ಸಾರಾಂಶ
ಹಾನಗಲ್ಲ: ಮಕ್ಕಳನ್ನು ಶೈಕ್ಷಣಿಕವಾಗಿ ಬೆಳೆಸುವ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗಟ್ಟಿಯಾಗಿ ಮುನ್ನಡೆಯುವ ಇಚ್ಛಾಶಕ್ತಿಯನ್ನು ಬೆಳೆಸುವ ಅಗತ್ಯವಿದೆಯಲ್ಲದೆ, ಸಮುದಾಯಕ ಹಿತಕ್ಕೆ ಮೇಲು ಕೀಳಿಲ್ಲದೆ ಎಲ್ಲರೂ ಒಟ್ಟಾಗಿ ಶ್ರಮಿಸಿದಾಗ ಯಶಸ್ಸು ಸಾಧ್ಯ ಎಂದು ಹಾನಗಲ್ಲ ತಾಲೂಕು ಸಾದರು ಸಮಾಜದ ಹಿತವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಕಾಶಗೌಡ ಪಾಟೀಲ ತಿಳಿಸಿದರು.ಹಾನಗಲ್ಲಿನ ಸದಾಶಿವ ಮಂಗಲ ಭವನದಲ್ಲಿ ಸಾದರು ಹಿತವರ್ಧಕ ಸಂಘದ ತಾಲೂಕು ಮಟ್ಟದ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಸಮುದಾಯದ ಸಮಾಲೋಚನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸರಕಾರಿ ಉದ್ಯೋಗಗಳನ್ನು ಅರಸುವ ಕಾಲ ಇದಲ್ಲ. ನಮ್ಮ ಬುದ್ಧಿ ಕ್ರಿಯಾಶಕ್ತಿಯ ಮೇಲೆ ನಮ್ಮ ಮಕ್ಕಳ ಬದುಕು ನಿಂತಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಉತ್ತಮ ಜೀವನ ಮಾರ್ಗಕ್ಕೆ ಮಾರ್ಗದರ್ಶನ ಮಾಡಬೇಕಾಗಿದೆ. ಸಮಾಜಗಳು ಒಟ್ಟಾಗಿ ತಮ್ಮ ಸಮಾಜದ ಹಿತವನ್ನು ಕಾಯಲು ಸಾಧ್ಯವಾದರೆ ಆ ಮೂಲಕ ಆರ್ಥಿಕ, ಸಾಮಾಜಿಕ ಉನ್ನತಿ ಸಾಧ್ಯ. ಸಮಾಜದ ಮಕ್ಕಳು ಯುವ ಸಮುದಾಯದ ಹಿತಕ್ಕಾಗಿ ಸರಕಾರದ ಸೌಲಭ್ಯಗಳನ್ನು ಪಡೆಯುವುದರಲ್ಲಿ ಹಿಂದೆ ಬೀಳಬಾರದು ಎಂದರು.ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರಮೇಶಗೌಡ ಪಾಟೀಲ ಮಾತನಾಡಿ, ಮುಂದಿನ ದಿನಗಳಲ್ಲಿ ನಮ್ಮ ಸಮಾಜದಲ್ಲಿ ಉತ್ತಮ ಶೈಕ್ಷಣಿಕ ಮುನ್ನಡೆ ಸಾಧಿಸಿದ ಮಕ್ಕಳು, ಪ್ರತಿಭಾವಂತರು, ನಿವೃತ್ತ ಉದ್ಯೋಗಿಗಳನ್ನು ಗೌರವಿಸುವ ಅವಶ್ಯಕತೆ ಇದೆ. ಒಟ್ಟಾಗಿ ನಡೆದರೆ ಎಲ್ಲ ಯಶಸ್ಸು ನಮ್ಮನ್ನು ಅರಸಿಕೊಂಡು ಬರುತ್ತವೆ. ಕಾಲ ಕಾಲಕ್ಕೆ ಹಿರಿಯರ ಸಮ್ಮುಖದಲ್ಲಿ ಸಭೆಗಳನ್ನು ನಡೆಸಿ, ಅಗತ್ಯವಿರುವಾಗ ಸಮಾಜದ ಎಲ್ಲರನ್ನೂ ಒಟ್ಟುಗೂಡಿಸಿ ಕೆಲಸ ಮಾಡೋಣ. ಯುವಕರು ಈ ಕಾರ್ಯದಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳಬೇಕು ಎಂದರು.ಹಾನಗಲ್ಲ ತಾಲೂಕಿನ ಸಮಾಜದ ಹಿರಿಯರಾದ ಕೆ.ಟಿ. ಕಲಗೌಡರ, ಶಂಕರಗೌಡ್ರು ಪಾಟೀಲ, ಪಿ.ಎಂ. ಪಾಟೀಲ, ಸಿ.ಕೆ. ಪಾಟೀಲ, ಟಾಕನಗೌಡ್ರು ಪಾಟೀಲ, ವೀರೇಶ ಬೈಲವಾಳ, ಮಲ್ಲೇಶಪ್ಪ ಪರಪ್ಪನವರ, ಶಂಕ್ರಣ್ಣ ತಾವರಗಿ, ಮಹೇಶ ಕೋಟಿ, ಸುರೇಶಗೌಡ ಪಾಟೀಲ, ರಾಮನಗೌಡ ಪಾಟೀಲ ವೇದಿಕೆಯಲ್ಲಿದ್ದರು. ಪದಾಧಿಕಾರಿಗಳು: ಸಾದರು ಸಮಾಜ ಹಿತವರ್ಧಕ ಸಂಘದ ಹಾನಗಲ್ಲ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಅಕ್ಕಿಆಲೂರಿನ ರಮೇಶಗೌಡ ಪಾಟೀಲ, ಉಪಾಧ್ಯಕ್ಷರಾಗಿ ಬಿ.ಎಸ್. ಕರಿಯಣ್ಣನವರ, ಕಾರ್ಯದರ್ಶಿಯಾಗಿ ನ್ಯಾಯವಾದಿ ಜಗದೀಶ ಕೊಂಡೋಜಿ, ನಿರ್ದೇಶಕ ಮಂಡಳಿ ಸದಸ್ಯರಾಗಿ ನಾಗರಾಜ ಮಟ್ಟಿಮನಿ, ಶಂಕ್ರಪ್ಪ ತಾವರಗೆರೆ, ಉಮೇಶ ಮೂಡಿ, ರಂಗನಗೌಡ ಪಾಟೀಲ, ನಾಗನಗೌಡ ಪಾಟೀಲ, ಬಸವರಾಜ ಕೇಮೋಜಿ, ಮಲ್ಲನಗೌಡ ಪಾಟೀಲ, ತಿಪ್ಪನಗೌಡ ಸಣ್ಣಗೌಡ್ರ, ಶಂಭು ಪಾಟೀಲ ಆಯ್ಕೆಯಾಗಿದ್ದಾರೆ.