ನೇಹಾ ಹತ್ಯೆಗೆ ಆಕ್ರೋಶ, ರಾಜ್ಯಾದ್ಯಂತ ಪ್ರತಿಭಟನೆ

| Published : Apr 21 2024, 02:24 AM IST

ಸಾರಾಂಶ

ಆರೋಪಿಗೆ ಗಲ್ಲು ಶಿಕ್ಷೆಗೆ ಮಠಾಧೀಶರ ಒಕ್ಕೊರಲಿನ ಆಗ್ರಹ ಮಾಡಿದ್ದು, ಎಬಿವಿಪಿಯಿಂದಲೂ ವಿವಿಧೆಡೆ ಪ್ರತಿಭಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಹುಬ್ಬಳ್ಳಿ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಭೀಕರ ಹತ್ಯೆ ಖಂಡಿಸಿ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಹಾವೇರಿ, ಧಾರವಾಡ, ಬೆಂಗಳೂರು, ರಾಮನಗರ ಸೇರಿದಂತೆ ರಾಜ್ಯದ ಹಲವೆಡೆ ವಿವಿಧ ಸಂಘಟನೆಗಳು, ಮಠಾಧೀಶರುಗಳಿಂದ ಪ್ರತಿಭಟನೆಗಳು ನಡೆದವು.

ಬೆಂಗಳೂರಿನಲ್ಲಿ ಗೃಹ ಸಚಿವ ಪರಮೇಶ್ವರ್‌ ಅವರ ಮನೆಗೆ ಪ್ರತಿಭನಾಕಾರರು ಮುತ್ತಿಗೆ ಹಾಕಿ, ಆಕ್ರೋಶ ವ್ಯಕ್ತಪಡಿಸಿದರು. ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್‌ನಲ್ಲಿ ವಿವಿಧ ಮಠಾಧೀಶರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಶಿರಹಟ್ಟಿ ಫಕೀರ ದಿಂಗಾಲೇಶ್ವರ ಶ್ರೀ, ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮಿ, ಹಾವೇರಿ ಬಣ್ಣದ ಮಠದ ಸ್ವಾಮೀಜಿ, ಶಿಗ್ಗಾವಿಯ ಸಂಗನ ಬಸವ, ಕುಂದಗೋಳದ ಬಸವಣ್ಣಜ್ಜ, ಸವಣೂರಿನ ಚನ್ನಬಸವ ಸ್ವಾಮೀಜಿ ಸೇರಿದಂತೆ ಹಾವೇರಿ, ಗದಗ, ಧಾರವಾಡ ಭಾಗದ ವಿವಿಧ ಮಠಾಧೀಶರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಜತೆಗೆ ವಕೀಲ ಕೋರಿಶೆಟ್ಟರ್‌, ಮಾಲಿ ಚೆನ್ನಪ್ಪ, ಎಬಿವಿಪಿ ಮುಖಂಡ ಮಣಿಕಂಠ ಕಳಸ, ವಿದ್ಯಾರ್ಥಿನಿ ಶ್ರೀನಿಧಿ ಹಿರೇಮಠ, ಸೇರಿದಂತೆ ಹಲವರು ಭಾಗವಹಿಸಿದ್ದರು.

ಆರೋಪಿ ಫಯಾಜ್‌ ಹುಟ್ಟೂರಾದ ಬೆಳಗಾವಿ ಜಿಲ್ಲೆಯ ಮುನವಳ್ಳಿಯ ಪಂಚಲಿಂಗೇಶ್ವರ ವೃತ್ತದಲ್ಲಿ ಸಾರ್ವಜನಿಕರಿಂದ ಬೃಹತ್‌ ಪ್ರಮಾಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಬೆಳಗಾವಿ ಲೋಕಸಭೆ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡು ಆಕ್ರೋಶ ವ್ಯಕ್ತಪಡಿಸಿದರು. ಬೆಳಗಾವಿ ನಗರದಲ್ಲಿ ಬೆಳಗಾವಿ ಜಿಲ್ಲಾ ಜಂಗಮ ಸಂಘಟನೆ, ಶ್ರೀರಾಮ ಸೇನಾ ಹಿಂದೂಸ್ತಾನ್ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. ಕಾಗವಾಡ, ರಾಮದುರ್ಗ, ಗೋಕಾಕದಲ್ಲಿಯೂ ಪ್ರತಿಭಟನೆ ನಡೆಸಲಾಯಿತು. ವಿಜಯಪುರದಲ್ಲಿ ಎಬಿವಿಪಿಯಿಂದ, ಇಂಡಿಯಲ್ಲಿ ಮಠಾಧೀಶರಿಂದ ಹಾಗೂ ಚಡಚಣ, ನಿಡಗುಂದಿ, ಬಸವನಬಾಗೇವಾಡಿ ಸೇರಿದಂತೆ ವಿವಿಧೆಡೆಯೂ ನೇಹಾ ಹತ್ಯೆ ಖಂಡಿಸಿ ಪ್ರತಿಭಟನೆಗಳು ನಡೆದವು. ಬಾಗಲಕೋಟೆಯಲ್ಲಿ ಎಬಿವಿಪಿಯಿಂದ, ಗುಳೇದಗುಡ್ಡದಲ್ಲಿ ಸಮಸ್ತ ಸಾಹಿತ್ಯ ಬಳಗ, ಚಿಂತಕರು ಮತ್ತು ಮಠಾಧೀಶರಿಂದ ನೇಹಾ ಹಿರೇಮಠ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸಲಾಯಿತು.