ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಇಂಗ್ಲೀಷ್ ನ್ನು ಒಂದು ಭಾಷೆಯಾಗಿ ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಕಲಿಸುವುದರ ಜೊತೆ ಜೊತೆಯಲ್ಲಿ, ಅತ್ಯಂತ ಸಂಪದ್ಭರಿತವಾದ ಕನ್ನಡ ಭಾಷೆಯತ್ತ ಅವರಲ್ಲಿ ಆಸಕ್ತಿಯನ್ನು ಮೂಡಿಸುವ ಮೂಲಕ ಕನ್ನಡ ಭಾಷಾ ಸಂಸ್ಕೃತಿಯನ್ನು ಸಂರಕ್ಷಿಸುವ ಕಾರ್ಯ ನಡೆಯಬೇಕಾಗಿದೆ ಎಂದು ಮಡಿಕೇರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ದೊಡ್ಡೇಗೌಡ ಅಭಿಪ್ರಾಯಿಸಿದ್ದಾರೆ.ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಹಾಗೂ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಯುಕ್ತಾಶ್ರಯದಲ್ಲಿ ನಗರದ ಲಯನ್ಸ್ ಸಭಾಂಗಣದಲ್ಲಿ 69ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆಯೋಜಿತ ‘ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜನಪದ ನೃತ್ಯ ಸ್ಪರ್ಧೆ’ಯನ್ನು ಜ್ಯೋತಿ ಬೆಳಗಿ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಲ್ಲಿ ಒಂದು ಭಾಷೆಯಾಗಿ ಇಂಗ್ಲೀಷ್ ಕಲಿಸುವ ಹಂತದಲ್ಲೆ, ಕನ್ನಡ ಭಾಷೆಯ ಆಳವಾದ ಜ್ಞಾನವನ್ನು ಹೊಂದಿರುವ ಶಿಕ್ಷಕ ವರ್ಗದ ಮೂಲಕ, ಮಕ್ಕಳಲ್ಲಿ ಕನ್ನಡ ಭಾಷಾ ಸಂಸ್ಕೃತಿಯತ್ತ ಒಲವು ಮೂಡಿಸುವ ಪ್ರಯತ್ನ ಅತ್ಯವಶ್ಯವಾಗಿ ನಡೆಯಬೇಕು. ಕನ್ನಡದ ಮೌಲ್ಯ ಮತ್ತು ಬದುಕು ಅತ್ಯಂತ ದೊಡ್ಡದಾಗಿದ್ದು, ಇದನ್ನರಿತು ಕನ್ನಡಿಗರಾದ ನಾವೆಲ್ಲ ಒಂದೆನ್ನುವ ಭಾವವನ್ನು ಮನದಲ್ಲಿ ತುಂಬಿಕೊಂಡು ಒಟ್ಟಾಗಿ ಕನ್ನಡದ ಕಂಪನ್ನು ಪಸರಿಸಬೇಕಾಗಿದೆ ಎಂದರು.ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಎಂ.ಪಿ.ಕೇಶವ ಕಾಮತ್ ಮಾತನಾಡಿ, ಕನ್ನಡಿಗರಾದ ನಾವೆಲ್ಲ ನಮ್ಮ ಬದುಕಿನಲ್ಲಿ ನಾಲ್ಕು ಮಂದಿಗೆ ಕನ್ನಡವನ್ನು ಕಲಿಸಿದಲ್ಲಿ ಕನ್ನಡದ ಉದ್ಧಾರ ಸಾಧ್ಯವಾಗುತ್ತದೆ. ಪ್ರಸ್ತುತ ಬದುಕಿಗಾಗಿ ಕನ್ನಡ ನೆಲದಲ್ಲಿ ನೆಲೆ ನಿಂತ ಮಂದಿಯೊಂದಿಗೆ ಕನ್ನಡದಲ್ಲಿ ವ್ಯವಹರಿಸಬೇಕಾದ ನಾವು, ಅವರ ಭಾಷೆಯಲ್ಲೆ ಮಾತನಾಡುವ ಪರಿಸ್ಥಿತಿಯನ್ನು ನೋಡುತ್ತಿದ್ದೇವೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಮಾತನಾಡಿ, ಕನ್ನಡ ಭಾಷಾ ಸಂಸ್ಕೃತಿ ಅತ್ಯಂತ ಶಕ್ತಿಯುತವಾದದ್ದು. ಇದರ ಬೆನ್ನೆಲುಬೆ ‘ಸಾಹಿತ್ಯ’ವೆಂದು ವ್ಯಾಖ್ಯಾನಿಸಿದರು.ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ, ದತ್ತಿ ದಾನಿ ಟಿ.ಪಿ. ರಮೇಶ್ ಮಾತನಾಡಿ, ನಮ್ಮ ಸುತ್ತಮುತ್ತಲ ಪ್ರದೇಶಗಳಲ್ಲೆ ಕನ್ನಡೇತರರು ಅವರ ಭಾಷೆಗಳಲ್ಲೆ ವ್ಯವಹರಿಸುವುದನ್ನು ನಾವಿಂದು ಕಾಣುತ್ತಿದ್ದೇವೆ. ಇಂತಹ ಪರಿಸ್ಥಿತಿಗಳಿಗೆ ಯಾರನ್ನೂ ನಾವು ದೂಷಿಸಲು ಸಾಧ್ಯವಿಲ್ಲ. ಪರಸ್ಪರ ಅನ್ಯೋನ್ಯತೆಯ ಮೂಲಕ ಕನ್ನಡವನ್ನು ನಾವಿಂದು ಬೆಳೆಸಬೇಕಾಗಿದೆಯೆಂದು ಅಭಿಪ್ರಾಯಿಸಿದರು.
ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಲೋಕನಾಥ್ ಅಮೆಚೂರ್ ಮಾತನಾಡಿ, ಬಳಗ ಮತ್ತು ಕಸಾಪ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಎರಡು ಸಂಘಟನೆಗಳು ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆಗಳ ಉಳಿವು ಮತ್ತು ಬೆಳವಣಿಗೆಗಾಗಿ ಶ್ರಮಿಸುತ್ತಿರುವುದಾಗಿ ನುಡಿದರು.ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ ಉಪಸ್ಥಿತರಿದ್ದರು. ಕಸಾಪ ಪದಾಧಿಕಾರಿಗಳು ಕನ್ನಡ ನಾಡಗೀತೆಯನ್ನು ಪ್ರಸ್ತುತ ಪಡಿಸಿದರು.
*ಜನಪದ ನೃತ್ಯ ಸ್ಪರ್ಧೆ*ವೇದಿಕೆ ಕಾರ್ಯಕ್ರಮಗಳ ಬಳಿಕ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ಜನಪದ ನೃತ್ಯ ಸ್ಪರ್ಧೆಯಲ್ಲಿ ಮಡಿಕೇರಿಯ ಸಂತ ಮೈಕಲರ ಪ್ರೌಢಶಾಲೆ ಪ್ರಥಮ, ಕೊಡಗು ವಿದ್ಯಾಲಯ ದ್ವಿತೀಯ, ಜನರಲ್ ತಿಮ್ಮಯ್ಯ ಪ್ರೌಢಶಾಲೆಯ ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದರು. ಬ್ಲಾಸಂ ಪ್ರೌಢಶಾಲೆ, ಸಂತ ಜೋಸೇಫರ ಪ್ರೌಢಶಾಲೆ ಮತ್ತು ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಸಮಾಧಾನಕರ ಬಹುಮಾನ ಪಡೆದರು. ಸಾಹಿತ್ಯ ಪರಿಷತ್ ಸದಸ್ಯರು ಕನ್ನಡ ಅಭಿಮಾನಿಗಳು ಸಾರ್ವಜನಿಕರು ಗೀತ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.
2023- 24 ನೇ ಏಪ್ರಿಲ್ ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದು ಕೊಡಗು ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿರುವ ಮಾದಾಪುರ ಶ್ರೀಮತಿ ಡಿ.ಚೆನ್ನಮ್ಮ ಪ.ಪೂರ್ವ ಕಾಲೇಜಿನ ಅದವಿಯ.ಯು ಕೊಡಗು ಜಿಲ್ಲಾ ಲೇಖಕರ ಮತ್ತು ಕಲಾವಿದರ ಬಳಗ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಮಡಿಕೇರಿಯಲ್ಲಿ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಕ.ಸಾ.ಪ.ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ದತ್ತಿ ನಿಧಿ ಪ್ರಶಸ್ತಿಯನ್ನು ಟಿ.ಪಿ.ರಮೇಶ್ ಪ್ರದಾನ ಮಾಡಿದರು.ಜಿಲ್ಲಾ ಕ.ಸಾ.ಪ.ಅಧ್ಯಕ್ಷ ಎಂ.ಪಿ.ಕೇಶವಕಾಮತ್, ಬಳಗದ ಅಧ್ಯಕ್ಷ ಲೋಕನಾಥ್ ಅಮೆಚೂರ್, ನವೀನ್ ಅಂಬೇಕಲ್, ರೇವತಿ ರಮೇಶ್, ಭಾರತಿ ರಮೇಶ್, ಕಡ್ಲೇರ ತುಳಸಿ, ಜಲಜಾ ಶೇಖರ್, ಟಿ.ಜಿ.ಪ್ರೇಮಕುಮಾರ್, ಜೆ.ಸಿ.ಶೇಖರ್, ನಾಗರಾಜ್, ಕೆ.ವಿ.ಉಮೇಶ್, ಮಂಜುನಾಥ್ ಸೇರಿದಂತೆ ವಿದ್ಯಾರ್ಥಿನಿಯ ಪೋಷಕರಾದ ಅಮೀನ .ಕೆ.ಎ. ಮತ್ತು ಉಮ್ಮರ್ ಸಿ. ಎಂ. ಮತ್ತಿತರರು ಪಾಲ್ಗೊಂಡಿದ್ದರು.
ಜಿಲ್ಲಾ ಕಸಾಪ ಪ್ರಧಾನ ಕಾರ್ಯದರ್ಶಿ ಭಾರತಿ ರಮೇಶ್ ಸ್ವಾಗತಿಸಿ, ಕೋಶಾಧಿಕಾರಿ ಕಡ್ಲೇರ ತುಳಸಿ ಮೋಹನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.