ಸಾರಾಂಶ
ಹುಬ್ಬಳ್ಳಿ:
ನಗರದ ಬಿವಿಬಿ ಕಾಲೇಜು ಆವರಣದಲ್ಲಿ ಇತ್ತೀಚಿಗೆ ನಡೆದಿದ್ದ ನೇಹಾ ಹಿರೇಮಠ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳ ತಂಡವು ಸೋಮವಾರ ನ್ಯಾಯಾಲಯಕ್ಕೆ 483 ಪುಟಗಳ ದೋಷಾರೋಪಣ ಪಟ್ಟಿ ಸಲ್ಲಿಸಿದೆ. ಆದರೆ ಚಾರ್ಜ್‌ಶೀಟ್‌ನಲ್ಲಿ ಏನಿದೆ ಎಂಬುದು ಮಾತ್ರ ಗೊತ್ತಾಗಿಲ್ಲ.ಹು-ಧಾ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ ನೇಹಾ (23)ಳನ್ನು ಏ. 18ರಂದು ಆಕೆಯ ಹಳೆಯ ಸಹಪಾಠಿ ಫಯಾಜ್ ಎಂಬುವನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದನು.
ಫಯಾಜ್ ಪ್ರೀತಿಯನ್ನು ನೇಹಾ ನಿರಾಕರಿಸಿದ್ದಳು. ಇದರಿಂದ ಕುಪಿತಗೊಂಡಿದ್ದ ಫಯಾಜ್ ಚಾಕುವಿನಿಂದ ಬರೋಬ್ಬರಿ ೧೩ ಬಾರಿ ಇರಿದು ಕೊಲೆ ಮಾಡಿದ್ದ. ಸಿಐಡಿ ಅಧಿಕಾರಿಗಳ ಮುಂದೆ ಆರೋಪಿ ಫಯಾಜ್ ತಪ್ಪೊಪ್ಪಿಕೊಂಡಿದ್ದ. ಈ ಕುರಿತಂತೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೊಲೆ ನಡೆದ ಒಂದು ಗಂಟೆ ಅವಧಿಯೊಳಗೆ ಸ್ಥಳೀಯ ಪೊಲೀಸರು ಆರೋಪಿ ಫಯಾಜ್‌ನ್ನು ಬಂಧಿಸಿದ್ದರು.ಹತ್ಯೆ ಪ್ರಕರಣದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಸಾರ್ವಜನಿಕ ಪ್ರತಿಭಟನೆ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿತ್ತು. ಜತೆಗೆ 90 ದಿನ ಅವಧಿ ನೀಡಿತ್ತು. ಪ್ರಕರಣದ ಸುದೀರ್ಘ ತನಿಖೆ ನಡೆಸಿದ ಸಿಐಡಿ ತನಿಖಾ ತಂಡದ ಡಿವೈಎಸ್ಪಿ ಎನ್.ಎಚ್. ಪೈಕ್ ಅವರು ಸ್ಥಳೀಯ ಜೆಎಂಎಫ್ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದರು.
ರಾಜ್ಯಾದ್ಯಂತ ಪ್ರತಿಭಟನೆ:ವಿದ್ಯಾರ್ಥಿನಿ ನೇಹಾಳ ಕೊಲೆ ಖಂಡಿಸಿ ಕರ್ನಾಟಕ ಮಾತ್ರವಲ್ಲದೆ ದೇಶವ್ಯಾಪಿ ಸಾರ್ವಜನಿಕರು, ವಿವಿಧ ಸಂಘಟನೆಗಳು ಹಾಗೂ ಬಿಜೆಪಿಯಿಂದ ತೀವ್ರ ಪ್ರತಿಭಟನೆ ನಡೆದಿದ್ದವು. ಹಂತಕನಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಎನ್‌ಕೌಂಟರ್ ಮಾಡಬೇಕೆಂಬ ಕೂಗು ಸಹ ಕೇಳಿಬಂದಿತ್ತು. ಪ್ರಕರಣ ಸಿಬಿಐಗೆ ವಹಿಸುವಂತೆ ಬಿಜೆಪಿ ಸೇರಿದಂತೆ ಕೊಲೆಯಾದ ನೇಹಾಳ ತಂದೆ, ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಕೂಡ ಒತ್ತಾಯಿಸಿದರು.ರಾಜಕೀಯ ತಿರುವು ಪಡೆದಿದ್ದ ಪ್ರಕರಣ
ಲೋಕಸಭಾ ಚುನಾವಣೆ ಸಂದರ್ಭದಲ್ಲೇ ನೇಹಾ ಹತ್ಯೆ ನಡೆದ ಹಿನ್ನೆಲೆಯಲ್ಲಿ ಈ ಪ್ರಕರಣ ರಾಜಕೀಯ ಸ್ವರೂಪವೂ ಪಡೆದುಕೊಂಡಿತ್ತು. ಹೀಗಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ. ಜಿ. ಪರಮೇಶ್ವರ ಸೇರಿದಂತೆ ಅನೇಕ ಗಣ್ಯರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಅಲ್ಲದೇ, ನ್ಯಾಯ ಒದಗಿಸುವ ಭರವಸೆ ನೀಡಿದ್ದರು. ವಿಶೇಷವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಹ ಬಹಿರಂಗ ಪ್ರಚಾರ ಸಭೆಗೆ ಹುಬ್ಬಳ್ಳಿಗೆ ಆಗಮಿಸಿದ್ದ ಸಂದರ್ಭದಲ್ಲಿ ವೇದಿಕೆಯ ನಿರೀಕ್ಷಣಾ ಜಾಗಕ್ಕೆ ಕರೆಯಿಸಿ ಸಾಂತ್ವನ ಹೇಳಿ ನೇಹಾ ಸಾವಿಗೆ ನ್ಯಾಯ ಒದಗಿಸುವ ಭರವಸೆ ಒದಗಿಸಿದ್ದನ್ನು ಇಲ್ಲಿ ಸ್ಮರಿಸಬಹುದು.