ಏಕೀಕರಣದ ಆಶಯಗಳ ಮರುಚಿಂತನೆಯ ಅಗತ್ಯ: ಶಂಕರ ಹಲಗತ್ತಿ

| Published : Oct 25 2025, 01:00 AM IST

ಸಾರಾಂಶ

ಸರ್ಕಾರಿ ಶಾಲೆಗಳಲ್ಲಿರುವ ಸೌಲಭ್ಯ ಮತ್ತು ಶಿಕ್ಷಕರ ಅರ್ಹತೆಗಳ ಬಗ್ಗೆ ಪೋಷಕರಿಗೆ ಹೆಚ್ಚಿನ ಅರಿವು ಮೂಡಿಸಬೇಕು. ಜತೆಗೆ ಕನ್ನಡ ಮಾಧ್ಯಮದಲ್ಲಿ ನೀಡುವ ಗುಣಮಟ್ಟದ ಶಿಕ್ಷಣದಿಂದ ಉತ್ತಮ ಭವಿಷ್ಯ ಸಾಧ್ಯ ಎಂಬುದನ್ನು ಮನವರಿಕೆ ಮಾಡಿಕೊಡಬೇಕಿದೆ.

ಧಾರವಾಡ:

ರಾಜ್ಯದಲ್ಲಿಂದು ಏಕೀಕರಣದ ಮೂಲ ಆಶಯಗಳನ್ನು ಮರು ಚಿಂತಿಸುವ ಅಗತ್ಯವಿದೆ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.

ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಶುಕ್ರವಾರ ಜರುಗಿದ ಕರ್ನಾಟಕ ಏಕೀಕರಣ ವಿಶೇಷ ಉಪನ್ಯಾಸ ಉದ್ಘಾಟಿಸಿದ ಅವರು, ಸಮಾಜದಲ್ಲಿ ಜಾಗೃತಿ ಮೂಡಿಸುವುದು, ಯುವ ಪೀಳಿಗೆಗೆ ಏಕೀಕರಣದ ಮೌಲ್ಯಗಳನ್ನು ತಿಳಿಸುವುದು ಮತ್ತು ಜಾತಿ ನಿರ್ಮೂಲನೆಗಾಗಿ ಶ್ರಮಿಸುವುದು ಇಂದಿನ ತುರ್ತು ಅಗತ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಆಲೂರು ವೆಂಕಟರಾವ್‌ ಸ್ಮಾರಕ ಟ್ರಸ್ಟ್‌ ಅಧ್ಯಕ್ಷ ರಂಜಾನ್ ದರ್ಗಾ, ಸರ್ಕಾರಿ ಶಾಲೆಗಳಲ್ಲಿರುವ ಸೌಲಭ್ಯ ಮತ್ತು ಶಿಕ್ಷಕರ ಅರ್ಹತೆಗಳ ಬಗ್ಗೆ ಪೋಷಕರಿಗೆ ಹೆಚ್ಚಿನ ಅರಿವು ಮೂಡಿಸಬೇಕು. ಜತೆಗೆ ಕನ್ನಡ ಮಾಧ್ಯಮದಲ್ಲಿ ನೀಡುವ ಗುಣಮಟ್ಟದ ಶಿಕ್ಷಣದಿಂದ ಉತ್ತಮ ಭವಿಷ್ಯ ಸಾಧ್ಯ ಎಂಬುದನ್ನು ಮನವರಿಕೆ ಮಾಡಿಕೊಡಬೇಕಿದೆ ಎಂದು ಹೇಳಿದರು.

ಆಲೂರು ವೆಂಕಟರಾವರ ನಾಯಕತ್ವದಲ್ಲಿ ನಡೆದ ಈ ಹೋರಾಟ ಕೇವಲ ಗಡಿಗಳನ್ನು ಸೇರಿಸುವುದಕ್ಕೆ ಸೀಮಿತವಾಗಿರಲಿಲ್ಲ, ಬದಲಾಗಿ ಕನ್ನಡತನವನ್ನು ಎತ್ತಿ ಹಿಡಿಯುವ ಪ್ರಯತ್ನವಾಗಿತ್ತು. ಅವರ ಬಲಿದಾನ ಅಂದರೆ ತಮ್ಮ ಇಡೀ ಜೀವನವನ್ನು ಕನ್ನಡಕ್ಕಾಗಿ ಮುಡಿಪಾಗಿಟ್ಟಿದ್ದು, ಏಕೀಕೃತ ಕರ್ನಾಟಕ ರಾಜ್ಯದ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿತು ಎಂದು ರಂಜಾನ್ ದರ್ಗಾ ತಿಳಿಸಿದರು.

ಹಿರಿಯ ಸಾಹಿತಿ ಡಾ. ಶ್ರೀನಿವಾಸ ವಾಡಪ್ಪಿ ಕರ್ನಾಟಕ ಏಕೀಕರಣ ಚರಿತ್ರೆಯ ಕುರಿತು ಹಾಗೂ ಹೊಂಬೆಳಕು ಪ್ರತಿಷ್ಠಾನದ ಡಾ. ವೀಣಾ ಬಿರಾದಾರ ಕನಾಟಕ ಏಕೀಕರಣ ಚಳವಳಿಯಲ್ಲಿ ಮಹಿಳೆಯರ ಪಾತ್ರದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ರವಿ ಕುಲಕರ್ಣಿ ನಿರೂಪಿಸಿದರು. ಡಾ. ದೀಪಕ ಆಲೂರ, ದ್ರೌಪದಿ ಬಿಜಾಪುರ, ಬಸವರಾಜ ಸೂಳಿಭಾವಿ, ಸುನಂದಾ ಕಡಮೆ ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ಡಾ. ದೀಪಕ ಆಲೂರ, ದ್ರೌಪದಿ ಬಿಜಾಪುರ, ಬಸವರಾಜ ಸೂಳಿಭಾವಿ, ಸುನಂದಾ ಕಡಮೆ ಇದ್ದರು.