ಸರ್ಕಾರಿ ಕಚೇರಿಗಳಲ್ಲಿ ಅರ್ಜಿ ವಿಲೇವಾರಿಗೆ ಅನಗತ್ಯ ವಿಳಂಬ ಮಾಡುವುದು, ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡಿಸುವುದು ಹಾಗೂ ಹಣಕ್ಕಾಗಿ ಬೇಡಿಕೆ ಇಡುವಂತಹ ಘಟನೆಗಳು ಜನರಲ್ಲಿ ಅಸಮಾಧಾನ ಮೂಡಿಸುತ್ತವೆ. ಇದರಿಂದ ಬೇಸತ್ತ ಸಾರ್ವಜನಿಕರು ಲೋಕಾಯುಕ್ತಕ್ಕೆ ದೂರು ನೀಡಿ, ಲಂಚ ಸ್ವೀಕರಿಸುವ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಬಲೆಗೆ ಬೀಳುವ ಪ್ರಕರಣಗಳು ನಡೆಯುತ್ತಿವೆ ಎಂದು ಹೇಳಿದರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಅರ್ಜಿಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡದೆ ವಿಳಂಬ ಮಾಡುವುದು ಹಾಗೂ ಲಂಚದ ಬೇಡಿಕೆ ಇಡುವುದರಿಂದ ಸಾರ್ವಜನಿಕರು ಲೋಕಾಯುಕ್ತಕ್ಕೆ ದೂರು ನೀಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಮೂಲಕ ಇಂತಹ ಬೆಳವಣಿಗೆಗಳಿಗೆ ಅವಕಾಶ ನೀಡಬಾರದು ಎಂದು ಜಿಲ್ಲಾ ಲೋಕಾಯುಕ್ತ ಡಿವೈಎಸ್ಪಿ ಎಚ್. ಎಸ್. ಸುರೇಶ್ ಸೂಚಿಸಿದರು.ನಗರದ ತಾಲೂಕು ಕಚೇರಿ ಕಂದಾಯ ಸಭಾಂಗಣದಲ್ಲಿ ಜಿಲ್ಲಾ ಲೋಕಾಯುಕ್ತ ವತಿಯಿಂದ ಆಯೋಜಿಸಿದ್ದ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಅರ್ಜಿಗಳನ್ನು ಸ್ವೀಕರಿಸಿ, ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.ಸರ್ಕಾರಿ ಕಚೇರಿಗಳಲ್ಲಿ ಅರ್ಜಿ ವಿಲೇವಾರಿಗೆ ಅನಗತ್ಯ ವಿಳಂಬ ಮಾಡುವುದು, ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡಿಸುವುದು ಹಾಗೂ ಹಣಕ್ಕಾಗಿ ಬೇಡಿಕೆ ಇಡುವಂತಹ ಘಟನೆಗಳು ಜನರಲ್ಲಿ ಅಸಮಾಧಾನ ಮೂಡಿಸುತ್ತವೆ. ಇದರಿಂದ ಬೇಸತ್ತ ಸಾರ್ವಜನಿಕರು ಲೋಕಾಯುಕ್ತಕ್ಕೆ ದೂರು ನೀಡಿ, ಲಂಚ ಸ್ವೀಕರಿಸುವ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಬಲೆಗೆ ಬೀಳುವ ಪ್ರಕರಣಗಳು ನಡೆಯುತ್ತಿವೆ ಎಂದು ಹೇಳಿದರು.ಅಧಿಕಾರಿಗಳು ಮತ್ತು ಸಿಬ್ಬಂದಿ ಲಂಚದ ಬೇಡಿಕೆ ಇಡುವ ಮುನ್ನ ತಮ್ಮ ಕುಟುಂಬ ಹಾಗೂ ಭವಿಷ್ಯದ ಬಗ್ಗೆ ಯೋಚಿಸಬೇಕು. ಒಮ್ಮೆ ಲೋಕಾಯುಕ್ತ ಬಲೆಗೆ ಸಿಲುಕಿದರೆ ಸಾರ್ವಜನಿಕವಾಗಿ ಮತ್ತು ಕುಟುಂಬದಲ್ಲಿ ಎದುರಿಸಬೇಕಾಗುವ ಮುಜುಗರ ಹಾಗೂ ಸಂಕಷ್ಟವನ್ನು ಪರಿಗಣಿಸಬೇಕು. ಯಾವುದೇ ಆಮಿಷಕ್ಕೆ ಒಳಗಾಗದೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವುದು ಉತ್ತಮ ಮಾರ್ಗವಾಗಿದೆ ಎಂದರು.ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವವನ್ನು ಅಧಿಕಾರಿಗಳು ಬೆಳೆಸಿಕೊಳ್ಳಬೇಕು. ಜನರನ್ನು ವಿನಾಕಾರಣ ಕಚೇರಿಗಳಿಗೆ ಅಲೆದಾಡಿಸದೆ, ನಿಗದಿತ ಅವಧಿಯಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಬೇಕು. ಅಧಿಕಾರಿಗಳು ಸದಾ ಜಾಗರೂಕರಾಗಿ ಕರ್ತವ್ಯ ನಿರ್ವಹಿಸಿದರೆ ಲೋಕಾಯುಕ್ತ ದೂರುಗಳಿಗೆ ಅವಕಾಶವೇ ಇರುವುದಿಲ್ಲ ಎಂದು ತಿಳಿಸಿದರು.ಕಳೆದ ಬಾರಿ ನಡೆದ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ 10 ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳಲ್ಲಿ ಎಂಟು ಅರ್ಜಿಗಳಿಗೆ ಸಂಬಂಧಿಸಿದಂತೆ ಅಗತ್ಯ ಮಾಹಿತಿ ನೀಡಲಾಗಿದೆ ಎಂದು ಹೇಳಿದರು.ಎಂಟು ವರ್ಷಗಳಿಂದ ಪಹಣಿ ತಿದ್ದುಪಡಿಗೆ ಕಾಯುವಿಕೆ:ಕಸಬಾ ಹೋಬಳಿಯ ತಳಲೂತೊರೆ ಗ್ರಾಮದ ಪ್ರದೀಪ್ ಅವರು ತಮ್ಮ ತಂದೆಯ ಹೆಸರಿನಲ್ಲಿರುವ ಸಾಗುವಳಿ ಚೀಟಿಯನ್ನು ವೈಯಕ್ತಿಕ ಹೆಸರಿಗೆ ಬದಲಾವಣೆ ಮಾಡುವಂತೆ ಅರ್ಜಿ ಸಲ್ಲಿಸಿದ್ದರೂ, ಎಂಟು ವರ್ಷ ಕಳೆದರೂ ಪಹಣಿ ತಿದ್ದುಪಡಿ ಆಗಿಲ್ಲ ಎಂದು ದೂರು ನೀಡಿದರು. ಅಲ್ಲದೆ, ಗ್ರಾಮದ ಸರ್ವೆ ನಂಬರ್ 67ರ ಬದಲಿಗೆ 61 ಎಂದು ದಾಖಲಾಗಿದ್ದು, ಮೂಲ ಸರ್ವೆ ನಂಬರ್ 67 ಎಂದು ತಿದ್ದುಪಡಿ ಮಾಡಿಕೊಡುವಂತೆ ಮನವಿ ಮಾಡಿದರು.ಅರ್ಜಿಯನ್ನು ಪರಿಶೀಲಿಸಿದ ಡಿವೈಎಸ್ಪಿ ಸುರೇಶ್, ಸಂಬಂಧಿಸಿದ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ತಳಲೂತೊರೆ ಗ್ರಾಮ ಲೆಕ್ಕಾಧಿಕಾರಿಗಳು ಪ್ರಕರಣವನ್ನು ನಿರ್ಲಕ್ಷಿಸದೆ, ನಿಗದಿತ ಅವಧಿಯಲ್ಲಿ ಪಹಣಿ ತಿದ್ದುಪಡಿ ಕೈಗೊಳ್ಳುವಂತೆ ತಹಸೀಲ್ದಾರ್ ಎಂ.