ಕೇಂದ್ರ ಸರ್ಕಾರದಿಂದ ಸಹಕಾರ ಸಂಘಗಳ ನಿರ್ಲಕ್ಷ್ಯ: ಶಾಸಕ ಶಿವಲಿಂಗೇಗೌಡ

| Published : Feb 06 2024, 01:30 AM IST

ಸಾರಾಂಶ

ಸಹಕಾರ ಸಂಘಗಳನ್ನು ನಿರ್ಲಕ್ಷಿಸುವ ಮೂಲಕ ರೈತರಿಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಕರ್ನಾಟಕ ಗೃಹ ನಿರ್ಮಾಣ ಮಂಡಳಿಯ ಅಧ್ಯಕ್ಷ, ಶಾಸಕ ಕೆ ಎಂ ಶಿವಲಿಂಗೇಗೌಡ ಅರಸೀಕೆರೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಗಂಡಸಿ ಸಂತೆ ಮೈದಾನ ಸಹಕಾರ ಸಂಘಕ್ಕೆ ನೂತನವಾಗಿ ಅಧಿಕಾರ ವಹಿಸಿಕೊಂಡ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

ಗಂಡಸಿ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಪದಗ್ರಹಣ ಕನ್ನಡಪ್ರಭ ವಾರ್ತೆ ಅರಸೀಕೆರೆ

ಸಹಕಾರ ಸಂಘಗಳನ್ನು ನಿರ್ಲಕ್ಷಿಸುವ ಮೂಲಕ ರೈತರಿಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಕರ್ನಾಟಕ ಗೃಹ ನಿರ್ಮಾಣ ಮಂಡಳಿಯ ಅಧ್ಯಕ್ಷ, ಶಾಸಕ ಕೆ ಎಂ ಶಿವಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಗಂಡಸಿ ಸಂತೆ ಮೈದಾನ ಸಹಕಾರ ಸಂಘಕ್ಕೆ ನೂತನವಾಗಿ ಅಧಿಕಾರ ವಹಿಸಿಕೊಂಡ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಅಲ್ಪ ಬಡ್ಡಿ ದರದಲ್ಲಿ ನಬಾರ್ಡ್ ನೀಡುವ ಸಾಲದಿಂದಲೇ ಸ್ಥಳೀಯ ಸಹಕಾರ ಸಂಘಗಳ ವಹಿವಾಟು ನಡೆಯುತ್ತಿದ್ದು ಇದರಿಂದ ರೈತರಿಗೂ ಅನುಕೂಲವಾಗಿತ್ತು. ಅಲ್ಲದೆ ಕಳೆದ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ನಬಾರ್ಡ್‌ನಿಂದ ದೊರೆಯುವ ಶೇ 64 ರಷ್ಟು ಸಾಲವನ್ನು ಸಹಕಾರ ಸಂಘಗಳಿಗೆ ನೀಡುತ್ತಿತ್ತು. ಆದರೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಬಾರ್ಡ್‌ನಿಂದ ಸಹಕಾರ ಸಂಘಗಳಿಗೆ ದೊರೆಯುತ್ತಿದ್ದ ಹಣದಲ್ಲಿ 50ರಷ್ಟು ಕಡಿತ ಮಾಡಿದ್ದು ಕೇಂದ್ರ ಸರ್ಕಾರದ ನಿಲುವಿನಿಂದಾಗಿ ಸಹಕಾರ ಸಂಘಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುವಂತಹ ಪರಿಸ್ಥಿತಿಗೆ ಬಂದು ನಿಲ್ಲುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಗಂಡಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಟ್ರೋ ಬಾಬು ಮಾತನಾಡಿ, ಸ್ಥಳೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವ ಜತೆಗೆ ತಮ್ಮ ವ್ಯಾಪ್ತಿಯಲ್ಲಿ ಜನರ ಸೇವೆ ಮಾಡಲು ಸಹಕಾರ ಸಂಘ ಹಾಗೂ ಸ್ಥಳೀಯ ಸಂಸ್ಥೆಗಳು ವೇದಿಕೆಯಾಗಿದ್ದು ಇದರ ಪ್ರಯೋಜನವನ್ನು ಪಡೆಯುವ ಜನಪ್ರತಿನಿಧಿ ಉತ್ತಮ ಜನನಾಯಕನಾಗುವುದರಲ್ಲಿ ಸಂದೇಹವಿಲ್ಲ. ಈ ನಿಟ್ಟಿನಲ್ಲಿ ಸಹಕಾರ ಸಂಘಕ್ಕೆ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷರು ಸೇರಿದಂತೆ ನಿರ್ದೇಶಕರು ರೈತರ ಪರ ನಿಲುವು ತಾಳುವುದರೊಂದಿಗೆ ಸಹಕಾರ ಸಂಘದ ಬೆಳವಣಿಗೆಗೂ ಶ್ರಮಿಸುವಂತೆ ಕಿವಿಮಾತು ಹೇಳಿದರು.

ಸಹಕಾರ ಸಂಘದ ನೂತನ ಅಧ್ಯಕ್ಷ ತೋಪೆಗೌಡ ಮಾತನಾಡಿ, ಶಾಸಕರ ಮಾರ್ಗದರ್ಶನದಲ್ಲಿ ಸಂಘದ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಹಕಾರ ಸಂಘದ ಬೆಳವಣಿಗೆ ಜತೆಗೆ ರೈತ ಪರ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

ಸಮಾರಂಭದಲ್ಲಿ ಸಹಕಾರ ಸಂಘದ ಉಪಾಧ್ಯಕ್ಷೆ ಲಕ್ಷ್ಮಮ್ಮ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಜಯರಾಂ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಆಗ್ರೋ ಬಾಬು, ಮುಖಂಡರಾದ ರಾಮಚಂದ್ ಇದ್ದರು.ನೂತನವಾಗಿ ಅಧಿಕಾರ ವಹಿಸಿಕೊಂಡ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಶಾಸಕ ಶಿವಲಿಂಗೇಗೌಡ ಅಭಿನಂದಿಸಿದರು.