ಮಲ್ಲಿಕಾರ್ಜುನ ಖರ್ಗೆ ಪರಿವಾರದಿಂದ ಕೋಲಿ ಸಮಾಜ ನಿರ್ಲಕ್ಷ್ಯ: ನಾಟೀಕಾರ್‌

| Published : Apr 23 2024, 12:47 AM IST

ಮಲ್ಲಿಕಾರ್ಜುನ ಖರ್ಗೆ ಪರಿವಾರದಿಂದ ಕೋಲಿ ಸಮಾಜ ನಿರ್ಲಕ್ಷ್ಯ: ನಾಟೀಕಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಕೋಲಿ, ಕಬ್ಬಲಿಗ ಹಾಗೂ ಅದರ ಪರ್ಯಾಯ ಪದಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆನ್ನುವುದು ಸಮಾಜದ ಒಕ್ಕೋರಲಿನ ಬೇಡಿಕೆಯಾಗಿದ್ದರೂ ಅದು ಈಡೇರದಂತೆ ಮಾಡುತ್ತ ಸಮಾಜವನ್ನೇ ಖರ್ಗೆ ಪರಿವಾರ ಅಲಕ್ಷ ಮಾಡಿದೆ

ಕನ್ನಡಪ್ರಭ ವಾರ್ತೆ ಕಲಬುರಗಿ

ಕರ್ನಾಟಕ ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಹಿಂದುಳಿದಿರುವ ಕೋಲಿ, ಕಬ್ಬಲಿಗ ಹಾಗೂ ಅದರ ಪರ್ಯಾಯ ಪದಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆನ್ನುವುದು ಸಮಾಜದ ಒಕ್ಕೋರಲಿನ ಬೇಡಿಕೆಯಾಗಿದ್ದರೂ ಅದು ಈಡೇರದಂತೆ ಮಾಡುತ್ತ ಸಮಾಜವನ್ನೇ ಖರ್ಗೆ ಪರಿವಾರ ಅಲಕ್ಷ ಮಾಡಿದೆಎಂದು ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ, ಹೋರಾಟಗಾರ ಶಿವಕುಮಾರ್‌ ನಾಟೀಕಾರ್‌ ದೂರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೋಲಿ ಸಮಾಜವೇ ಹೆಚ್ಚಾಗಿರುವ ಗುರಮಠಕಲ್‌ನಿಂದಲೇ ಖರ್ಗೆಯವರು 8 ಬಾರಿ ಶಾಸಕರಾದರೂ ಸಮಾಜಕ್ಕೆ ಏನೂ ಪ್ರಯೋಜನವಾಗಲಿಲ್ಲ. 1983 ರಲ್ಲಿ ದೇವೇಂದ್ರಪ್ಪ ಘಾಳಪ್ಪ ಜಮಾದಾರ ಅವರ ವಿರುದ್ದ ವೈಜನಾಥ ಪಾಟೀಲ್ ಅವರು ಸುಳ್ಳು ಎಸ್‌ಟಿ ಪ್ರಮಾಣ ಪತ್ರ ತೆಗೆದುಕೊಂಡಿದ್ದಾರೆ ಅಂತ ನ್ಯಾಯಾಲಯದಲ್ಲಿ ದಾವೇ ಹಾಕಿದ್ದರು. 1985 ರಲ್ಲಿ ಮಾನ್ಯ ನ್ಯಾಯಾಲಯವು ಕಬ್ಬಲಿಗ, ಕಬ್ಬೇರ ಈ ಎಲ್ಲ ಪದಗಳು ಟೋಕರೆ ಕೋಲಿ, ಕೊಯಾ ಪದದ ಪರ್ಯಾಯ ಪದಗಳು ಹಾಗಾಗಿ ಈ ಸಮುದಾಯಗಳು ಎಸ್‌ಟಿ ಪ್ರಮಾಣ ಪತ್ರ ಪಡೆಯಬಹುದು ಎಂದು ಆದೇಶ ನೀಡಿತು ಎಂದು ಮೆಲಕು ಹಾಕಿದರು.

