ಸಾರಾಂಶ
ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭವಾಗಿದ್ದು, ಅಫಜಲ್ಪುರ ತಾಲೂಕಿನ ಕರ್ಜಗಿ ಹಾಗೂ ಮಣೂರ ಪರೀಕ್ಷಾ ಕೇಂದ್ರಗಳ ಅಧೀಕ್ಷಕರನ್ನು ಕರ್ತವ್ಯ ನಿರ್ಲಕ್ಷ್ಯದ ಆರೋಪದಡಿಯಲ್ಲಿ ಅಮಾನತು ಮಾಡಿ ಡಿಡಿಪಿಐ ಸಕ್ರೆಪ್ಪಗೌಡ ಬಿರಾದಾರ ಆದೇಶ ಹೊರಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಚವಡಾಪುರ
ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಆರಂಭವಾಗಿದ್ದು, ಅಫಜಲ್ಪುರ ತಾಲೂಕಿನ ಕರ್ಜಗಿ ಹಾಗೂ ಮಣೂರ ಪರೀಕ್ಷಾ ಕೇಂದ್ರಗಳ ಅಧೀಕ್ಷಕರನ್ನು ಕರ್ತವ್ಯ ನಿರ್ಲಕ್ಷ್ಯದ ಆರೋಪದಡಿಯಲ್ಲಿ ಅಮಾನತು ಮಾಡಿ ಡಿಡಿಪಿಐ ಸಕ್ರೆಪ್ಪಗೌಡ ಬಿರಾದಾರ ಆದೇಶ ಹೊರಡಿಸಿದ್ದಾರೆ.ಮಣೂರ ಹಾಗೂ ಕರ್ಜಗಿ ಗ್ರಾಮಗಳಲ್ಲಿನ ಪರೀಕ್ಷಾ ಕೇಂದ್ರಗಳಲ್ಲಿದ್ದ ಸುಮಾರು 24 ಸಿಸಿ ಕ್ಯಾಮೆರಾಗಳನ್ನು ಕೇಬಲ್ ಹಾಗೂ ಸರ್ವಿಸ್ ವೈರ್‌ಗಳ ಸಮೇತ ಕಳ್ಳತನ ಮಾಡಲಾಗಿದ್ದು, ಈ ಘಟನೆ ಎರಡನೇ ದಿನದ ಪರೀಕ್ಷೆಯ ಬಳಿಕ ರಾತ್ರಿ ವೇಳೆಯಲ್ಲಿ ನಡೆದಿದೆ, ಘಟನೆ ಸಂಬಂಧ ಕರ್ಜಗಿ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕಿ ಸುನಂದಾ ಬಿಂಗೆ ಹಾಗೂ ಮಣೂರ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಸುರೇಶ ಕೊರಚಗಾಂವ ಅವರನ್ನು ಅಮಾನತು ಮಾಡಲಾಗಿದೆ.ಏ.2ರಂದು ನಡೆದ ಪರೀಕ್ಷೆಯ ಸಮಯದಲ್ಲಿ ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತರು ಶಿರವಾಳ ಗ್ರಾಮದ ವೀರ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ಸಮದಯಲ್ಲಿ ಪರೀಕ್ಷಾ ಕೇಂದ್ರಕ್ಕೆ ಅನಧಿಕೃತವಾಗಿ ಪ್ರವೇಶ ಮಾಡಿರುವ ಆರೋಪದಡಿ ಬಂಕಲಗಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಭೀಮಾಶಂಕರ ಅವರನ್ನು ಕೂಡ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಬಿಇಒ ಹಾಜಿಮಲಂಗ ಇಂಡಿಕರ್ ಮಾಹಿತಿ ನೀಡಿದ್ದಾರೆ.
ನಕಲಿಗೆ ಅವಕಾಶ ಸಿಗುತ್ತಿಲ್ಲವೆಂಬ ಶಂಕೆ: ದ್ವಿತಿಯ ಪಿಯು ಪರೀಕ್ಷೆಯ ಸಮಯದಲ್ಲಿ ಕರ್ಜಗಿ ಗ್ರಾಮದ ಪರೀಕ್ಷಾ ಕೇಂದ್ರದಲ್ಲಿ ನಕಲು ನಡೆಯಲು ಸಹಕಾರ ನೀಡಲಿಲ್ಲವೆಂಬ ಕಾರಣಕ್ಕೆ ಪೊಲೀಸ್ ಪೇದೆಯನ್ನು ಯುವಕರಿಬ್ಬರು ಹಲ್ಲೆ ನಡೆಸಿದ ಘಟನೆಯ ಬಳಿಕ ಎಚ್ಚೆತ್ತ ಶಿಕ್ಷಣ ಇಲಾಖೆ ಪರೀಕ್ಷೆಗಳನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಮತ್ತು ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ಸಿಸಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಿ ವೆಬ್ ಕಾಸ್ಟಿಂಗ್ ಮೂಲಕ ನೀಗಾ ಇಡಲಾಗುತ್ತಿತ್ತು. ಇದರಿಂದ ನಕಲಿಗೆ ಅವಕಾಶ ಸಿಗುತ್ತಿಲ್ಲವೆಂಬ ಕಾರಣಕ್ಕೆ ಕರ್ಜಗಿ ಹಾಗೂ ಮಣೂರ ಪರೀಕ್ಷಾ ಕೇಂದ್ರಗಳಲ್ಲಿನ ಸಿಸಿ ಕ್ಯಾಮೆರಾಗಳನ್ನು ಕೇಬಲ್ ವೈರ್, ಸರ್ವಿಸ್ ವೈರ್‌ಗಳ ಸಮೇತ ಕಳ್ಳತನ ಮಾಡಲಾಗಿದೆ.ಎರಡು ಪರೀಕ್ಷಾ ಕೇಂದ್ರಗಳ ಸಿಸಿ ಕ್ಯಾಮೇರಾಗಳನ್ನು ಕದ್ದ ಆರೋಪಿಗಳ ಪತ್ತೆ ಹಚ್ಚಿ ಶಿಕ್ಷೆ ಕೊಡಿಸುವ ಕೆಲಸ ಪೊಲೀಸ್ ಇಲಾಖೆ ಮಾಡಬೇಕಾಗಿದೆ.