ಕನ್ನಡಪ್ರಭ ವಾರ್ತೆ ಶಿವಮೊಗ್ಗ

ನೀಟ್‌ ಪರೀಕ್ಷೆಯ ಅಕ್ರಮ ಖಂಡಿಸಿ ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾನಿರತ ಸೋನಮ್ ವಾಂಗ್ಚುಕ್‌ ರನ್ನು ಆಸ್ಪತ್ರೆಗೆ ಸ್ಥಳಾಂತರ ಹಿನ್ನೆಲೆ ಅವರನ್ನು ಬೆಂಬಲಿಸಿ ಶಿವಮೊಗ್ಗದ ಪ್ರಗತಿಪರ ಸಂಘಟನೆ ಒಕ್ಕೂಟದಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.ಈ ಸಂದರ್ಭದಲ್ಲಿ ಒಕ್ಕೂಟದ ಪ್ರಮುಖರಾದ ಕೆ.ಪಿ. ಶ್ರೀಪಾಲ್, ಶೇಖರ್ ಗೌಳೇರ್, ಪ್ರೊ. ಮೇಟಿ ಮಲ್ಲಿಕಾರ್ಜುನ್, ಪ್ರೊ. ಪ್ರಕಾಶ್ ಮರ್ಗನಳ್ಳಿ, ಎಂ. ಗುರುಮೂರ್ತಿ, ರಾಘವೇಂದ್ರ, ಬಿ. ಚಂದ್ರೇಗೌಡ, ಎಚ್.ಟಿ. ಕೃಷ್ಣಮೂರ್ತಿ, ದೇಶಾದ್ರಿ ಹೊಸ್ಮನೆ, ಕೆ.ಎಲ್. ಅಶೋಕ್, ಅಕ್ಷತಾ ಹುಂಚದಕಟ್ಟೆ, ಪ್ರೊ. ರಾಚಪ್ಪ, ಜಿ.ಡಿ. ಮಂಜುನಾಥ್ ಸೇರಿದಂತೆ ಹಲವರು ಮಾತನಾಡಿ ಬೆಂಬಲ ಘೋಷಿಸಿದರು.ಕೇಂದ್ರ ಸರ್ಕಾರ ಹೋರಾಟಗಳನ್ನು ಹತ್ತಿಕ್ಕುವ ಕೆಲಸವನ್ನು ಮಾಡುತ್ತಿದೆ. ಕಳೆದ 21 ದಿನಗಳಿಂದ ಜಂತರ್‌ಮಂತರ್ ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತ ಬಂದಿರುವ ಸೋನಮ್ ವಾಂಗ್ಚುಕ್ ಅವರ ಆರೋಗ್ಯ ಹದಗೆಡುತ್ತಿದ್ದರೂ ಕೂಡ ಯಾವ ಭಯವು ಕೇಂದ್ರ ಸರ್ಕಾರಕ್ಕೆ ಇಲ್ಲವಾಗಿದೆ. ಹೋರಾಟಗಾರರ ಜೀವಗಳಿಗೆ ಈ ಸರ್ಕಾರದಲ್ಲಿ ಬೆಲೆ ಇಲ್ಲದಂತಾಗಿದೆ. ದೇಶದ ಆತ್ಮಶಕ್ತಿಯೇ ವಿನಾಶದತ್ತ ಸಾಗುತ್ತಿದೆ. ನೀಟ್ ಪರೀಕ್ಷೆಯಲ್ಲಿ ಅದೆಷ್ಟು ಅಕ್ರಮಗಳಾಗುತ್ತಿವೆ. ಪ್ರತಿ ವರ್ಷ ಇದೇ ಗೋಳಾಗಿದೆ. ಇದು ಈ ವರ್ಷ ಮಿತಿ ಮೀರಿ ಅನೇಕ ವಿದ್ಯಾರ್ಥಿಗಳ ಸಾವಿಗೆ ಕಾರಣವಾಗಿದೆ. ವಿದ್ಯಾರ್ಥಿಗಳು ಕೂಡ ಸತ್ಯಾಗ್ರಹದಿಂದ ಬಳಲಿ ಹೋಗಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ಈ ಕೇಂದ್ರ ಸರ್ಕಾರ ಮಾನ ಮರ್ಯಾದೆ ಏನು ಇಲ್ಲ. ಪತ್ರಿಭಟನೆ ಮಾಡುತ್ತಿರುವ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಕನಿಷ್ಟ ಪಕ್ಷ ವಿದ್ಯಾರ್ಥಿಗಳ ಭಾವನೆಗಳನ್ನು ಕೇಳಲು ಕೂಡ ಅವರಿಗೆ ಪುರುಸೋತ್ತಿಲ್ಲ.

