ಐತಿಹಾಸಿಕ ತಾಣ ಅಣ್ಣಿಗೇರಿಯಲ್ಲಿ ಸ್ಮಾರಕಗಳ ನಿರ್ಲಕ್ಷ್ಯ

| Published : Sep 07 2024, 01:40 AM IST

ಸಾರಾಂಶ

ಇಲ್ಲಿನ ಬಸದಿಗಳು, ಐತಿಹಾಸಿಕ ದೇವಾಲಯಗಳು, ಕಲಾಕೃತಿಗಳು, ಶಿಲ್ಪಗಳು, ಪುರಾತನ ಅವಶೇಷಗಳು, ಮುದ್ರೆಗಳು, ಸ್ಮಾರಕ ಕಟ್ಟಡಗಳ ಇರುವ ಸ್ಥಳಗಳಲ್ಲಿ ರಾಶಿ ರಾಶಿ ಹುಲ್ಲಿನ ಕಸ ಬೆಳೆದಿದ್ದು, ಇಂದಿಗೂ ಸಂರಕ್ಷಣೆ ಇಲ್ಲದೇ ಬಿಕೋ ಎನ್ನುತ್ತಿವೆ.

ಶಿವಾನಂದ ಅಂಗಡಿ

ಅಣ್ಣಿಗೇರಿ: ಆದಿಕವಿ ಪಂಪನ ಜನ್ಮಸ್ಥಳ ಅಣ್ಣಿಗೇರಿ ಅಮೃತೇಶ್ವರ ದೇವಾಲಯ ಸೇರಿದಂತೆ ಅನೇಕ ಐತಿಹಾಸಿಕ ಸ್ಮಾರಕಗಳನ್ನು ಹೊಂದಿದ್ದು, ಧಾರವಾಡ ಜಿಲ್ಲೆಯಲ್ಲೇ ಪ್ರಮುಖ ಪ್ರವಾಸಿ ತಾಣವಾಗುವ ಎಲ್ಲ ಅರ್ಹತೆ ಹೊಂದಿದ್ದರೂ ಸರ್ಕಾರ ಮತ್ತು ಜನಪ್ರತಿನಿಧಿಗಳ ಕಾಳಜಿ ಕೊರತೆಯಿಂದಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದೆ.ಹಿಂದೆ ಸಂಗಾಪುರ ಆಗಿದ್ದ ಅಣ್ಣಿಗೇರಿ, ಕಾಲಕ್ರಮೇಣ ಅನ್ನಗಿರಿ ಬಳಿಕ ಅಣ್ಣಿಗೇರಿಯಾಗಿ ಪರಿವರ್ತನೆಯಾಗಿದೆ.

ಸಂಸ್ಕೃತಿಕ ನಗರಿ ಎಂದು ಗುರುತಿಸಿಕೊಂಡಿರುವ ಅಣ್ಣಿಗೇರಿಯಲ್ಲಿ ವಸ್ತು ಸಂಗ್ರಹಾಲಯ ಮತ್ತು ಅಧ್ಯಯನ ಕೇಂದ್ರ ಮಾಡುವುದರಿಂದ ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಇತಿಹಾಸ ತಿಳಿಸಿದಂತಾಗುತ್ತದೆ ಎನ್ನುತ್ತಾರೆ ಪತ್ರಕರ್ತ ರಫೀಕ ಕಲೆಗಾರ.

ತಿರುವಗನ್ನಡ ಕಾಲದಲ್ಲಿ ಪ್ರಸಿದ್ಧವಾದ ಅನ್ನಗಿರಿಯಲ್ಲಿ ಪುರಾತನ ಕಾಲದಿಂದಲೇ ಸರ್ವ ಧರ್ಮ ಸಮನ್ವಯತೆ ಪ್ರತೀಕ ವಾಗಿರುವ ಅಮೃತೇಶ್ವರ ದೇವಸ್ಥಾನ ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ.

ಪಾಶ್ಚಾತ್ಯ ಚಾಲುಕ್ಯ ಶೈಲಿಯಲ್ಲಿ ಕಪ್ಪು ಕಲ್ಲಿನಲ್ಲಿ ಅಮೃತೇಶ್ವರ ದೇವಾಲಯ ನಿರ್ಮಿಸಲಾಗಿದ್ದು, ಮಳೆ ನೀರು, ಧೂಳಿನಿಂದಾಗಿ ದಿನೇ ದಿನೇ ಅದರ ಸ್ವರೂಪ ಹದಗೆಡುತ್ತಿದೆ. ಇಲ್ಲಿಗೆ ಸಹಸ್ರಾರು ಭಕ್ತರು ಆಗಮಿಸುತ್ತಿದ್ದು, ಅವರು ವಾಸ್ತವ್ಯ ಹೂಡಲು ವ್ಯವಸ್ಥೆಯೇ ಇಲ್ಲ.

ಬಸದಿಗಳು, ಐತಿಹಾಸಿಕ ದೇವಾಲಯಗಳು, ಕಲಾಕೃತಿಗಳು, ಶಿಲ್ಪಗಳು, ಪುರಾತನ ಅವಶೇಷಗಳು, ಮುದ್ರೆಗಳು, ಸ್ಮಾರಕ ಕಟ್ಟಡಗಳ ಇರುವ ಸ್ಥಳಗಳಲ್ಲಿ ರಾಶಿ ರಾಶಿ ಹುಲ್ಲಿನ ಕಸ ಬೆಳೆದಿದ್ದು, ಇಂದಿಗೂ ಸಂರಕ್ಷಣೆ ಇಲ್ಲದೇ ಬಿಕೋ ಎನ್ನುತ್ತಿವೆ.

ದೇಶಪಾಂಡೆ ವಾಡೆ:

ಅಣ್ಣಿಗೇರಿಯಲ್ಲಿ ಆದಿ ಕವಿ ಪಂಪ ಜನಿಸಿದ ಮನೆ ರಾವಸಾಬ ದೇಶಪಾಂಡೆ ವಾಡೆ ಎಂದೇ ಪ್ರಸಿದ್ಧವಾಗಿದ್ದು, ಈ ದೇಶಪಾಂಡೆ ಮನೆತನದವರು ಬೇರೆ ರಾಜ್ಯದಲ್ಲಿ ವಾಸಿಸುತ್ತಿದ್ದು, ನಿರ್ವಹಣೆಗೆ ಬೇರೆಯವರನ್ನು ಅವರೇ ನೇಮಿಸಿದ್ದಾರೆ. ಸರ್ಕಾರ ಮನಸ್ಸು ಮಾಡಿದ್ದರೆ ಇಲ್ಲಿಗೆ ಸಾವಿರಾರು ಪ್ರವಾಸಿಗರು ಭೇಟಿ ನೀಡಿ ಪಂಪನ ಮನೆ ನೋಡಿ ಖುಷಿಪಡಬೇಕಾಗಿತ್ತು. ಆದರೆ ಇಚ್ಛಾಶಕ್ತಿ ಕೊರತೆಯಿಂದಾಗಿ ಇದ್ಯಾವುದು ಆಗಲೇ ಇಲ್ಲ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಪಂಪ ಸ್ಮಾರಕ ಭವನ ನಿರ್ಮಿಸಲಾಗಿದ್ದು, ಭವನ ಮರಳಿ ನವೀಕರಣಗೊಳಿಸದಿರುವುದು ತೀವ್ರ ನಿರಾಶೆ ಮೂಡಿಸಿದೆ.

