ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ಶಿರಾ ನಗರದ ಕಲ್ಲುಕೋಟೆ ಸರ್ವೇ ನಂ. 118ರಲ್ಲಿ ಧರಣಿ ಕುಳಿತಿದ್ದ ಇಬ್ಬರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರೂ ಇದುವರೆಗೂ ಯಾವುದೇ ಅಧಿಕಾರಿಗಳಾಗಲೀ, ರಾಜಕೀಯ ವ್ಯಕ್ತಿಗಳಾಗಲೀ ಭೇಟಿ ನೀಡಿ ಆರೋಗ್ಯ ವಿಚಾರಿಸಿಲ್ಲ. ಕಾಡುಗೊಲ್ಲ ಸಮುದಾಯ ಎಂದರೆ ಏಕೆ ಇಷ್ಟು ನಿರ್ಲಕ್ಷ್ಯ ಎಂದು ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘದ ಅಧ್ಯಕ್ಷ ರಾಜಣ್ಣ ಆರೋಪಿಸಿದರು. ಅವರು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಕಾಡುಗೊಲ್ಲ ಸಮುದಾಯದ ಮೇಲೆ ಸರಕಾರದ ಎಲ್ಲಾ ಅಧಿಕಾರಿಗಳು ಹೋಗಿ ಅಮಾಯಕರ ಮೇಲೆ ದಬ್ಬಾಳಿಕೆ ಮಾಡಿ ದೌರ್ಜನ್ಯ ಮಾಡಿದ್ದಾರೆ. ಕಳೆದ ಒಂದುವರೆ ತಿಂಗಳಿಂದಲೂ ಕಲ್ಲುಕೋಟೆ ಸ. ನಂ. 118ರ ಜಮೀನಿನಲ್ಲಿ ಕಾಡುಗೊಲ್ಲ ಸಮುದಾಯದವರು ಧರಣಿ ನಡೆಸುತ್ತಿದ್ದಾರೆ. ಆದರೆ ಇದುವರೆಗೂ ಯಾವುದೇ ರಾಜಕೀಯ ವ್ಯಕ್ತಿಗಳು ಹೋಗಿಲ್ಲ. ಧರಣಿ ಕುಳಿತ ಕುಟುಂಬದಲ್ಲಿ 30 ಜನರಲ್ಲಿ 7 ಜನರು ವಿಕಲಚೇತನರಿದ್ದಾರೆ. ಕಾಡುಗೊಲ್ಲ ಸಮುದಾಯ ಎಂದರೆ ಏಕೆ ಇಷ್ಟು ನಿರ್ಲಕ್ಷ್ಯ ಅದೇ ಬೇರೆ ಜಾತಿಯವರಾದರೆ ಸಾಲು ಸಾಲು ರಾಜಕೀಯ ವ್ಯಕ್ತಿಗಳು ಹೋಗುತ್ತಾರೆ. ಆಸ್ಪತ್ರೆಗೆ ವಿಧಾನಪರಿಷತ್ ಸದಸ್ಯ ಚಿದಾನಂದ ಗೌಡರು ಬಂದು ಆರೋಗ್ಯ ವಿಚಾರಿಸಿದ್ದಾರೆ. ಆದರೆ ಶಾಸಕರು ಏಕೆ ಬರಲಿಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕಾಡುಗೊಲ್ಲ ಸಮುದಾಯ ಹೆಚ್ಚಿನ ಮತ ನೀಡಿದ್ದಾರೆ ನೀವು ಅವರ ಋಣ ತೀರಿಸಬೇಕಿತ್ತು. ಆದರೆ ನೀವು ಸೌಜನ್ಯಕ್ಕೂ ಹೋಗಿ ಮಾತನಾಡಿಸಿಲ್ಲ. ನಿನ್ನೆ ನಡೆದ ಘಟನೆಗೆ ಸಂಬಂಧಿಸಿದಂತೆ ಡಿಸಿ, ತಹಸೀಲ್ದಾರ್ ಸೇರಿದಂತೆ ಎಲ್ಲರೂ ಹೊಣೆಯಾಗುತ್ತಾರೆ. ವಿಷ ಸೇವಿಸಿದವರಿಗೆ ಏನಾದರೂ ತೊಂದರೆಯಾದರೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ಮುಖ್ಯಮಂತ್ರಿಗಳ ಮನೆಯ ಮುಂದೆ ಪ್ರತಿಭಟನೆ ಮಾಡುತ್ತೇವೆ. ಕೂಡಲೇ ಜಿಲ್ಲಾಡಳಿತ ಜಮೀನು ಕಳೆದುಕೊಂಡವರಿಗೆ ಕೂಡಲೇ ಜಮೀನು ಕೊಡಬೇಕು, ಅವರ ಎಲ್ಲಾ ರೀತಿಯ ವೈದ್ಯಕೀಯ ಸೌಲಭ್ಯ ಕೊಡಿಸಬೇಕು ಎಂದು ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಕಾಡುಗೊಲ್ಲರ ಸಂಘದ ಅಧ್ಯಕ್ಷ ಈಶ್ವರಪ್ಪ, ಕಾರ್ಯದರ್ಶಿ ಚಂದ್ರಪ್ಪ, ತಾಲೂಕು ಬಿಜೆಪಿ ಅಧ್ಯಕ್ಷ ಹೊನ್ನಗೊಂಡನಹಳ್ಳಿ ಚಿಕ್ಕಣ್ಣ, ಮಾಜಿ ಅಧ್ಯಕ್ಷ ರಂಗಸ್ವಾಮಿ, ಮುಖಂಡರಾದ ಜೆ.ಎನ್.ರಾಜಸಿಂಹ, ಮದಲೂರು ಮೂರ್ತಿ ಮಾಸ್ಟರ್, ಸೋರೆಕುಂಟೆ ಸತ್ಯಪ್ಪ,ಬೇವಿನಹಳ್ಳಿ ಸುದರ್ಶನ್ ಸೇರಿದಂತೆ ಹಲವರು ಹಾಜರಿದ್ದರು.