ಸಾರಾಂಶ
ಹನೂರು: ಪಟ್ಟಣ ಪಂಚಾಯತಿ ಕಚೇರಿಯಲ್ಲಿ ಬಾಬು ಜಗಜೀವನ್ ರಾಂ ಜಯಂತಿಯನ್ನು ಆಚರಣೆ ಮಾಡದೆ ನಿರ್ಲಕ್ಷ್ಯವಹಿಸಲಾಗಿದೆ ಎಂದು ಬಾಬು ಜಗಜೀವನ್ ರಾಂ ಯುವಕ ಸಂಘದಿಂದ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕ್ಷಮಾಪಣೆ ಕೇಳಿದ ಬಳಿಕ ಜಯಂತಿಯನ್ನು ಆಚರಿಸಲಾಯಿತು . ಈ ವೇಳೆ ಪ್ರತಿಭಟನಾಕಾರರು ರಾಷ್ಟ್ರ ನಾಯಕ ಬಾಬು ಜಗಜೀವನರಾಂ ಜಯಂತಿಯನ್ನು ದೇಶಾದ್ಯಂತ ಸಂಭ್ರಮದಿಂದ ಎಲ್ಲೆಡೆ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಆದರೆ ಹನೂರು ಪಟ್ಟಣ ಪಂಚಾಯಿತಿಯಲ್ಲಿ ಮಾತ್ರ ಬೆಳಗ್ಗೆ 11 ಆದರೂ ಕೂಡ ಆಚರಣೆ ಮಾಡದೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಕಚೇರಿಯ ಬಾಗಿಲು ಮುಚ್ಚಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಹಾಗೂ ಆಡಳಿತ ವರ್ಗದ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ರಾಷ್ಟ್ರ ನಾಯಕರ ಜಯಂತಿ ಆಚರಣೆಯಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ಅಮಾನತು ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕ್ಷಮಾಪಣೆ ಕೇಳಿದ ಮುಖ್ಯ ಅಧಿಕಾರಿ:ಪ.ಪಂ ಮುಖ್ಯಾಧಿಕಾರಿ ಮಹೇಶ್ ಆಗಮಿಸಿ ಯಳಂದೂರು, ಹನೂರು ಪ.ಪಂ ಎರಡು ಕಡೆಯಲ್ಲಿ ಕರ್ತವ್ಯದಲ್ಲಿ ನಿಯೋಜನೆಗೊಂಡಿರುವ ಹಿನ್ನೆಲೆ ಇಲ್ಲಿಯ ಸಿಬ್ಬಂದಿಗೆ ಜಯಂತಿಯನ್ನು ಅರ್ಥಪೂರ್ಣವಾಗಿ ಮಾಡಲು ಸೂಚಿಸಿದ್ದೆ, ಆದರೆ ಅವರು ಮಾಡಿರುವ ನಿರ್ಲಕ್ಷ್ಯತನಕ್ಕೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಭಟನಾಕಾರರಿಗೆ ಭರವಸೆ ನೀಡಿದರು. ನಂತರ ಬಾಬೂಜೀ ಜಯಂತಿ ಆಚರಣೆ ಮಾಡದ ಬಗ್ಗೆ ವೈಯಕ್ತಿಕವಾಗಿ ಬಹಿರಂಗವಾಗಿ ಕ್ಷಮಾಪಣೆ ಕೇಳಿದರು. ಬಳಿಕ ಪ್ರತಿಭಟನಾಕಾರರು ಸಮ್ಮುಖದಲ್ಲಿಯೇ ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು