ಸಾರಾಂಶ
ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಭಾನುವಾರ ರಾಜ್ಯದ 381 ಪರೀಕ್ಷಾ ಕೇಂದ್ರಗಳಲ್ಲಿ ನೀಟ್ ಪರೀಕ್ಷೆ ನಡೆಯಿತು
ಬೆಂಗಳೂರು : ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಭಾನುವಾರ ರಾಜ್ಯದ 381 ಪರೀಕ್ಷಾ ಕೇಂದ್ರಗಳಲ್ಲಿ ನೀಟ್ ಪರೀಕ್ಷೆ ನಡೆಯಿತು. ಕಲಬುರಗಿಯ ಕೇಂದ್ರವೊಂದರಲ್ಲಿ ವಿದ್ಯಾರ್ಥಿಯೊಬ್ಬರ ಜನಿವಾರ ತೆಗೆಸಿದ್ದು ಆಕ್ರೋಶಕ್ಕೆ ಗುರಿಯಾಗಿದೆ. ಉಳಿದೆಲ್ಲೆಡೆ ಪರೀಕ್ಷೆ ಸುಸೂತ್ರವಾಗಿ ನಡೆದಿದೆ.
ರಾಷ್ಟ್ರೀಯ ಟೆಸ್ಟಿಂಗ್ ಏಜೆನ್ಸಿ ದೇಶಾದ್ಯಂತ ನಡೆಸಿದ ಪರೀಕ್ಷೆ ರಾಜ್ಯದ ಪರೀಕ್ಷಾ ಕೇಂದ್ರಗಳಲ್ಲೂ ಕಟ್ಟುನಿಟ್ಟಾಗಿ ನಡೆದಿದೆ. ಯಾವುದೇ ಪರೀಕ್ಷಾ ಅಕ್ರಮ, ಲೋಪಗಳು, ವಿದ್ಯಾರ್ಥಿ ಡಿಬಾರ್‌ನಂಥ ಪ್ರಕರಣಗಳು ವರದಿಯಾಗಿಲ್ಲ ಎಂದು ಕಾಲೇಜು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಒಟ್ಟು 1.49 ಲಕ್ಷ ವಿದ್ಯಾರ್ಥಿಗಳು ನೀಟ್‌ಗೆ ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ ಎಷ್ಟು ಮಂದಿ ಪರೀಕ್ಷೆ ಬರೆದಿದ್ದಾರೆ ಎನ್ನುವುದು ಎನ್‌ಟಿಎಯಿಂದ ಮಾಹಿತಿ ಬರಬೇಕಿದೆ. ರಾಜ್ಯದ ಎಲ್ಲ ಕೇಂದ್ರಗಳಲ್ಲಿ ಪರೀಕ್ಷೆಯನ್ನು ಅಚ್ಚುಕಟ್ಟಾಗಿ ನಡೆಸುವ ಜವಾಬ್ದಾರಿ ನೀಡಲಾಗಿತ್ತು. ಅದನ್ನು ನಿರ್ವಹಿಸಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮಧ್ಯಾಹ್ನ ಎರಡು ಗಂಟೆಗೆ ಪರೀಕ್ಷೆ ಇತ್ತಾದರೂ ತಪಾಸಣೆ ದೃಷ್ಟಿಯಿಂದ ಬೆಳಗ್ಗೆ 11ಕ್ಕೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿದ್ದರು. ಪೊಲೀಸ್ ಹಾಗೂ ಗೃಹರಕ್ಷಕ ಸಿಬ್ಬಂದಿ ವಿದ್ಯಾರ್ಥಿಗಳ ತಪಾಸಣೆ ನಡೆಸಿ ಒಳಬಿಟ್ಟರು. ಕಟ್ಟುನಿಟ್ಟಾಗಿ ವಸ್ತ್ರಸಂಹಿತೆ ಪಾಲನೆಗೆ ಕ್ರಮ ವಹಿಸಲಾಗಿದೆ. ಕೆಲವೆಡೆ ಶೂ, ಬೆಲ್ಟ್, ಕೈಗಡಿಯಾರ ಮತ್ತಿತರ ನಿಷೇಧಿತ ವಸ್ತುಗಳನ್ನು ಹಾಕಿಕೊಂಡು ಬಂದಿದ್ದ ವಿದ್ಯಾರ್ಥಿಗಳನ್ನು ತಡೆಯಲಾಯಿತು. ಹೀಗಾಗಿ ಅವರು ಅವುಗಳನ್ನು ಪೋಷಕರ ಕೈಗೆ ಬಿಚ್ಚಿಕೊಟ್ಟು ಪರೀಕ್ಷೆಗೆ ತೆರಳಿದರು. ಇದರಿಂದ ಕೆಲ ಮಕ್ಕಳು ಬರಿಗಾಲಲ್ಲಿ ತೆರಳಿ ಪರೀಕ್ಷೆ ಬರೆದರು.