ಈ ಆದೇಶದ ಪ್ರಕಾರ ಅಂದಿನ ಸರ್ಕಾರ ಈ ಸಮುದಾಯಗಳಿಗೆ ಎಸ್ಟಿ ಸರ್ಟಿಫಿಕೇಟ್ ಕೊಡಬೇಕು ಅಂತ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಿತ್ತು . ಆಗ ಮಲ್ಲಿಕಾರ್ಜುನ ಖರ್ಗೆ ಅವರು ಶಾಸಕರಾಗಿದ್ದರು. ಕೋಲಿ ಸಮಾಜದ ಮತಗಳಿಂದ ಆಯ್ಕೆಯಾಗಿದ್ದ ಇವರು ಅಲ್ಲಿಂದ ನಿರಂತರವಾಗಿ ಕೋಲಿ ಸಮಾಜಕ್ಕೆ ST ಪ್ರಮಾಣ ಪತ್ರಗಳನ್ನು ಸಿಗುವಂತೆ ನೋಡಿಕೊಳ್ಳಬಹುದಿತ್ತು ಆದರೆ ಇವರು ಹಾಗೆ

ಮಾಡಲಿಲ್ಲ. ಸ್ವತಹ ಒಬ್ಬ ವಕೀಲರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನ್ಯಾಯಾಲಯ ನೀಡಿದ ಆದೇಶದ ಬಗ್ಗೆ ಗಮನ ನೀಡದೇ ಅಲಕ್ಷಿಸಿದರೆಂದರು ನಾಟೀಕಾರ್‌ ಆರೋಪಿಸಿದರು.

ಕೋಲಿ, ಕಬ್ಬಲಿಗ ಸಮಾಜದ ಜಾತಿಗಳನ್ನು ಟೋಕರೆ ಕೋಳಿಯ ಪರ್ಯಾಯ ಪದಗಳು ಎಂದು ತಿಳಿಸಿ ಕೇಂದ್ರಕ್ಕೆ ಕಳುಹಿಸಿದ್ದರೆ ನಮ್ಮ ಸಮಾಜವನ್ನು ಯಾವತ್ತೋ ಎಸ್ಟಿ ಪಟ್ಟಿ ಯಲ್ಲಿ ಸೇರ್ಪಡೆ ಆಗುವಂತೆ ಮಾಡಬಹುದಿತ್ತು. ಆದರೆ ಹೆಚ್ಚು ಪದಗಳಿದ್ದರೆ ಎಸ್ಟಿ ಸೇರ್ಪಡೆಗಾಗಿ ಕಳಿಸಿದ ಕಡತ ವಾಪಸ್ ಬರುವುದು ಗೊತ್ತಿದ್ದರೂ ಉದ್ದೇಶಪೂರ್ವಕವಾಗಿ ಗಂಗಾಮತಸ್ಥ ಮತ್ತು 37 ಪರ್ಯಾಯ ಪದಗಳನ್ನೇ ಕೇಂದ್ರಕ್ಕೆ ಕಳುಹಿಸಿದರು. ಅದಕ್ಕೆ ರಿಜಿಸ್ಟ್ರಾರ್‌ ಜನರಲ್‌ ಆಫ್ ಇಂಡಿಯಾ 37 ಪದಗಳಿದ್ದರೆ ಎಸ್ಟಿ ಮಾಡಲು ಸಾಧ್ಯವಿಲ್ಲವೆಂದು ತಡತ ವಾಪಸ್ ರಾಜ್ಯ ಸರ್ಕಾರಕ್ಕೆ ಕಳಿಸಿಕೊಟ್ಟಿತು ಎಂದು ಹಿಂದಿನ ಬೆಳವಣಿಗೆ ವಿವರಿಸಿದರು.

ಮಾಜಿ ಸಚಿವ ಬಾಬೂರಾವ ಚಿಂಚನ್ಸೂರ್‌ ಸೇರಿದಂತೆ ಅನೇಕರು ಸಾಜವನ್ನ ರಾಜಕೀಯವಾಗಿ ಬಳಸಿದರೆ ವಿನಹಃ ಬೇಡಿಕೆ ಈಡೇರಿಸಲಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಯ ಮಟ್ಟದಲ್ಲಿ ಪ್ರಭಾವಿ ನಾಯಕರಾಗಿರುವುದರಿಂದ ಕೇಂದ್ರ ಸರ್ಕಾರದಲ್ಲಿ ಅಧಿಕಾರದಲ್ಲಿ ಇದ್ದಾಗಲೂ ಮತ್ತು ವಿರೋಧ ಪಕ್ಷದಲ್ಲಿ ಇದ್ದಾಗಲೂ ಕೂಡ ಇವರು ಒಂದು ಬಾರಿಯೂ ಕೋಲಿ, ಕಬ್ಬಲಿಗ ಸಮಾಜವನ್ನು ಎಸ್ಟಿ ಗೆ ಸೇರಿಸುವಂತೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಾತನಾಡಲಿಲ್ಲ ಜೊತೆಗೆ ಬೇಕಾದ ಸಮರ್ಪಕ ದಾಖಲಾತಿಗಳನ್ನು ಒದಗಿಸಲಿಲ್ಲವೆಂದು ದೂರಿದರು.

