ಸಾರಾಂಶ
ಕನ್ನಡಪ್ರಭ ವಾರ್ತೆ ಭದ್ರಾವತಿ
ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇಲ್ಲವಾಗಿದೆ. ಜಲಾಶಯದಲ್ಲಿ ಸ್ಲೂಯಿಸ್ ಗೇಟ್ ಮೂಲಕ ನೀರು ಸೋರಿಕೆ ತಡೆಯಲು ತುರ್ತು ಕಾಮಗಾರಿಗೆ ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಕಾಮಗಾರಿ ಕೈಗೊಳ್ಳಲು ಸರ್ಕಾರದ ಬಳಿ ಹಣವಿಲ್ಲ. ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.ಭದ್ರಾ ಜಲಾಶಯದ ಸ್ಲೂಯಿಸ್ ಗೇಟ್‌ನಿಂದ ನೀರು ಸೋರಿಕೆಯಾಗುತ್ತಿರುವುದನ್ನು ಖಂಡಿಸಿ ಸೋಮವಾರ ಭದ್ರಾ ಜಲಾಶಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆ ನೇತೃತ್ವವಹಿಸಿ ಮಾತನಾಡಿ, ಇದೀಗ ಜಲಾಶಯದ ಅಧಿಕಾರಿಗಳು ತಾತ್ಕಾಲಿಕವಾಗಿ ರಿವರ್ ಸ್ಲೂಯಿಸ್ ಗೇಟ್ ಕಾಮಗಾರಿ ಕೈಗೊಂಡಿದ್ದು, ಬೇಸಿಗೆ ಸಮಯದಲ್ಲಿ ಇಲ್ಲಿನ ಅಧಿಕಾರಿಗಳು ₹೨೦ ಲಕ್ಷದ ತುರ್ತು ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ ರಾಜ್ಯ ಸರ್ಕಾರ ಲೋಕಸಭಾ ಚುನಾವಣೆ ನೆಪದಲ್ಲಿ ಬೇಸಿಗೆಯಲ್ಲಿ ಕಾಮಗಾರಿ ಮಾಡಲಿಲ್ಲ. ಚುನಾವಣೆ ಇದ್ದರೂ ತುರ್ತು ಕಾಮಗಾರಿ ಎಂದು ಪರಿಗಣಿಸಿ ಕಾಮಗಾರಿ ಕೈಗೊಳ್ಳಬಹುದಿತ್ತು. ಆದರೆ ರೈತರ ಬಗ್ಗೆ ಕಾಳಜಿ ಇಲ್ಲದೆ ನಿರ್ಲಕ್ಷ್ಯತನದಿಂದ ವರ್ತಿಸಿದೆ ಎಂದು ಆರೋಪಿಸಿದರು.
ಪ್ರಸ್ತುತ ಜಲಾಯದಿಂದ ಸುಮಾರು ೪೦೦೦ ಕ್ಯೂಸೆಕ್ ನೀರು ವ್ಯರ್ಥವಾಗಿ ಹರಿದು ಹೋಗಿದ್ದು, ಇದರಿಂದಾಗಿ ಜಲಾಶಯದಲ್ಲಿ ಸುಮಾರು ೧೪೦ ಅಡಿ ನೀರು ಸಂಗ್ರಹದ ಬದಲು ೧೩೨ ಅಡಿ ಸಂಗ್ರಹವಾಗಿದೆ. ಇದೀಗ ವ್ಯಾಪಾಕವಾಗಿ ಮಳೆಯಾಗುತ್ತಿರುವ ಹಿನ್ನೆಲೆ ಸಮಸ್ಯೆ ಕಂಡು ಬಂದಿಲ್ಲ. ಈಗಾಗಲೇ ರೈತರು ಬೇಸಿಗೆಯಲ್ಲಿ ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಸರ್ಕಾರ ತಕ್ಷಣ ಕಾಮಗಾರಿ ಕೈಗೊಳ್ಳಬೇಕು. ಒಂದು ವೇಳೆ ಸರ್ಕಾರದ ಬಳಿ ಹಣವಿಲ್ಲದಿದ್ದರೆ ತಿಳಿಸಿ ರೈತರೇ ಕಾಮಗಾರಿಗೆ ಹಣ ಸಂಗ್ರಹಿಸಿ ಕೊಡುತ್ತಾರೆ. ರೈತರ ಸಂಕಷ್ಟ ಸರ್ಕಾಕಕ್ಕೆ ಅರ್ಥವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇದಕ್ಕೂ ಮೊದಲು ಬಿಅರ್‌ಪಿ ಅತಿಥಿ ಗೃಹದಿಂದ ಜಲಾಶಯದ ವರೆಗೆ ಪಾದಯಾತ್ರೆ ನಡೆಸಲಾಯಿತು. ನಂತರ ಪ್ರತಿಭಟಿಸಿ ಕದ್ದು ಮುಚ್ಚಿ ನೀರು ಬಿಡುತ್ತಿರುವ ರಾಜ್ಯ ಸರ್ಕಾರಕ್ಕೆ ದಿಕ್ಕಾರ, ಅಯ್ಯೋ ಅಯ್ಯೋ ಅನ್ಯಾಯ, ರೈತರ ಪಾಲಿಗೆ ಅನ್ಯಾಯವೆಸಗುತ್ತಿರುವ ರಾಜ್ಯ ಸರ್ಕಾರಕ್ಕೆ ಧಿಕ್ಕಾರ, ದಿವಾಳಿ ಸರ್ಕಾರ, ಪಾಪರ್ ಸರ್ಕಾರಕ್ಕೆ ದಿಕ್ಕಾರ'''' ಎಂದು ಘೋಷಣೆಗಳನ್ನು ಹಾಕಲಾಯಿತು.
ಪ್ರತಿಭಟನೆಯಲ್ಲಿ ಪ್ರಮುಖರಾದ ಲೋಕಿಕೆರೆ ನಾಗರಾಜ್, ಮಾಡಾಳ್ ಮಲ್ಲಿಕಾರ್ಜುನ್, ಚಂದ್ರಶೇಖರ್ ಪೂಜಾರ್ ಸೇರಿದಂತೆ ಹೊನ್ನಾಳಿ, ಚನ್ನಗಿರಿ ಸೇರಿದಂತೆ ದಾವಣಗೆರೆ ಹಾಗು ಚಿತ್ರದುರ್ಗ ಜಿಲ್ಲೆಗಳ ವಿವಿಧ ತಾಲೂಕುಗಳ ರೈತ ಮುಖಂಡರು, ರೈತರು ಪಾಲ್ಗೊಂಡಿದ್ದರು. ಪ್ರತಿಭಟನೆ ನಂತರ ರೇಣುಕಾಚಾರ್ಯ ಸೇರಿದಂತೆ ಪ್ರಮುಖರು ಜಲಾಶಯದ ಅಧಿಕಾರಿಗಳೊಂದಿಗೆ ಜಲಾಶಯದ ವೀಕ್ಷಣೆ ನಡೆಸಿ ಮಾಹಿತಿ ಪಡೆದುಕೊಂಡರು.