ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂವಿಧಾನದ ೩೭೧(ಜೆ) ಅಡಿಯಲ್ಲಿ ದೊರೆತಿರುವ ವಿಶೇಷ ಮೀಸಲಾತಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ ತೋರಿದರೆ ಏಳು ಜಿಲ್ಲೆಗಳನ್ನು ಒಳಗೊಂಡ ಪ್ರತ್ಯೇಕ ರಾಜ್ಯದ ಹೋರಾಟ ಆರಂಭಿಸಲಾಗುವುದು ಎಂದು ಹೈದರಾಬಾದ್ ಕರ್ನಾಟಕ ಯುವಶಕ್ತಿ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಗಾಣಗೇರ ಎಚ್ಚರಿಸಿದರು.

ಕೊಪ್ಪಳ: ಕಲ್ಯಾಣ ಕರ್ನಾಟಕ ಭಾಗಕ್ಕೆ ಸಂವಿಧಾನದ ೩೭೧(ಜೆ) ಅಡಿಯಲ್ಲಿ ದೊರೆತಿರುವ ವಿಶೇಷ ಮೀಸಲಾತಿಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಸರ್ಕಾರ ವಿಫಲವಾಗಿದೆ. ನೇಮಕಾತಿ ಹಾಗೂ ಹುದ್ದೆಗಳ ಭರ್ತಿಯಲ್ಲಿ ತಾರತಮ್ಯ ಮುಂದುವರಿದಿದ್ದು, ಈ ಭಾಗದ ಹಕ್ಕುಗಳ ರಕ್ಷಣೆಗೆ ಸರ್ಕಾರ ನಿರ್ಲಕ್ಷ್ಯ ತೋರಿದರೆ ಏಳು ಜಿಲ್ಲೆಗಳನ್ನು ಒಳಗೊಂಡ ಪ್ರತ್ಯೇಕ ರಾಜ್ಯದ ಹೋರಾಟ ಆರಂಭಿಸಲಾಗುವುದು ಎಂದು ಹೈದರಾಬಾದ್ ಕರ್ನಾಟಕ ಯುವಶಕ್ತಿ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಗಾಣಗೇರ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೩೭೧(ಜೆ) ಮೀಸಲಾತಿ ಜಾರಿಗಾಗಿ ಈ ಭಾಗದ ಹಿರಿಯರು ಸುಮಾರು ೩೦ ವರ್ಷಗಳ ಕಾಲ ಹೋರಾಟ ನಡೆಸಿದ್ದಾರೆ. ಅನೇಕರು ತ್ಯಾಗ ಮಾಡಿದ್ದಾರೆ. ಆದರೆ, ಮೀಸಲಾತಿ ಜಾರಿಯಾಗಿ ಒಂದು ದಶಕ ಕಳೆದರೂ ಅದರ ಸಮರ್ಪಕ ಅನುಷ್ಠಾನವಾಗಿಲ್ಲ. ನೇಮಕಾತಿ, ಹುದ್ದೆಗಳ ಹಂಚಿಕೆ ಸೇರಿದಂತೆ ವಿವಿಧ ಆಡಳಿತಾತ್ಮಕ ವಿಚಾರಗಳಲ್ಲಿ ಈ ಭಾಗದ ಜನರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.

