೇಂದ್ರ, ಪ್ರಸಾದ್, ಯು.ಕಿರಣ್, ಮಂಜನಾಥ್, ಚಳ್ಳಕೆರೆ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಅಮೃತರಾಜ್, ಹೊಸದುರ್ಗ ಸಿದ್ದರಾಮಪ್ಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.