2010ರಲ್ಲಿ ಚರಂಡಿಯ ಹೂಳು ತೆಗೆಯುವ ಸಂದರ್ಭದಲ್ಲಿ 600ಕ್ಕೂ ಹೆಚ್ಚು ಮಾನವ ತಲೆಬುರಡೆಗಳು ಪತ್ತೆಯಾಗಿದ್ದು, ದೇಶ ವಿದೇಶಗಳಲ್ಲಿ ಇದು ಬಹುದೊಡ್ಡ ಸುದ್ದಿಯಾಗಿತ್ತು. ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳಿಗೆ ಪ್ರಯೋಗಾಲಯಕ್ಕೆ ಕಳಿಸಿ ಅಧ್ಯಯನ ನಡೆಸಲು ಬಹಳ ಅನುಕೂಲವಾಯಿತು. ಇಂಥ ಹಲವಾರು ವಿಶೇಷತೆಗಳ ಇರುವ ತಾಲೂಕು ಕೇಂದ್ರದ ಸ್ಮಾರಕಗಳ ಅಧ್ಯಯನಕ್ಕೆ ಮತ್ತು ಸಂರಕ್ಷಣೆಗೆ ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆಯವರು ಹಾಗೂ ಪ್ರವಾಸೋದ್ಯಮ ಇಲಾಖೆಯವರು ಗಮನಹರಿಸಬೇಕು ಎಂಬುದು ಸ್ಥಳೀಯ ಅಪೇಕ್ಷೆಯಾಗಿದೆ.ಅನುಕೂಲ

ಐತಿಹಾಸಿಕ ನೆಲೆಯಾಗಿರುವ ಅಣ್ಣಿಗೇರಿಯಲ್ಲಿ ಪುರಾತತ್ವ ವಸ್ತುಸಂಗ್ರಹಾಲಯ ಆಗುವುದರಿಂದ ಶೈಕ್ಷಣಿಕವಾಗಿ ಬಹುತೇಕ ಅನುಕೂಲವಾಗುವುದು.

- ಶರಣಬಸಪ್ಪ ದೇಶಮುಖ, ಸ್ಥಳೀಯ ಪ್ರಮುಖರುಅಭಿವೃದ್ಧಿ ಮಾಡಲಿ

ಅಣ್ಣಿಗೇರಿ ಸಾಂಸ್ಕೃತಿಕವಾಗಿ ಹೆಸರು ಮಾಡಿದ್ದು, ಪ್ರವಾಸೋದ್ಯಮ ಕೇಂದ್ರ ನಿರ್ಮಿಸಲು ಎಲ್ಲ ಅರ್ಹತೆ ಹೊಂದಿದೆ. ಸರ್ಕಾರ ಬೇಗ ಗಮನಹರಿಸಿ ಇದನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಮಾಡಬೇಕು.

- ಶ್ರೀಕುಮಾರ ಸಿಕ್ಕೇದೇಸಾಯಿ, ದೇಶಗತ್ತಿಮನೆತನ ವಂಶಸ್ಥರು ಅಣ್ಣಿಗೇರಿಮ್ಯೂಸಿಯಂ ನಿರ್ಮಿಸಲಿ

ಕನ್ನಡದ ಆದಿಕವಿ ಪಂಪ ಜನಿಸಿದ ಈ ಊರಲ್ಲಿ ಅವರ ಬಗ್ಗೆ ಹಾಗೂ ಐತಿಹಾಸಿಕ ಸ್ಮಾರಕಗಳ ರಕ್ಷಣೆಗೆ ಮ್ಯೂಸಿಯಂ ನಿರ್ಮಿಸಬೇಕು.

- ರಾಜೇಂದ್ರ ಬಾಳಸಾಹೇಬ ದೇಶಪಾಂಡೆ

ಸಾಂಸ್ಕೃಿತಕ ನಗರ

ಅಣ್ಣಿಗೇರಿ ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ಇದನ್ನು ಸಾಂಸ್ಕೃತಿಕ ನಗರವಾಗಿ ಪರಿವರ್ತಿಸಬೇಕು.

- ಹುಸೇನ್‌ಸಾಬ ಬೆಟಗೇರಿ, ಅಧ್ಯಕ್,ರು, ನೇತಾಜಿ ಸ್ಪೋಟ್ಸ್‌ ಕ್ಲಬ್ ಅಣ್ಣಿಗೇರಿ