ಸೀಮೆ ವಿಸ್ತರಣೆ ಪ್ರಸ್ತಾಪಕ್ಕೆ ಆಕ್ಷೇಪ: ಹೈದರಾಬಾದ್ ಕರ್ನಾಟಕದ ಮೀಸಲಾತಿ ವ್ಯಾಪ್ತಿಗೆ ವಿಜಯಪುರ ಜಿಲ್ಲೆಯ ಸಿಂದಗಿ, ಇಳಕಲ್ ಹಾಗೂ ಗಜೇಂದ್ರಗಡದ ಕೆಲವು ಗ್ರಾಮಗಳನ್ನು ಸೇರ್ಪಡೆಗೊಳಿಸುವ ಕುರಿತು ಈ ಹಿಂದೆ ಚರ್ಚೆಗಳು ನಡೆದಿವೆ. ಇತ್ತೀಚೆಗೆ ಸಿಂದಗಿಯಲ್ಲಿ ನಡೆದ ಹೋರಾಟದ ಸ್ಥಳಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು, ಸಿಂದಗಿಯನ್ನು ೩೭೧(ಜೆ) ಮೀಸಲಾತಿ ವ್ಯಾಪ್ತಿಗೆ ತರುವ ಅಗತ್ಯವಿದೆ ಎಂದು ಅಲ್ಲಿನ ಹೋರಾಟಗಾರರಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಇಂತಹ ಹೇಳಿಕೆಗಳಿಂದ ಅನಗತ್ಯ ಗೊಂದಲ ಸೃಷ್ಟಿಸುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ವಿಜಯೇಂದ್ರ ಅವರ ತಂದೆ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹೈದರಾಬಾದ್ ಕರ್ನಾಟಕ ಭಾಗದ ಅಭಿವೃದ್ಧಿ ಹಾಗೂ ೩೭೧(ಜೆ) ಅನುಷ್ಠಾನಕ್ಕೆ ನೀಡಿದ ಕೊಡುಗೆ ಏನು ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದರು.

ಪ್ರತ್ಯೇಕ ರಾಜ್ಯದ ಎಚ್ಚರಿಕೆ: ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಹಕ್ಕುಗಳಿಗೆ ಧಕ್ಕೆಯಾಗುವ ಯಾವುದೇ ಕ್ರಮಗಳನ್ನು ಸಹಿಸುವುದಿಲ್ಲ. ಈ ಭಾಗದ ಮೀಸಲಾತಿ ವ್ಯವಸ್ಥೆಯಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದು. ಸರ್ಕಾರ ನಿರ್ಲಕ್ಷ್ಯ ಮುಂದುವರಿಸಿದರೆ ಏಳು ಜಿಲ್ಲೆಗಳನ್ನು ಒಳಗೊಂಡ ಪ್ರತ್ಯೇಕ ರಾಜ್ಯಕ್ಕಾಗಿ ಹೋರಾಟ ಆರಂಭಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ನವೆಂಬರ್ ೧ರಿಂದ ೩೦ರೊಳಗೆ ಏಳು ಜಿಲ್ಲೆಗಳ ಪೈಕಿ ಯಾವುದಾದರೂ ಒಂದು ಸ್ಥಳದಲ್ಲಿ, ಯಾವುದೇ ಸಂದರ್ಭದಲ್ಲಿ ಪ್ರತ್ಯೇಕ ರಾಜ್ಯದ ಧ್ವಜಾರೋಹಣ ನಡೆಸಲಾಗುವುದು ಎಂದು ತಿಳಿಸಿದರು.

೩೭೧(ಜೆ) ಮೀಸಲಾತಿ ವಿಚಾರದಲ್ಲಿ ಈ ಭಾಗದ ಹಕ್ಕುಗಳನ್ನು ರಕ್ಷಿಸುವುದು ನಮ್ಮ ಆದ್ಯತೆ. ಮೀಸಲಾತಿಗೆ ಧಕ್ಕೆಯಾಗುವ ಪ್ರಯತ್ನಗಳನ್ನು ವಿರೋಧಿಸಲಾಗುವುದು. ಮೀಸಲಾತಿಯ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಉಪಾಧ್ಯಕ್ಷ ಕಿರಣ್ ಜ್ಯೋತಿ ಹಾಗೂ ಪ್ರಧಾನ ಕಾರ್ಯದರ್ಶಿ ಅಬಿದ್ ಮುಲ್ಲಾ ಉಪಸ್ಥಿತರಿದ್ದರು.