ಸಾರಾಂಶ
ಕಿರುಗಾವಲು ಹೋಬಳಿ ಉಪ್ಪಲಗೇರಿ ಕೊಪ್ಪಲು ಹಾಗೂ ಮಲಿಯೂರು ಗ್ರಾಮದ ಸರ್ವೆ ನಂ.83, 84, 85, 86, 38, 39 ಜಮೀನುಗಳು ಸೇರಿದಂತೆ ಪರಿಶಿಷ್ಟ ಜಾತಿ ಸಮುದಾಯದ ಬೀದಿಗೆ ಹೊಂದಿಕೊಂಡಂತೆ ಸರ್ಕಾರಿ ರಸ್ತೆ ಇದ್ದರೂ ಕೂಡ ವ್ಯಕ್ತಿಯೊಬ್ಬ ಅಕ್ರಮವಾಗಿ ರಸ್ತೆಯನ್ನು ಅಕ್ರಮಿಸಿಕೊಂಡಿರುವ ಪರಿಣಾಮ ನಿತ್ಯ ರೈತರು ಹೊಲಗದ್ದೆಗಳಿಗೆ ಎತ್ತಿನಗಾಡಿ , ಟ್ರ್ಯಾಕ್ಟರ್ ಸೇರಿದಂತೆ ಇತರೆ ವಾಹನಗಳ ಮೂಲಕ ಸಂಚರಿಸಲು ಹರಸಾಹಸ ಪಡುವಂತಾಗಿದೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಜಮೀನುಗಳಿಗೆ ಹೋಗುವ ರಸ್ತೆಯನ್ನು ವ್ಯಕ್ತಿಯೊಬ್ಬ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರೂ ತೆರವುಗೊಳಿಸುವಲ್ಲಿ ತಾಲೂಕು ಆಡಳಿತ ನಿರ್ಲಕ್ಷ್ಯ ವಹಿಸಿದೆ ಎಂದು ತಾಲೂಕಿನ ಉಪ್ಪಲಗೇರಿಕೊಪ್ಪಲು ಹಾಗೂ ಮಲಿಯೂರು ಗ್ರಾಮದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕಿರುಗಾವಲು ಹೋಬಳಿ ಉಪ್ಪಲಗೇರಿ ಕೊಪ್ಪಲು ಹಾಗೂ ಮಲಿಯೂರು ಗ್ರಾಮದ ಸರ್ವೆ ನಂ.83, 84, 85, 86, 38, 39 ಜಮೀನುಗಳು ಸೇರಿದಂತೆ ಪರಿಶಿಷ್ಟ ಜಾತಿ ಸಮುದಾಯದ ಬೀದಿಗೆ ಹೊಂದಿಕೊಂಡಂತೆ ಸರ್ಕಾರಿ ರಸ್ತೆ ಇದ್ದರೂ ಕೂಡ ವ್ಯಕ್ತಿಯೊಬ್ಬ ಅಕ್ರಮವಾಗಿ ರಸ್ತೆಯನ್ನು ಅಕ್ರಮಿಸಿಕೊಂಡಿರುವ ಪರಿಣಾಮ ನಿತ್ಯ ರೈತರು ಹೊಲಗದ್ದೆಗಳಿಗೆ ಎತ್ತಿನಗಾಡಿ , ಟ್ರ್ಯಾಕ್ಟರ್ ಸೇರಿದಂತೆ ಇತರೆ ವಾಹನಗಳ ಮೂಲಕ ಸಂಚರಿಸಲು ಹರಸಾಹಸ ಪಡುವಂತಾಗಿದೆ. ರಸ್ತೆ ತೆರವು ಜೊತೆಗೆ ವ್ಯವಸಾಯಕ್ಕೆ ಅನುಕೂಲವಾಗುವಂತೆ ಅಭಿವೃದ್ಧಿಗೊಳಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.
ಅಕ್ರಮ ಒತ್ತುವರಿಯನ್ನು ತೆರವುಗೊಳಿಸುವಂತೆ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ತಾಲೂಕು ಸರ್ವೇಯರ್‌ರವರು ಸ್ಥಳಕ್ಕೆ ಆಗಮಿಸಿ ಸರ್ವೇ ಕಾರ್ಯ ನಡೆಸಿ ರಸ್ತೆ ಜಾಗವನ್ನು ಗುರುತಿಸಿ ಕಲ್ಲು ಹಾಕಿಸಿದ್ದಾರೆ. ಸರ್ವೇಯರ್ ವರದಿ ಆಧಾರದ ಮೇಲೆ ತಹಸೀಲ್ದಾರ್‌ರವರು ರಸ್ತೆ ಒತ್ತುವರಿ ತೆರವುಗೊಳಿಸಬೇಕೆಂದು ಅದೇಶ ನೀಡಿದ್ದಾರೆ,ತಹಸೀಲ್ದಾರ್ ಅದೇಶದ ಮೇರೆಗೆ ಕಂದಾಯ ಇಲಾಖೆ ಅಧಿಕಾರಿಗಳು ಒತ್ತುವರಿ ತೆರವು ಕಾರ್ಯ ಆರಂಭಿಸಿದಾದರೂ ಕೂಡ ಒತ್ತುವರಿ ತೆರವುಗೊಳಿಸುವ ವೇಳೆ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ವ್ಯಕ್ತಿ ಮಾತುಕೇಳಿ ತೆರವು ಕಾರ್ಯವನ್ನು ಅಧಿಕಾರಿಗಳು ಅರ್ಧದಲ್ಲಿಯೇ ನಿಲ್ಲಿಸಿದ್ದಾರೆ ಎಂದು ಕಿಡಿಕಾರಿದರು.
ಇತ್ತಿಚಿನ ದಿನಗಳಲ್ಲಿ ಹೆಚ್ಚಾಗಿ ಮಳೆ ಬರುತ್ತಿರುವುದರಿಂದ ರಸ್ತೆಯಲ್ಲಿ ಹೋಗುವುದೇ ಕಷ್ಟವಾಗಿದೆ. ಕೂಡಲೇ ಒತ್ತುವರಿ ತೆರವುಗೊಳಿಸಬೇಕು. ಇಲ್ಲದಿದ್ದರೇ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಜಮೀನಿನ ಮಾಲೀಕರಾದ ರಾಧ, ವಸಂತ, ಜ್ಯೋತಿ, ರಾಜಮ್ಮ, ಪದ್ಮಮ್ಮ, ಪವಿ, ಶಿವಮ್ಮ, ಮಂಟಯ್ಯ, ನಿಂಗರಾಜು, ಅಭಿ, ನಾಗರತ್ನಮ್ಮ, ದೊಡ್ಡದಾನಿ, ದಾಸಯ್ಯ, ರಂಗಸ್ವಾಮಿ ಸೇರಿದಂತೆ ಇತರರು ಒತ್ತಾಯಿಸಿದ್ದಾರೆ.