ಸಾರಾಂಶ
ಹಳಿಯಾಳ ಪಟ್ಟಣದ ಪುರಭವನದಲ್ಲಿ ಸೋಮವಾರ ಆಯೋಜಿಸಿದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಪಟ್ಟಣದ ನೈರ್ಮಲ್ಯಕ್ಕಾಗಿ ಶ್ರಮಿಸುತ್ತಿರುವ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.
ಹಳಿಯಾಳ: ನಾಗರಿಕ ಎಸೆಯುವ ತ್ಯಾಜ್ಯ ಮತ್ತೊಂದು ಜೀವಕ್ಕೆ ಹಾನಿ ಉಂಟು ಮಾಡುತ್ತದೆ ಅನ್ನುವ ಕನಿಷ್ಠ ಪರಿಜ್ಞಾನ ಇರುವುದಿಲ್ಲ. ಆಧುನಿಕತೆ ಮೈಗೂಡಿಸಿಕೊಂಡ ಸಮಾಜದ ಒಂದು ವರ್ಗವು ತಮ್ಮ ಬದುಕಿನ ಸ್ವಚ್ಛತೆಗಾಗಿ ಶ್ರಮಿಸುವ ಪೌರ ಕಾರ್ಮಿಕರನ್ನು ಅಲಕ್ಷಿಸುತ್ತಿರುವುದು ಸರಿಯಲ್ಲ ಎಂದು ಪುರಸಭಾ ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ ಹೇಳಿದರು.
ಸೋಮವಾರ ಪಟ್ಟಣದ ಪುರಭವನದಲ್ಲಿ ಆಯೋಜಿಸಿದ ಪೌರ ಕಾರ್ಮಿಕರ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಸ್ವಚ್ಛತೆಯ ಬಗ್ಗೆ ಉಪದೇಶ ನೀಡುವ ಜನಸಾಮಾನ್ಯರಿಗೆ ಕಸ ಹಾಕುವ ಕಲೆ ತಿಳಿದಿದೆ, ಆದರೆ ಕಸ ಹೆಕ್ಕುವ ಕಸಬು ಗೊತ್ತಿಲ್ಲ. ರಸ್ತೆ ಬದಿಯಲ್ಲೋ, ಖಾಲಿ ನಿವೇಶನಗಳಲ್ಲೋ, ಕೆರೆಯ ದಡ ಅಥವಾ ಯಾವುದೇ ಖಾಲಿ ಜಾಗದಲ್ಲೋ ತಮ್ಮ ಮನೆಯ ತ್ಯಾಜ್ಯಗಳನ್ನು ಸುರಿಯುವವರು ಬೇರೆಯವರ ಬದುಕಿಗೆ ಕುತ್ತನ್ನುಂಟು ಮಾಡುತ್ತಿದ್ದೇವೆ ಎಂಬುದನ್ನು ಮರೆಯಬಾರದು ಎಂದರು. ಗಾಳಿ, ಮಳೆ, ಬಿಸಿಲು, ಚಳಿ ಎನ್ನದೇ ದಿನನಿತ್ಯ ನಸುಕಿನ ಜಾವದಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಪೌರ ಕಾರ್ಮಿಕರು ನೈಜ ಕಾಯಕಯೋಗಿಗಳು ಸ್ವಚ್ಛತಾ ರೊವಾರಿಗಳು ಎಂದು ಹೇಳಿದರು.ನಾಮನಿರ್ದೇಶಿತ ಸದಸ್ಯ ಸತ್ಯಜಿತ ಗಿರಿ ಮಾತನಾಡಿ, ಪಟ್ಟಣ ನೈರ್ಮಲ್ಯವಾಗಿಡಲು ದಿನನಿತ್ಯವೂ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಶ್ರಮಿಸುವ ಲಕ್ಷಾಂತರ ಪೌರ ಕಾರ್ಮಿಕರ ನೋವು, ವೇದನೆ ಸಮಾಜಕ್ಕೆ ಅರ್ಥವಾಗಬೇಕು ಎಂದರು.
ಸಾಂಸ್ಕೃತಿಕ ಕಾರ್ಯಕ್ರಮ: ಪೌರ ಕಾರ್ಮಿಕರ ದಿನಾಚರಣೆಯ ನಿಮಿತ್ತ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪಟ್ಟಣದ ನೈರ್ಮಲ್ಯಕ್ಕಾಗಿ ಶ್ರಮಿಸುತ್ತಿರುವ ಪೌರ ಕಾರ್ಮಿಕರ ಸೇವೆ ಪರಿಗಣಿಸಿ ಸನ್ಮಾನಿಸಲಾಯಿತು. ಪೌರಕಾರ್ಮಿಕರಿಂದ ಮತ್ತು ಅವರ ಮಕ್ಕಳಿಂದ ಮನರಂಜನಾ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುರಸಭಾ ಅಧ್ಯಕ್ಷೆ ದ್ರೌಪದಿ ಅಗಸರ ವಹಿಸಿದ್ದರು. ಉಪಾಧ್ಯಕ್ಷೆ ಲಕ್ಷ್ಮೀ ವಡ್ಡರ, ಪುರಸಭಾ ಸದಸ್ಯೆ ಸುವರ್ಣಾ ಮಾದರ, ಶಮೀಮಬಾನು ಜಂಬೂವಾಲೆ, ನಾಮನಿರ್ದೇಶಿತ ಸದಸ್ಯ ಜಮೀಲಅಹ್ಮದ ಶಿವಳ್ಳಿ, ಪುರಸಭಾ ವ್ಯವಸ್ಥಾಪಕ ಈರಣ್ಣ ಕೊಂಡಿ, ಪರಿಸರ ಎಂಜಿನಿಯರ್ ದಶಿರ್ತಾ , ರಾಮಚಂದ್ರ ಮೋಹಿತೆ, ರಮೇಶ ಮಜುಕರ, ಪ್ರಕಾಶ ಠೊಸುರ ಹಾಗೂ ಇತರರು ಇದ್ದರು.ಸದಸ್ಯರೇ ಗೈರು: ಪೌರ ಕಾರ್ಮಿಕರ ದಿನಾಚರಣೆಗೆ ಪುರಸಭೆಯ ಬಹುತೇಕ ಸದಸ್ಯರು ಗೈರು ಹಾಜರಾಗಿರುವುದು ಆಕ್ಷೇಪಕ್ಕೆ ಗುರಿಯಾಯಿತು.