ಜಿ. ಸಂತೋಷ್ ಕುಮಾರ್ ಅವರಿಗೆ ಸೂಚಿಸಿದರು.ಸಹಕಾರ ಸಂಘದಲ್ಲಿ ಅವ್ಯವಹಾರದ ಆರೋಪಬಾಣಾವರದ ಮಲ್ಲಿಕಾರ್ಜುನ ಅವರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಿರುದ್ಧ ದೂರು ಸಲ್ಲಿಸಿದರು. ಮಾಹಿತಿ ಹಕ್ಕಿನಡಿ ಮಾಹಿತಿ ಕೇಳಿದರೂ ನೀಡಲಾಗುತ್ತಿಲ್ಲ. ಸಂಘದಲ್ಲಿ ಸಿಬ್ಬಂದಿಯಿಂದ ಆರ್ಥಿಕ ಅಕ್ರಮ ಹಾಗೂ ಆಡಳಿತಾತ್ಮಕ ಅವ್ಯವಹಾರ ನಡೆಯುತ್ತಿದೆ ಎಂದು ಆರೋಪಿಸಿದರು.ಕೃಷಿ ಸಾಲ ಪಡೆಯಲು ಅರ್ಹತೆ ಇದ್ದರೂ ವೈಯಕ್ತಿಕ ಕಾರಣಗಳಿಂದ ತಮಗೆ ಸಾಲ ನಿರಾಕರಿಸಲಾಗುತ್ತಿದೆ. ಸಹಕಾರ ಸಂಘದಲ್ಲಿ ಸುಮಾರು 60 ಲಕ್ಷ ಮೊತ್ತದ ಅವ್ಯವಹಾರ ನಡೆದಿರುವ ಶಂಕೆಯಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಮನವಿ ಮಾಡಿದರು.ಎತ್ತಿನಹೊಳೆ ಯೋಜನೆಯಡಿ ಕೆರೆಗಳಿಗೆ ನೀರು, ರಸ್ತೆ ನಿರ್ಮಾಣಕ್ಕೆ ಮನವಿಸಾಮಾಜಿಕ ಹೋರಾಟಗಾರ ವೀರಭದ್ರಪ್ಪ ಅವರು ಎತ್ತಿನಹೊಳೆ ಯೋಜನೆಯಡಿ ಕೆರೆಗಳಿಗೆ ನೀರು ಹರಿಸುವುದು ಹಾಗೂ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಿದರು. ಸ್ಥಳದಲ್ಲಿದ್ದ ಎತ್ತಿನಹೊಳೆ ಇಲಾಖೆಯ ಅಧಿಕಾರಿ ಇಂದುಕುಮಾರ್ ಪಾಟೀಲ್ ಅವರಿಗೆ ಅರ್ಜಿಯನ್ನು ಹಸ್ತಾಂತರಿಸಿದ ಡಿವೈಎಸ್ಪಿ, ಪ್ರಕರಣದ ಕುರಿತು ನಿಗದಿತ ಅವಧಿಯಲ್ಲಿ ಅರ್ಜಿದಾರರಿಗೆ ಮಾಹಿತಿ ನೀಡುವಂತೆ ಸೂಚಿಸಿದರು.ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಒಟ್ಟು 11 ದೂರು ಅರ್ಜಿಗಳು ಸಲ್ಲಿಕೆಯಾದವು. ಆದರೆ ನಗರಸಭೆಗೆ ಸಂಬಂಧಿಸಿದಂತೆ ಯಾವುದೇ ದೂರು ಸಲ್ಲಿಕೆಯಾಗದಿರುವುದು ಗಮನ ಸೆಳೆಯಿತು.ಪೊಲೀಸ್ ನಿರೀಕ್ಷಕಿ ಕೆ. ಶಿಲ್ಪ, ತಹಸೀಲ್ದಾರ್ ಎಂ.ಜಿ. ಸಂತೋಷ್ ಕುಮಾರ್, ತಾಲ್ಲೂಕು ಪಂಚಾಯಿತಿ ಇಒ ಗಂಗಣ್ಣ, ನಗರಸಭೆ ಪೌರಾಯುಕ್ತ ಎಚ್. ಟಿ. ಕೃಷ್ಣಮೂರ್ತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.