ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳ ನಿರ್ಲಕ್ಷ್ಯ, ಶಾಲಾ-ಕಾಲೇಜುಗಳ ಅವ್ಯವಸ್ಥೆ ಖಂಡಿಸಿ ಮತ್ತು ರೈತರ, ಕಾರ್ಮಿಕರ ಸಮಸ್ಯೆ ಬಗೆಹರಿಸಲು ಮತ್ತು ಕ್ಷೇತ್ರದ ಹಲವು ಸಮಸ್ಯೆಗಳ ಪರಿಹಾರಕ್ಕೆ ಅಗ್ರಹಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿಯಿಂದ ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಭದ್ರಾವತಿ

ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳ ನಿರ್ಲಕ್ಷ್ಯ, ಶಾಲಾ-ಕಾಲೇಜುಗಳ ಅವ್ಯವಸ್ಥೆ ಖಂಡಿಸಿ ಮತ್ತು ರೈತರ, ಕಾರ್ಮಿಕರ ಸಮಸ್ಯೆ ಬಗೆಹರಿಸಲು ಮತ್ತು ಕ್ಷೇತ್ರದ ಹಲವು ಸಮಸ್ಯೆಗಳ ಪರಿಹಾರಕ್ಕೆ ಅಗ್ರಹಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿಯಿಂದ ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾ ಲೋಕಾಯುಕ್ತ ಅಧಿಕಾರಿಗಳು ಕಳೆದ 7-8 ತಿಂಗಳಿಂದ ಜಿಲ್ಲೆಯ ಯಾವುದೇ ತಾಲೂಕುಗಳಲ್ಲಿ ಸಾರ್ವಜನಿಕರ ಕುಂದುಕೊರತೆ ಸಭೆಗಳನ್ನು ನಡೆಸಿ ಅಹವಾಲುಗಳನ್ನು ಸ್ವೀಕರಿಸದಿರುವುದು ಖಂಡನೀಯ. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ದೂರಲಾಯಿತು. ತಕ್ಷಣ ರಾಜ್ಯ ಉಪ ಲೋಕಾಯುಕ್ತರು, ನ್ಯಾಯಮೂರ್ತಿ ಬಿ. ವೀರಪ್ಪರವರು ಶಿವಮೊಗ್ಗ ಜಿಲ್ಲೆಗೆ ಆಗಮಿಸಿ ಎಲ್ಲಾ ತಾಲೂಕುಗಳಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಎಲ್ಲಾ ಇಲಾಖೆಗಳ ಕಡತಗಳನ್ನು ಪರಿಶೀಲನೆ ಮಾಡಿ ನ್ಯಾಯ ಒದಗಿಸಬೇಕೆಂದು ಆಗ್ರಹಿಸಲಾಯಿತು.

ರಾಜ್ಯದಲ್ಲಿ ಬಡವರಿಗೆ ನೀಡುತ್ತಿರುವ ವಿವಿಧ ಪಿಂಚಣಿಗಳು ರದ್ದಾಗಿದ್ದು, ನಿಜವಾದ ಬಡವರಿಗೆ ಕೂಡಲೇ ಪಿಂಚಣಿ ಮುಂದುವರಿಸಬೇಕು. ಹಳೇನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪಕ್ಕದ ಸರ್ಕಾರಿ ಬಾಲಕರ ಶಾಲೆಯ ಹಿಂಭಾಗದ ಜಾಗವನ್ನು ಖಾಸಗಿಯವರು ಲೂಟಿ ಮಾಡಲು ಸಂಚು ನಡೆಸಿದ್ದು, ತಕ್ಷಣ ಉದ್ಯಾನವನ ನಿರ್ಮಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು. ಉರ್ದು ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಯ ಆವರಣದಲ್ಲಿ ಸ್ವಚ್ಛತೆ ಕಾಪಾಡಿ ಊಟದ ಕೊಠಡಿ, ಶೌಚಾಲಯ ದುರಸ್ತಿಪಡಿಸಬೇಕೆಂದು ಒತ್ತಾಯಿಸಲಾಯಿತು.

ಕಲ್ಲಾಪುರ ಗ್ರಾಮದ ರಂಗಾಪುರ ಸರ್ವೆ ನಂಬರ್ 1ರಲ್ಲಿ 74 ಎಕರೆ ಕಂದಾಯ ಜಮೀನಿದ್ದು, ಅನೇಕ ವರ್ಷಗಳಿಂದ ಸಾಗುವಳಿ ಮಾಡುತ್ತಿದ್ದ 24 ಜನ ರೈತರ ಫಾರಂ 57 ಕ್ರಮ ಖಂಡಿಸಿ, ಬಿಳಿಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನವಲೇ ಬಸಾಪುರ ಗ್ರಾಮದ ಗ್ರಾಮಠಾಣಾ ಜಾಗದಲ್ಲಿ ನಿವೇಶನರಹಿತ ರೈತರಿಗೆ ತಕ್ಷಣ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿ, ಡಿಬಿ ಹಳ್ಳಿ ಗ್ರಾಮದ ಎಡೇಹಳ್ಳಿ ಸರ್ವೆ ನಂಬರ್ 66ರಲ್ಲಿ ಅರಣ್ಯವಿಲ್ಲದಿದ್ದರೂ ಸರ್ಕಾರ ಮಂಜೂರು ಮಾಡಿದ ಪಹಣಿಗಳನ್ನು ವಜಾ ಮಾಡಿದ್ದು, ತಕ್ಷಣ ಅದೇ ಜಾಗದಲ್ಲಿ ಮರು ಮಂಜೂರು ಮಾಡಬೇಕು. ದಾನವಾಡಿ ಗ್ರಾಮದ ಸರ್ವೆ ನಂಬರ್ 29ರಲ್ಲಿ ಸಾಗುವಳಿ ಮಾಡುತ್ತಿದ್ದ ಹುಲ್ಲು ಬನಿ ಜಾಗದಲ್ಲಿ ಅರಣ್ಯ ಅಧಿಕಾರಿಗಳು ಬಡ ರೈತರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ ಕ್ರಮ ಖಂಡಿಸಲಾಯಿತು.

ಸಮಿತಿ ಅಧ್ಯಕ್ಷ ಬಿ.ಎನ್ ರಾಜು ನೇತೃತ್ವ ವಹಿಸಿದ್ದರು. ಉಪಾಧ್ಯಕ್ಷರಾದ ಸೋಮಣ್ಣ, ಎಂ.ವಿ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಅಕ್ರಂ ಖಾನ್, ಪ್ರಧಾನ ಸಂಚಾಲಕ ಶ್ರೀನಿವಾಸ್, ಸಂಚಾಲಕರಾದ ಶ್ರೀಧರ್, ಏಕಾಂತಪ್ಪ, ವರಲಕ್ಷ್ಮಿ, ನೀಲಮ್ಮ, ವಿಶಾಲಾಕ್ಷಿ, ವೇದಾವತಿ, ಎಂಪಿಎಂ ನೊಂದ ನಿವೃತ್ತ ಕಾರ್ಮಿಕರ ವೇದಿಕೆ ಪ್ರಧಾನ ಸಂಚಾಲಕ ಟಿ.ಜಿ ಬಸವರಾಜಯ್ಯ, ನಿವೃತ್ತ ಕಾರ್ಮಿಕರು ಪಾಲ್ಗೊಂಡಿದ್ದರು.