ನೇಹಾ ಪ್ರಕರಣ: ಬಿಜೆಪಿ ಕೋಮುವಾದಕ್ಕೆ ಬಳಕೆ: ಪ್ರಕಾಶ್‌ ರೈ

| Published : Apr 29 2024, 01:33 AM IST

ಸಾರಾಂಶ

ನೇಹಾ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ನರೇಂದ್ರ ಮೋದಿ ಹೇಳುತ್ತಾರೆ. ಆದರೆ ಬಿಜೆಪಿಗರೇ ಪ್ರಕರಣವನ್ನು ಕೋಮುವಾದಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ರಾಯಚೂರು ನಗರದಲ್ಲಿ ಹಮ್ಮಿಕೊಂಡಿದ್ದ ರಾಜಕೀಯ ಜಾಗೃತಿ ಸಮಾವೇಶದಲ್ಲಿ ಬಹುಭಾಷ ನಟ ಪ್ರಕಾಶ ರೈ ಆರೋಪ ಮಾಡಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ಬಿಜೆಪಿ ಕೋಮುವಾದಕ್ಕೆ ಬಳಕೆ ಮಾಡಿಕೊಂಡಿದೆ ಎಂದು ಬಹುಭಾಷ ನಟ ಪ್ರಕಾಶ ರೈ ಆರೋಪಿಸಿದರು.

ಸ್ಥಳೀಯ ಕರ್ನಾಟಕ ವೆಲ್‌ಫೇರ್‌ ಟ್ರಸ್ಟ್‌ಶಾಲೆ ಆವರಣದಲ್ಲಿ ಲೋಕಶಿಕ್ಷಣ ಸಂಸ್ಥೆ ಹಾಗೂ ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆಯಿಂದ ಹಮ್ಮಿಕೊಂಡಿದ್ದ ರಾಜಕೀಯ ಜಾಗೃತಿ ಸಮಾವೇಶದಲ್ಲಿ ಭಾನುವಾರ ಸಂಜೆ ಮಾತನಾಡಿದ ಅವರು, ನೇಹಾ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ನರೇಂದ್ರ ಮೋದಿ ಹೇಳುತ್ತಾರೆ. ಆದರೆ ಬಿಜೆಪಿಗರೇ ಪ್ರಕರಣವನ್ನು ಕೋಮುವಾದಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದ ರೈತರ ಬಗ್ಗೆ ಗೊತ್ತಿಲ್ಲ. ಹಳ್ಳಿಗಳ ಕುರಿತು ಗೊತ್ತಿಲ್ಲದ ನರೇಂದ್ರ ಮೋದಿ ಹಳ್ಳಿಗಳನ್ನು ದತ್ತು ಪಡೆದು ಮಾದರಿ ಮಾಡುವುದಾಗಿ ಹೇಳಿದ್ದರೂ ಇಷ್ಟು ವರ್ಷದಲ್ಲಿ ಒಂದೇ ಒಂದು ಹಳ್ಳಿಯನ್ನು ಮಾದರಿಯನ್ನಾಗಿಸಿದ್ದಾರೆಯೇ ಎಂದು ಪ್ರಶ್ನಿಸಿದರು. ನಾನು ಕ್ಯಾಮೆರಾ ಮುಂದೆ ನಟನೆ ಮಾಡಿದರೆ ಮೋದಿ ಜನಸಾಮಾನ್ಯದ ಬದುಕಿನೊಂದಿಗೆ ನಟನೆ ಮಾಡುತ್ತಿದ್ದಾರೆ. ಚುನಾವಣೆ ಸಮಯದಲ್ಲಿ ಮೋದಿ ಕೊಟ್ಟಂತಹ ಮಾತುಗಳನ್ನು ನಾವು ನೆನಪು ಮಾಡುವುದೇ ದೇಶ ದ್ರೋಹನಾ? ಎಂದು ಹರಿಹಾಯ್ದರು.

ಭಾರತದ 10 ಲಕ್ಷ ಎಕರೆ ಪ್ರದೇಶವನ್ನ ಚೀನಾ ಒತ್ತುವರಿ ಮಾಡಿದೆ. ಒತ್ತುವರಿ ತಡೆಯಲಾಗಿಲ್ಲ. ಇಂತಹ ಪ್ರಧಾನಿಯನ್ನು ನಾವು ಉಳಿಸಿಕೊಳ್ಳಬೇಕಾ? ಪ್ರಧಾನ ಮಂತ್ರಿ ಆಗಿರುವ ಮೋದಿ ಏನೂ ಓದಿಲ್ಲ. ಅ ಆ ಇ ಈ ಬರದ ಇಂತವರಿಗೆ ರೈತರ ಮಹತ್ವ ಹೇಗೆ ಗೊತ್ತಾಬೇಕು. ನಾವೆಲ್ಲ ಕಾಯಕ ಕಲ್ಯಾಣ ಮಾಡಿದರೆ ಬಿಜೆಪಿಗರು ಕಾವಿ ಕಲ್ಯಾಣ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.

ದೇಶದ ಇವತ್ತಿನ ಪರಿಸ್ಥಿತಿಗೆ ಈ ಸರ್ಕಾರವಷ್ಟೇ ಅಲ್ಲ ಹಿಂದಿನ ಸರ್ಕಾರಗಳು ಕಾರಣವಾಗಿವೆ. ಆಡಳಿತ ನಡೆಸುವ ಸರ್ಕಾರಗಳು ರೈತರಿಗೆ ಸಹಾಯ ಮಾಡುವುದನ್ನು ಭಿಕ್ಷೆ ಅಂದುಕೊಂಡಿದ್ದಾರೆ. ರೈತರ ಮಕ್ಕಳು ರೈತನಾಗಲು ಹಿಂದೇಟು ಹಾಕುತ್ತಿದ್ದಾರೆ. ಇಷ್ಟು ದೊಡ್ಡ ಭಾರತದಲ್ಲಿ ನನಗೆ ಯಾರೂ ಇಲ್ಲವೆಂದು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಈ ವಿಚಾರಗಳು ಪ್ರಧಾನಿ ಮೋದಿಗೆ ಅರ್ಥವಾಗುವುದಿಲ್ಲ. ಇವರ ಸರ್ಕಾರವು ಯಾರಿಗೂ ಏನನ್ನು ಮಾಡಲ್ಲ. ಇಂತಹ ಪರಿವಾರ ಇಲ್ಲದ ಬಿಜೆಪಿಯನ್ನು ಲೋಕಸಭಾ ಚುನಾವಣೆಯಲ್ಲಿ ತಿರಸ್ಕರಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್, ಪಂಜಾಬಿನ ರೈತ ಮುಖಂಡ ಅವತಾರ ಸಿಂಗ್, ವಿವಿಧ ಸಂಘಟನೆಗಳ ಮುಖಂಡರಾದ ಕೆ.ಜಿ ವೀರೇಶ, ಡಿ.ಎಸ್ ಶರಣಬಸವ, ಜಾನ್ ವೆಸ್ಲಿ ಕಾತರಕಿ, ಖಾಜಾ ಅಸ್ಲಾಂ ಅಹಮ್ಮದ, ಮಾರೆಪ್ಪ ಹರವಿ,ಪ್ರಭಾಕರ ಪಾಟೀಲ್‌ ಇಂಗಳಧಾಳ ಸೇರಿ ಅನೇಕರು ಇದ್ದರು.