ಶಿಕ್ಷಕರು ಶಿಕ್ಷಣಕ್ಕೆ ಒತ್ತು ನೀಡಬೇಕು, ಶಿಕ್ಷಣ ನೀಡುವಲ್ಲಿ ನಿಷ್ಕಾಳಜಿ ವಹಿಸಿದರೆ ಭವಿಷ್ಯದ ಇಡೀ ಸಮಾಜವೇ ಹಿಂದುಳಿಯಲು ಕಾರಣವಾಗುತ್ತದೆ ಎಂದು ಜಿ.ಪಂ. ಮಾಜಿ ಸದಸ್ಯ ಸಿ.ಬಿ. ಕುರುವತ್ತಿಗೌಡ್ರ ಹೇಳಿದರು.

ಗುತ್ತಲ: ಶಿಕ್ಷಕರು ಶಿಕ್ಷಣಕ್ಕೆ ಒತ್ತು ನೀಡಬೇಕು, ಶಿಕ್ಷಣ ನೀಡುವಲ್ಲಿ ನಿಷ್ಕಾಳಜಿ ವಹಿಸಿದರೆ ಭವಿಷ್ಯದ ಇಡೀ ಸಮಾಜವೇ ಹಿಂದುಳಿಯಲು ಕಾರಣವಾಗುತ್ತದೆ ಎಂದು ಜಿ.ಪಂ. ಮಾಜಿ ಸದಸ್ಯ ಸಿ.ಬಿ. ಕುರುವತ್ತಿಗೌಡ್ರ ಹೇಳಿದರು.

ಪಟ್ಟಣದ ಸೆಂಟ್‌ಫೌಲ್ ಆಂಗ್ಲ ಮಾಧ್ಯಮ ಶಾಲೆಯ ಆಶ್ರಯದಲ್ಲಿ ನಡೆದ ಗುತ್ತಲ ಕ್ಲಸ್ಟರ್ ಮಟ್ಟದ 2026-27ನೇ ಸಾಲಿನ ಕ್ರೀಡಾಕೂಟಕ್ಕೆ ಕ್ರೀಡಾ ಜ್ಯೋತಿ ಬೆಳಗಿಸುವ ಮುಖಾಂತರ ಚಾಲನೆ ನೀಡಿ ಅವರು ಮಾತನಾಡಿದರು. ನಮ್ಮ ಹಳ್ಳಿಯ ವಿದ್ಯಾರ್ಥಿಗಳು ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಗೆದ್ದು ಶಾಲೆಯ ಕೀರ್ತಿ ಬೆಳಗಬೇಕು, ಮುಕ್ತ ಮನಸ್ಸಿನಿಂದ ಕ್ರೀಡೆಯಲ್ಲಿ ಭಾಗವಹಿಸಿ ಕ್ರೀಡೆಯಲ್ಲಿ ಜಯಗಳಿಸಿ ನಿಮ್ಮ ಶಾಲೆಗೆ ಮತ್ತು ನಿಮ್ಮ ಊರಿಗೆ ಕೀರ್ತಿ ತನ್ನಿರಿ, ಆಟದಲ್ಲಿ ಸೋಲು ಗೆಲುವು ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಕ್ರೀಡಾಪಟುಗಳಿಗೆ ಸ್ಫೂರ್ತಿ ತುಂಬಿದರು.

ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಲ್ಲೇಶ ಕರಿಗಾರ ಮಾತನಾಡಿ, ವಿದ್ಯಾರ್ಥಿಗಳು ಆಟಗಳಲ್ಲಿ ತೋರುವ ಉತ್ಸಾಹ, ಸ್ಫೂರ್ತಿಯನ್ನು ಪಾಠಗಳಲ್ಲಿಯೂ ಕೂಡಾ ವಿದ್ಯಾರ್ಥಿಗಳು ಸಮಾನವಾಗಿ ತೋರಬೇಕು. ಕ್ರೀಡಾಕೂಟದಲ್ಲಿ ನಿರ್ಣಾಯಕರು ಉತ್ತಮವಾದ ನಿರ್ಣಯ ನೀಡಬೇಕು ಅದರಂತೆ ನಿರ್ಣಾಯಕರ ತೀರ್ಪಿಗೆ ಕ್ರೀಡಾಪಟುಗಳು ಹಾಗೂ ಊರ ನಾಗರಿಕರು ಮಾನ್ಯತೆಯನ್ನು ನೀಡಬೇಕು ಎಂದರು. ಪ್ರಸ್ತುತ ದಿನದಲ್ಲಿ ಶಿಕ್ಷಕರಿಗೆ ಶಿಕ್ಷಣ ನೀಡುವುದಕ್ಕಿಂತ ಇತರೆ ಅಂಕಿ ಅಂಶಗಳ ಸಂಗ್ರಹ, ದಾಖಲಾತಿಯ ಕೆಲಸವನ್ನು ನೀಡುವುದನ್ನು ಸರ್ಕಾರ ಕಡಿತಗೊಳಿಸಬೇಕು ಎಂದರು.

ವೈದ್ಯರಾದ ಡಾ.ಬಸವರಾಜ ವೀರಾಪುರ ಮಾತನಾಡಿ ಸೋಲು ಗೆಲವು ದಿನನಿತ್ಯದ ಜೀವನದಲ್ಲಿ ಸಹಜವಾಗಿದ್ದು, ವಿದ್ಯಾರ್ಥಿಗಳು ಸಹ ಕ್ರೀಡೆಯಲ್ಲಿ ಭಾಗವಹಿಸಿ ಫಲಿತಾಂಶವನ್ನು ಸಮನಾಗಿ ತಗೆದುಕೊಳ್ಳಬೇಕು. ರಾಷ್ಟ್ರದ ಅಭಿವೃದ್ದೀಯಲ್ಲಿ ಆರೋಗ್ಯ ಮತ್ತು ಶಿಕ್ಷಣ ಬಹುಮುಖ್ಯವಾದ ಅಂಶವಾಗಿದ್ದು ಪ್ರತಿಯೊಬ್ಬ ವಿದ್ಯಾರ್ಥಿಗಳು ಇವುಗಳ ಕಡೆಗೆ ಹೆಚ್ಚಿನ ಮಹತ್ವ ನೀಡಬೇಕು ಎಂದರು. ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಉಳಿಸಿ ಬೆಳೆಸುವುದು ಶ್ಲಾಘನೀಯವಾದದ್ದು ಎಂದರು.

ಕಾರ್ಯಕ್ರಮದಲ್ಲಿ ಕ್ರೀಡಾಕೂಟಕ್ಕೆ ಸಹಾಯ ಮಾಡಿದ ದಾನಿಗಳನ್ನು ಶಿಕ್ಷಣ ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಈರಪ್ಪ ಲಮಾಣಿ, ಪಟ್ಟಣ ಪಂಚಾಯತ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ ಸಾಲಗೇರಿ, ಸಿಲ್ವರ್‌ಟೌನ್ ಡೆವಲ್ಪರ್ ಬಸವರಾಜ ಜವಾಯಿ, ಸೆಂಟ್‌ಫೌಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ತೇಜರಾಜ ಜಾನ್ಮನೆ, ಕಾರ್ಯದರ್ಶಿ ಚನ್ನಬಸಪ್ಪ ಚಕ್ಕಿ, ನಿರ್ದೇಶಕರಾದ ಚೇತನಾ ಜಾನ್ಮನೆ, ಮುಖ್ಯೋಪಾಧ್ಯಾಯ ಸುರೇಶ ದೇವಳೆ, ನಿವೃತ್ತ ದೈಹಿಕ ಶಿಕ್ಷಕರಾದ ಎಚ್.ಪಿ ಗೊಲ್ಲರ, ವೀರಯ್ಯ ಪ್ರಸಾಧಿಮಠ ಸೇರಿದಂತೆ ಗುತ್ತಲ ಕ್ಲಸ್ಟರ್ ಮಟ್ಟದ ಶಾಲೆಯ ಮುಖ್ಯೋಪಾಧ್ಯಾಯರು, ದೈಹಿಕ ಶಿಕ್ಷಕರು ಹಾಗೂ ಮಕ್ಕಳು ಭಾಗವಹಿಸಿದ್ದರು.