ಸಾರಾಂಶ
ಭದ್ರಾವತಿ: ಹುಬ್ಬಳ್ಳಿ ಕಾಲೇಜಿನ ಆವರಣದಲ್ಲಿ ನಡೆದಿರುವ ನೇಹಾ ಹಿರೇಮಠ ವಿದ್ಯಾರ್ಥಿನಿ ಕೊಲೆ ಪ್ರಕರಣ ಖಂಡಿಸಿ ಸೋಮವಾರ ತಾಲೂಕು ಕಚೇರಿ ಮುಂಭಾಗ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಸಂಯೋಜಕ) ತಾಲೂಕು ಶಾಖೆಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.
ನೇಹಾ ಹಿರೇಮಠ ವಿದ್ಯಾರ್ಥಿನಿಯನ್ನು ವಿಕೃತವಾಗಿ ಕೊಲೆಗೈದಿರುವುದು ರಾಕ್ಷಸ ಕೃತ್ಯವಾಗಿದ್ದು, ಈ ಕಾಲಘಟ್ಟದಲ್ಲಿಯೂ ಈ ರೀತಿ ಕೃತ್ಯಗಳು ನಡೆಯುತ್ತಿರುವುದಕ್ಕೆ ಕಾರಣ ಆಳುವ ಸರ್ಕಾರಗಳು ಸಂಪೂರ್ಣ ವೈಫಲ್ಯ ಹೊಂದಿವೆ ಎಂಬುದು ಮೇಲ್ನೋಟಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.ಆರೋಪಿ ಫಯಾಜ್ ಎಸಗಿರುವ ಕೃತ್ಯ ಅಮಾನವೀಯ ಘಟನೆಯಾಗಿದ್ದು, ನಮ್ಮ ದೇಶದಲ್ಲಿ ಮಹಿಳೆಯರಿಗೆ ಹಾಗೂ ಅಪ್ರಾಪ್ತ ಬಾಲಕಿಯರಿಗೆ ರಕ್ಷಣೆ ಇಲ್ಲದಂತಾಗಿದೆ. ಕಾಯ್ದೆಗಳು ಉಲ್ಲಂಘನೆಯಾಗುತ್ತಿವೆ. ಈ ಹಿನ್ನೆಲೆ ಇಂಥಹ ಕೃತ್ಯ ಖಂಡಿಸುವಲ್ಲಿ ಸಂಘ-ಸಂಸ್ಥೆಗಳು ನಿರಂತರ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಆದರೂ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ವಿಶೇಷ ರಕ್ಷಣಾ ಕಾಯ್ದೆ ಜಾರಿಗೊಳಿಸಬೇಕು. ಆರೋಪಿಗಳಿಗೆ ಯಾವುದೇ ಮುಲಾಜಿಲ್ಲದೆ ಗಲ್ಲು ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸುವ ಮೂಲಕ, ಈ ಪ್ರಕರಣದಲ್ಲಿ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಸರ್ಕಾರದ ವಿರುದ್ಧ ಮುಂದಿನ ದಿನಗಳಲ್ಲಿ ಬೀದಿಗಿಳಿದು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಲಾಯಿತು.
ಸಮಿತಿ ತಾಲೂಕು ಸಂಚಾಲಕ ಬಿ. ರವಿ ಹಿರಿಯೂರು ಹಾಗು ಮಹಿಳಾ ಘಟಕದ ಸಂಚಾಲಕಿ ರತ್ನಮ್ಮ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಸಮಿತಿ ಮುಖಂಡರು, ಸದಸ್ಯರು ಪಾಲ್ಗೊಂಡಿದ್ದರು.