ರಾಜ್ಯ ಸರ್ಕಾರ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳನ್ನು ನಿರ್ಲಕ್ಷಿಸಿದೆ ಎಂದು ಶಾಸಕ ಜಗದೀಶ ಗುಡಗುಂಟಿ ಆರೊಪಿಸಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ರಾಜ್ಯ ಸರ್ಕಾರ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳನ್ನು ನಿರ್ಲಕ್ಷಿಸಿದೆ ಎಂದು ಶಾಸಕ ಜಗದೀಶ ಗುಡಗುಂಟಿ ಆರೊಪಿಸಿದರು. ಗೃಹ ಕಚೇರಿಯಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸರ್ಕಾರ ಕೃಷ್ಣಾ ಮೇಲ್ದಂಡೆ ಯೋಜನೆ ಸಂಪೂರ್ಣ ಅನುಷ್ಠಾನಕ್ಕೆ ಪರಿಣಾಮಕಾರಿ ಕ್ರಮ ಜರುಗಿಸುವಲ್ಲಿ ವಿಫಲವಾಗಿದೆ. ರೈತರು ನ್ಯಾಯಾಲದ ಮೆಟ್ಟಿಲೇರಿದ್ದಾರೆ ಎಂದು ಸಬೂಬು ಹೇಳುವ ಸರ್ಕಾರ ರೈತರ ಮನವೊಲಿಸುವ ಕೆಲಸ ಮಾಡಬೇಕು. ಸರ್ಕಾರ ಘೋಷಿಸಿರುವ ನೀರಾವರಿ ಜಮಿನಿಗೆ ಪ್ರತಿ ಎಕರೆಗೆ ₹40 ಲಕ್ಷ ಹಾಗೂ ಒಣ ಬೇಸಾಯಕ್ಕೆ ₹30 ಲಕ್ಷ ಅನುದಾನ ಪಡೆದುಕೊಳ್ಳುವಂತೆ ರೈತರ ಮನವೊಲಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿರುವ ಅವರು, ಈ ಕುರಿತು ಯಾವುದೇ ಪ್ರಯತ್ನಗಳನ್ನು ಸರ್ಕಾರ ನಡೆಸಿಲ್ಲ. ತುಂಗಭದ್ರಾ, ಆಲಮಟ್ಟಿ, ಹಿಪ್ಪರಗಿ ಸೇರಿದಂತೆ ಎಲ್ಲಾ ಉತ್ತರ ಕರ್ನಾಟಕದ ಜಲಾಶಯಗಳ ನಿರ್ವಹಣೆ ಇಲ್ಲವಾಗಿದೆ. ಸಿಬ್ಬಂದಿಯ ಕೊರತೆ, ಅನುದಾನ ಕೊರತೆಯಿಂದಾಗಿ ಜಲಾಶಯಗಳ ಪರಿಸ್ಥಿತಿ ಹದಗೆಟ್ಟಿದ್ದು, ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿವೆ ಎಂದು ದೂರಿದ್ದಾರೆ.

ತುಕ್ಕುಹಿಡಿದ ಗೇಟ್‌ಗಳು: ಸುಮಾರು 6 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ, ಜಮಖಂಡಿ, ತೇರದಾಳ, ರಬಕವಿ, ಬನಹಟ್ಟಿ ಮುಂತಾದ ನಗರಗಳಿಗೆ ನೀರೊದಗಿಸುವ ಹಿಪ್ಪರಗಿ ಜಲಾಶಯಕ್ಕೆ ನಿರ್ವಹಣೆಯ ಕೊರತೆ ಉಂಟಾಗಿದೆ. ಸಿಬ್ಬಂದಿ, ಅನುದಾನ ನುರಿತ ಕಾರ್ಮಿಕರ ಕೊರತೆ ಯಿಂದಾಗಿ ಪ್ರತಿವರ್ಷ ಒಂದಲ್ಲಿಲ್ಲೊಂದು ಸಮಸ್ಯೆಯಲ್ಲಿ ಸಿಲುಕುತ್ತಿದೆ. 20 ವರ್ಷಗಳಿಂದ ಜಲಾಶಯದ ಗೇಟ್‌ ಬದಲಿಸಿಲ್ಲ. ಹಳೆಯ ಗೇಟ್‌ಗಳು ತುಕ್ಕುಹಿಡಿದು ಸಾಮರ್ಥ್ಯ ಕಳೆದುಕೊಂಡು ಕಳಚಿ ಹೋಗುತ್ತಿವೆ.

ಬಿಲ್ಲ್‌ ಪಾವತಿಸಿಲ್ಲ: ಹಿಪ್ಪರಗಿ ಜಲಾಶಯದ ಗೆಟ್‌ಗಳ ನಿರ್ವಹಣೆಗೆ ಗುತ್ತಿಗೆದಾರರಿಗೆ ಬಿಲ್‌ ಪಾವತಿಸದ ಕಾರಣ ಕೆಲಸವನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಇದರಿಂದ ಗೇಟ್‌ ಕಿತ್ತು ಹೋಗಿ ಸಮಸ್ಯೆ ಎದುರಾಗಿದೆ. ಬೇಸಿಗೆಯಲ್ಲಿ ಜನ ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಿಬ್ಬಂದಿ ಕೊರತೆಯಿಂದಾಗಿ ನೀರಾವರಿ ಇಲಾಖೆಯ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗಿವೆ. ಇದರಿಂದ ಅಧಿಕಾರಿಗಳು ಒಬ್ಬರಮೇಲೊಬ್ಬರು ಆರೋಪ ಮಾಡುವ ಸ್ಥಿತಿ ನಿರ್ಮಾಣ ಮಾಡಲಾಗಿದೆ. ಸರ್ಕಾರ ಅಗತ್ಯವಿರುವ ಸಿಬ್ಬಂದಿ ನೇಮಕಾತಿ ಜೊತೆಗೆ ಬಾಕಿ ಬಿಲ್‌ ಬಿಡುಗಡೆಗೊಳಿಸಬೇಕು, ಜಲಾಶಯಗಳ ನಿರ್ವಹಣೆಗೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಕಂಕಣವಾಡಿ ಗ್ರಾಮದ ನಡುಗಡ್ಡೆಯಿಂದ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವ ಬಾಜ್‌ ನಿರ್ಮಾಣಕ್ಕೆ ಜಲಸಾರಿಗೆ ಇಲಾಖೆಗೆ ಮನವಿ ಸಲ್ಲಿಸಲಾಗಿದ್ದು, 6 ತಿಂಗಳಲ್ಲಿ ಅನುದಾನ ನಿಡುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು. ಸಂಗಮೇಶ ದಳವಾಯಿ, ಈಶ್ವರ ಆದೆಪ್ಪನವರ, ಮಲ್ಲುದಾನಗೌಡ, ಅಜಯ ಕಡಪಟ್ಟಿ, ಶ್ರೀಧರ ಕಂಬಿ ಇದ್ದರು.