ವಾಂಗ್ಚುಕ್ ಅವರ ನಡೆಸಿಕೊಂಡ ಕ್ರಮ ಪ್ರಜಾಪ್ರಭುತ್ವದ ವಿರೋಧಿಯಾಗಿದೆ. ಇಂದಿನಿಂದ ಚಳಿಗಾಲ ಅಧಿವೇಶನದಲ್ಲೂ ಪ್ರಾರಂಭವಾಗಲಿದ್ದು, ಈ ಬಗ್ಗೆ ಪ್ರಸ್ತಾಪವಾಗಬೇಕು. ಇದಕ್ಕೆ ಸಿಜೆಪಿ ಪಕ್ಷ ಒತ್ತಾಯ ಕೂಡ ಮಾಡಿದೆ. ಇದು ಕೇವಲ ಸಿಜೆಪಿ ಅವರ ಒತ್ತಾಯ ಅಲ್ಲ. ಅದು ಇಡೀ ದೇಶದ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟವರ ಬೇಡಿಕೆ ಆಗಿದೆ ಎಂದು ತಿಳಿಸಿದರು.

ನೀಟ್ ಪರೀಕ್ಷಾ ಅಕ್ರಮದ ಬಗ್ಗೆ ಸಂಪೂರ್ಣ ತನಿಖೆಯಾಗಬೇಕು. ಸೋನಮ್ ವಾಂಗ್ಚುಕ್ ಅವರ ಬೇಡಿಕೆಯನ್ನು ಸರ್ಕಾರ ಕೂಡಲೇ ಈಡೇರಿಸಬೇಕು. ಶಿಕ್ಷಣ ಇಲಾಖೆಗಳಲ್ಲಿನ ಆರೋಪ, ಅಕ್ರಮಗಳ ಹಿನ್ನೆಲೆಯಲ್ಲಿ ಸಮಗ್ರ ತನಿಖೆಯಾಗಿ ಕೇಂದ್ರ ಶಿಕ್ಷಣ ಸಚಿವ ಕೂಡಲೇ ರಾಜೀನಾಮೆ ಕೊಡಲೆ ಬೇಕು ಮತ್ತು ಹೋರಾಟ ನಿರತರ ಮೇಲೆ ಕೇಂದ್ರ ಸರ್ಕಾರದ ದೌರ್ಜನ್ಯ ಕೂಡಲೇ ನಿಲ್ಲಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.


ಪತ್ರಿಭಟನೆಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ಡಿ. ಮಂಜುನಾಥ್, ಸಬಿತಾ ಬನ್ನಾಡಿ, ಕೇಶವಶರ್ಮ, ಸವಿತಾ ನಾಗಭೂಷಣ್, ದೇವೇಂದ್ರಪ್ಪ, ಶೃಂಗಶ್ರೀ, ಜಿ.ಕೆ.ಪ್ರೇಮ, ಲವ.ಜಿ.ಆರ್, ದೇವು, ಜಾರ್ಜ್ ಸಲ್ಡಾನ್, ಸುರೇಶ್, ಅಶೋಕ್ ಕುಮಾರ್, ಗಿತೇಂದ್ರ ಗೌಡ, ನವೀನ್ ತಲಾರಿ ಸಂಗೀತ ಸೇರಿದಂತೆ ಹಲವರು ಇದ್ದರು.

---------------------

ಬಾಕ್........

ಯುವಕರ ಭಾವನೆಗಳಿಗೆ ಗೌರವ ಕೊಡಿ

ಕೇಂದ್ರ ಸರ್ಕಾರ ಯುವಕರ ಕೂಗುಗಳನ್ನು ಕೇಳಿಸಿಕೊಳ್ಳಬೇಕು. ಅವರ ಭಾವನೆಗಳಿಗೂ ಗೌರವ ಕೊಡಬೇಕು. ಮತ್ತು ನೀಟ್ ಅಕ್ರಮ ತಮಾಷೆಯಲ್ಲ. ಮಕ್ಕಳ ಮೇಲೆ ಇದು ಎಂತಹ ಪರಿಣಾಮ ಬೀರುತ್ತದೆ ಎಂಬುದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳೆ ಸಾಕ್ಷಿಯಾಗಿದ್ದಾರೆ. ಹೋರಾಟಗಾರರನ್ನು ನಿಯಂತ್ರಿಸಬೇಡಿ. ಪ್ರಾಮಾಣಿಕವಾಗಿ ತನಿಖೆ ನಡೆಸಿ, ನ್ಯಾಯಕೊಡಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

-------------------

ಪೋಟೋ: 20ಎಸ್‌ಎಂಜಿಕೆಪಿ01

ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ನೀಟ್‌ ಪರೀಕ್ಷೆಯ ಅಕ್ರಮ ಖಂಡಿಸಿ ದೆಹಲಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾನಿರತ ಸೋನಮ್ ವಾಂಗ್ಚುಕ್‌ರನ್ನು ಆಸ್ಪತ್ರೆಗೆ ಸ್ಥಳಾಂತರ ಹಿನ್ನೆಲೆ ಅವರನ್ನು ಬೆಂಬಲಿಸಿ ಶಿವಮೊಗ್ಗದ ಪ್ರಗತಿಪರ ಸಂಘಟನೆ ಒಕ್ಕೂಟದಿಂದ ಪ್ರತಿಭಟನೆ ನಡೆಯಿತು.