ಶಿರಸಿ ನಗರದ ರಸ್ತೆ ದುರಸ್ತಿಗೆ ಆಗ್ರಹ

| Published : Jul 09 2024, 12:47 AM IST

ಸಾರಾಂಶ

ದಿನಕ್ಕೆ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ನಿತ್ಯವೂ ಒಂದಿಲ್ಲೊಂದು ಅನಾಹುತಗಳು ಸಂಭವಿಸುತ್ತಲೇ ಇವೆ. ಬೆಳಗ್ಗೆಯಿಂದ ರಾತ್ರಿಯವರೆಗೂ ಆಟೋ ಚಾಲಕರು ಬಾಡಿಗೆ ಕರೆದುಕೊಂಡು ಪ್ರಯಾಣಿಕರನ್ನು ಸಾಗಿಸುವುದು ಸಂಕಷ್ಟಕ್ಕೆ ಸಿಲುಕಿದಂತಾಗಿದೆ.

ಶಿರಸಿ: ನಗರ ವ್ಯಾಪ್ತಿಯ ಪ್ರಮುಖ ರಸ್ತೆಗಳಲ್ಲಿ ಹೊಂಡಗಳು ಬಿದ್ದಿರುವುದರಿಂದ ಆಟೋ ಸಂಚಾರಕ್ಕೆ ಸಮಸ್ಯೆಯುಂಟಾಗಿದ್ದು, ಕೂಡಲೇ ರಸ್ತೆ ದುರಸ್ತಿ ಮಾಡಲು ಸಂಬಂಧಿಸಿದ ಇಲಾಖೆಗೆ ಸೂಚಿಸಬೇಕೆಂದು ಆಗ್ರಹಿಸಿ ಶಿರಸಿ ನಗರ ಆಟೋ ಚಾಲಕ ಮಾಲೀಕರ ಸಂಘದಿಂದ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಯತು.

ನಗರದ ಪ್ರಮುಖ ರಸ್ತೆಗಳಾದ ಮರಾಠಿಕೊಪ್ಪ, ರಾಘವೇಂದ್ರ ವೃತ್ತ, ಸರ್ಕಾರಿ ಆಸ್ಪತ್ರೆ ಎದುರು. ಕುಮಟಾ ರಸ್ತೆಯಾದ ವಿದ್ಯಾಧಿರಾಜ ಕಲಾಕ್ಷೇತ್ರ ರಸ್ತೆ, ಅಗಸೇಬಾಗಿಲ, ಹುಬ್ಬಳ್ಳಿ ರಸ್ತೆ, ಚಿಪಗಿ ಸರ್ಕಲ್, ನಿಲೇಕಣಿ ಸೇರಿದಂತೆ ವಾರ್ಡ್ ರಸ್ತೆಗಳು ಹಾಳಾಗಿದೆ. ದೊಡ್ಡ ಹೊಂಡಗಳಾಗಿ ರಸ್ತೆಯಲ್ಲಿ ಸಂಚರಿಸುವುದೇ ಕಷ್ಟಕರವಾಗಿದೆ.

ದಿನಕ್ಕೆ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ನಿತ್ಯವೂ ಒಂದಿಲ್ಲೊಂದು ಅನಾಹುತಗಳು ಸಂಭವಿಸುತ್ತಲೇ ಇವೆ. ಬೆಳಗ್ಗೆಯಿಂದ ರಾತ್ರಿಯವರೆಗೂ ಆಟೋ ಚಾಲಕರು ಬಾಡಿಗೆ ಕರೆದುಕೊಂಡು ಪ್ರಯಾಣಿಕರನ್ನು ಸಾಗಿಸುವುದು ಸಂಕಷ್ಟಕ್ಕೆ ಸಿಲುಕಿದಂತಾಗಿದೆ.

ಸಂಚರಿಸುವಾಗ ಆಟೋ ರಿಕ್ಷಾದ ಬಿಡಿ ಭಾಗಗಳು ಶಿಥಿಲಗೊಳ್ಳುತ್ತಿದೆ. ದುಬಾರಿಯಾದ ದರದಲ್ಲಿ ಆಟೋ ಸಲಕರಣೆ ಖರೀದಿಸಲು ಸಾಧ್ಯವಾಗುತ್ತಿಲ್ಲ. ಸಂಬಂಧಪಟ್ಟ ಇಲಾಖೆಯವರು ಕೂಡಲೇ ಹೊಂಡ ಬಿದ್ದಿರುವ ರಸ್ತೆಗಳನ್ನು ದುರಸ್ತಿ ಮಾಡಬೇಕು. ಇಲ್ಲವಾದರೆ ಒಂದೆರಡು ದಿನಗಳಲ್ಲಿ ಸಾರ್ವಜನಿಕವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.

ಸಹಾಯಕ ಆಯುಕ್ತರ ಕಚೇರಿ ತಹಸೀಲ್ದಾರ್ ಶ್ರೀಕೃಷ್ಣ ಕಾಮಕರ ಮನವಿ ಸ್ವೀಕರಿಸಿದರು. ಮನವಿ ಸಲ್ಲಿಸುವ ವೇಳೆ ಶಿರಸಿ ನಗರ ಆಟೋ ಚಾಲಕ ಮಾಲೀಕರ ಸಂಘದ ಅಧ್ಯಕ್ಷ ಉಪೇಂದ್ರ ಪೈ, ಈಶ್ವರ ಆಚಾರಿ, ಅಬ್ದುಲ್ ಹಫೀಜ್, ಬಾಲಚಂದ್ರ ನಾಯ್ಕ, ಫಕೀರಪ್ಪ ಮತ್ತಿತರರು ಇದ್ದರು.