ಸಾರಾಂಶ
ಶಿವಕುಮಾರ ಕುಷ್ಟಗಿ ಗದಗ
ಗದಗ-ಬೆಟಗೇರಿ ನಗರಸಭೆಗೆ ಗರ ಬಡಿದಿದ್ದು, ಇದಕ್ಕೆ ಸ್ಪಂದಿಸಬೇಕಾದ ಹಿರಿಯ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರು ಪರದಾಡುವಂತಾಗಿದ್ದು, ಅವಳಿ ನಗರದಲ್ಲಿ ಬೀದಿ ದೀಪಗಳು ಉರಿಯದೇ ತಿಂಗಳಾದರೂ ಅಧಿಕಾರಿಗಳು ತಮ್ಮ ನಿರ್ಲಕ್ಷ್ಯ ಮುಂದುವರಿಸಿದ್ದಾರೆ.ನಗರದ ಪ್ರಮುಖ ರಸ್ತೆಯಾಗಿರುವ ನಿತ್ಯ ತಡರಾತ್ರಿಯವರೆಗೂ ಸಾವಿರಾರು ಪ್ರಯಾಣಿಕರು ಸಂಚರಿಸುವ ಹಳೆ ಜಿಲ್ಲಾಧಿಕಾರಿ ಕಚೇರಿಯಿಂದ ಹೊಸ ಬಸ್ ನಿಲ್ದಾಣದವರೆಗಿನ ರಸ್ತೆಯ ಯಾವ ಲೈಟ್ ಗಳು ಹತ್ತುತ್ತಿಲ್ಲ, ಭೀಷ್ಮಕೆರೆಯ ಮೇಲಿನ ರಸ್ತೆಯಲ್ಲಿಯೂ ಈ ಸಮಸ್ಯೆ ಇತ್ತು, ಆದರೆ ಇತ್ತೀಚೆಗೆ ಗಣೇಶ ವಿಸರ್ಜನೆಗಾಗಿ ನಾಲ್ಕೈದು ಲೈಟ್ ರಿಪೇರಿ ಮಾಡಿದ್ದು, ಅಲ್ಲಲ್ಲಿ ಅಲ್ಪಸ್ವಲ್ಪ ಬೆಳಕು ಕಾಣುತ್ತಿದೆ. ಜನರಲ್ ಕಾರ್ಯಪ್ಪ ವೃತ್ತದಿಂದ ಗಾಂಧಿ ವೃತ್ತದವರೆಗಿನ ಲೈಟ್ ಸ್ಥಗಿತಗೊಂಡು ಹಲವಾರು ತಿಂಗಳುಗಳೇ ಗತಿಸಿದರೂ ರಿಪೇರಿ ಮಾತ್ರ ಆಗಿಲ್ಲ.
ಗದಗ ನಗರದಿಂದ ಬೆಟಗೇರಿ ಸಂಪರ್ಕ ಕಲ್ಪಿಸುವ ಪಾಲಾ ಬದಾಮಿ ಮುಖ್ಯ ರಸ್ತೆಯಲ್ಲಿಯೂ ಇದೇ ಸಮಸ್ಯೆ ಇದ್ದು, ರಾತ್ರಿ ವೇಳೆಯಲ್ಲಿ ಸಂಚರಿಸಲು ಸಾರ್ವಜನಿಕರು ಅದರಲ್ಲಿಯೂ ಸೈಕಲ್ ಸವಾರರು, ಪಾದಚಾರಿಗಳು ಕೈಯಲ್ಲಿ ಜೀವ ಹಿಡಿದುಕೊಂಡು ಓಡಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಭೂಮರಡ್ಡಿ ವೃತ್ತದಿಂದ ಕೆ.ಎಚ್. ಪಾಟೀಲ ವೃತ್ತ, ಹಳೆಯ ಬಸ್ ನಿಲ್ದಾಣದ ಮುಂಭಾಗದ ರಸ್ತೆ, ಮಾಳಶೆಟ್ಟಿ ವೃತ್ತದಿಂದ ಕೆ.ಎಚ್. ಪಾಟೀಲ ವೃತ್ತ, ಅಲ್ಲಿಂದ ಗ್ರೇನ್ ಗ್ರೋಸರಿ ಮಾರುಕಟ್ಟೆ ರಸ್ತೆಯಲ್ಲಿನ ಬೀದಿ ದೀಪಗಳು ಉರಿಯುತ್ತಿಲ್ಲ. ಈ ಬಗ್ಗೆ ನಗರಸಭೆಯ ಸದಸ್ಯರೇ ಆಕ್ರೋಶಗೊಂಡು ಅಧಿಕಾರಿಗಳಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರೂ ಸಿಬ್ಬಂದಿಗಳು ಮಾತ್ರ ಯಾವುದಕ್ಕೂ ಸ್ಪಂದಿಸುತ್ತಿಲ್ಲ.