ಸಮ್ಮಿಶ್ರ ಸರ್ಕಾರದಲ್ಲಿ ಪ್ರಿಯಾಂಕ್ ಖರ್ಗೆ ಅವರೇ ಸಮಾಜ ಕಲ್ಯಾಣ ಸಚಿವರಾಗಿದ್ದರು ಆಗಲೂ ಸಹ ಆರ್‌ಜಿಐ ಸ್ಪಷ್ಟನೆ ಕೇಳಿದಾಗ ಇವರು ಅದನ್ನು ತಾನು ಎಲ್ಲವನ್ನೂ ಸರಿ ಮಾಡಿ ಕೊಟ್ಟಿದ್ದೇನೆ ಅಂತ ರಾಜಕೀಯ ಹೇಳಿಕೆಗಳನ್ನು ನೀಡಿದರೇ ಹೊರತು ವಾಸ್ತವದಲ್ಲಿ ಸರಿಯಾಗಿ ಸ್ಪಷ್ಟೀಕರಣ ನೀಡದೆ ಉದ್ದೇಶಪೂರ್ವಕವಾಗಿ ಕೋಲಿ ಸಮಾಜದ ಎಸ್ಟಿ ಬೇಡಿಕೆ ಈಡೇರದಂತೆ ನೋಡಿಕೊಂಡರು. ಪ್ರಿಯಾಂಕ ಖರ್ಗೆ ಅವರಿಗೆ ನಮ್ಮ ಸಮಾಜದ ಬಗ್ಗೆ ಕಾಳಜಿ ಇದ್ದಿದ್ದರೆ, ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಹಿಂದೆ ದೇವೇಂದ್ರಪ್ಪ ಘಾಳಪ್ಪ ಜಮಾದಾರ ಅವರ ಪ್ರಕರಣದಲ್ಲಿ ನ್ಯಾಯಾಲಯ ನೀಡಿರುವ ಆದೇಶದಂತೆ ಅದನ್ನು ಮುಂದಿಟ್ಟುಕೊಂಡು ಟೋಕರೆ ಕೋಳಿ ಪ್ರಮಾಣ ಪತ್ರಗಳನ್ನು ಕೊಡುವಂತೆ ಮಾಡಬಹುದಿತ್ತು ಎಂದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್‌ ಖರ್ಗೆಯವರು ನಮ್ಮ ಸಮಾಜದ ಬಗ್ಗೆ ಚುನಾವಣೆಯ ಹೊಸ್ತಿಲಿನಲ್ಲಿ ಬಹಳ ಕಳಕಳಿ ವ್ಯಕ್ತಪಡಿಸುತ್ತಿದ್ದಾರೆ ಆದರೆ ತಮ್ಮ ಸರಕಾರ ಅಧಿಕಾರಕ್ಕೆ ಬಂದು 10 ತಿಂಗಳಾದರೂ ಕೂಡ ಇಲ್ಲಿವರೆಗೂ ಜಿಲ್ಲೆಯಲ್ಲಿ ನಮ್ಮ ಸಮಾಜದ ಒಬ್ಬನೇ ಒಬ್ಬ ಅಧಿಕಾರಿಯನ್ನೂ ಕೂಡ ತಂದಿಲ್ಲ. ಚುನಾವಣೆಗಾಗಿ ಮಾತ್ರ ನಮ್ಮ ಸಮಾಜದ ಜನರನ್ನು ಕಾಟಾಚಾರದ ಓಲೈಕೆ ಮಾಡುವುದು ಅವರ ಹವ್ಯಾಸವಾಗಿದೆ ಎಂದು ನಾಟೀಕಾರ್‌ ದೂರಿದರು.