ಅಧಿಕಾರದಲ್ಲಿ ಇಲ್ಲ: ನಗರಸಭೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಮೊದಲ ಅವಧಿಯ ಅಧಿಕಾರ ಪೂರ್ಣಗೊಳಿಸಿದ್ದು, ಇನ್ನುಳಿದ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಾಗಬೇಕಿದೆ. ಈ ನಡುವೆ ಅಧ್ಯಕ್ಷರ ಮೀಸಲಾತಿ ಕುರಿತು ಆಕ್ಷೇಪಣೆ ಸಲ್ಲಿಕೆಯಾಗಿದ್ದು ಅದು ವಿಳಂಬವಾಗುತ್ತಿದೆ. ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ಪೌರಾಯುಕ್ತರ ನಕಲಿ ಸಹಿ ಮಾಡಲಾಗಿದೆ ಎಂದು ಪ್ರಕರಣ ದಾಖಲಾಗಿ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಪ್ರಸ್ತುತ ನಗರಸಭೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷರೂ ಇಲ್ಲ, ಕಾಯಂ ಪೌರಾಯುಕ್ತರು ಇಲ್ಲದೇ ಎಲ್ಲವೂ ಪ್ರಭಾರ ಹುದ್ದೆಗಳ ಮೇಲೆಯೇ ನಡೆಯುತ್ತಿರುವುದು ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ.
ನಗರಸಭೆ ಬೀದಿ ದೀಪ ವಿಭಾಗಕ್ಕೆ ಬೇಕು ಶಾಕ್: ನಗರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬೀದಿ ದೀಪ ನಿರ್ವಹಣಾ ವಿಭಾಗಕ್ಕೆ ಕಾಯಕಲ್ಪ ನೀಡಬೇಕಿದೆ. ಅಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳು ಎಷ್ಟೊಂದು ನಿರ್ಲಿಪ್ತ ಮತ್ತು ಜಿಡ್ಡುಗಟ್ಟಿದ ಆಡಳಿತಕ್ಕೆ ಅಂಟಿಕೊಂಡಿದ್ದಾರೆ ಎಂದರೆ, ಸ್ವತ ಜಿಲ್ಲಾಧಿಕಾರಿಗಳೇ ಸದ್ಯಕ್ಕೆ ಆಡಳಿತಾಧಿಕಾರಿಯಾಗಿರುವ ಹಿನ್ನೆಲೆಯಲ್ಲಿ ಕೂಡಲೇ ಟೆಂಡರ್ ಕರೆದು ಸಾರ್ವಜನಿಕರಿಗೆ ತೊಂದರೆಯಾಗದಂತೆ ಬೀದಿ ದೀಪದ ವ್ಯವಸ್ಥೆ ಮಾಡಿ ಎಂದು 29-8-2024 ರಂದು ಠರಾವು ಮಾಡಿ ಕೊಟ್ಟಿದ್ದರೂ ಬೀದಿ ದೀಪ ನಿರ್ವಹಣೆ ಮಾಡುವ ಕೆಲ ಹಿರಿಯ ಅಧಿಕಾರಿಗಳು, ಯಾರು ಏನು ಮಾಡುತ್ತಾರೆ ನೋಡೋಣ ಎನ್ನುವ ವರ್ತನೆ ಮುಂದುವರಿಸಿದ್ದು, ಇದರಿಂದ ಏನೂ ಅರಿಯದ ಅವಳಿ ನಗರದ ಜನರು ಮಾತ್ರ ಕತ್ತಲಲ್ಲಿ ನಡೆದಾಡುವಂತಾಗಿದೆ.ಗದಗ-ಬೆಟಗೇರಿ ಅವಳಿ ನಗರದಲ್ಲಿನ ಬೀದಿ ದೀಪಗಳ ನಿರ್ವಹಣೆ ಎನ್ನುವುದು ಕೆಲವರಿಗೆ ಚಿನ್ನದ ಮೊಟ್ಟೆ ಇಡುವ ಕೊಳಿಯಂತಾಗಿದೆ. ಇದಕ್ಕೆ ಬೇರೆಯವರು ಟೆಂಡರ್ ಹಾಕದಂತೆ ನೋಡಿಕೊಳ್ಳುತ್ತಾರೆ. ಟೆಂಡರ್ ಹಾಕಿದರೂ ನಿರ್ವಹಣೆ ಮಾಡದೇ ಹಲವಾರು ವರ್ಷಗಳಿಂದ ಬೇರು ಬಿಟ್ಟಿರುವ ಅಧಿಕಾರಿಗಳ ಮಾತು ಕೇಳುವ ಗುತ್ತಿಗೆದಾರರಿಗೆ ಸಬ್ ಕಾಂಟ್ರ್ಯಾಕ್ಟ್ ಕೊಡಬೇಕು ಎನ್ನುವ ಅಲಿಖಿತ ನಿಯಮ ನಗರಸಭೆಯಲ್ಲಿ ಜಾರಿಯಲ್ಲಿದೆ. ಇದನ್ನು ಮೀರಿದರೆ ಒಂದು ಬಾರಿಯಲ್ಲ ಹತ್ತಾರು ಬಾರಿ ಟೆಂಡರ್ ಕರೆದರೂ ಅದಕ್ಕೆ ಯಾರೂ ಟೆಂಡರ್ ಹಾಕುವುದೇ ಇಲ್ಲ ಎನ್ನುವುದು ಕೂಡಾ ಕಟು ವಾಸ್ತವವಾಗಿದೆ.
ಈಗಾಗಲೇ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಈ ಕುರಿತು ತಕ್ಷಣವೇ ಕ್ರಮ ತೆಗೆದುಕೊಳ್ಳಿ, ಹೊಸ ಟೆಂಡರ್ ಪೂರ್ಣಗೊಳ್ಳುವವರೆಗೂ ಹಳೆಯ ಟೆಂಡರ್ ದಾರರಿಂದಲೇ ನಿರ್ವಹಣೆ ಮಾಡಿಸಿ ಎಂದು ನಗರಸಭೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಇನ್ನೊಮ್ಮೆ ಪರಿಶೀಲಿಸಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಬೀದಿ ದೀಪಗಳ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.ಅವಳಿ ನಗರದಲ್ಲಿ ಬೀದಿಗಳು ಉರಿಯದೇ ಹಲವಾರು ತಿಂಗಳು ಕಳೆದಿದ್ದರೂ ಅದನ್ನು ನಿರ್ವಹಣೆ ಮಾಡಲು ನಗರಸಭೆಯಲ್ಲಿ ಪೌರಾಯುಕ್ತರೇ ಇಲ್ಲ, ಇನ್ನು ಕೆಳ ಹಂತದ ಅಧಿಕಾರಿಗಳು ಮಾತ್ರ ಅವಳಿ ನಗರದ ಸಮಸ್ಯೆಗಳು ನಮಗೆ ಸಂಬಂಧಿಸಿದ್ದಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಈ ಕುರಿತು ಹಿರಿಯ ಅಧಿಕಾರಿಗಳು ಗಮನ ಹರಿಸಬೇಕು ಎಂದು ಜೆಡಿಎಸ್ ವಕ್ತಾರ ವಿ.ಆರ್. ಗೋವಿಂದಗೌಡ್ರ ತಿಳಿಸಿದ್ದಾರೆ.