ನೇಹಾ ಕೊಲೆ: ಬ್ಯಾಡಗಿಯಲ್ಲಿ ಒಂದು ತಾಸು ರಸ್ತೆ ತಡೆ

| Published : Apr 21 2024, 02:26 AM IST

ಸಾರಾಂಶ

ಬ್ಯಾಡಗಿ ಪಟ್ಟಣದ ಬಿಇಎಸ್ ಕಾಲೇಜು ಆವರಣದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ, ರಟ್ಟೀಹಳ್ಳಿ ರಸ್ತೆ, ಹಳೇ ಪುರಸಭೆ, ಬಸ್ ನಿಲ್ದಾಣ ಮುಖ್ಯರಸ್ತೆ ಸುಭಾಸ್ ವೃತ್ತದ ವರೆಗೂ ಸಂಚರಿಸಿ ಬಳಿಕ ಧರಣಿ ನಡೆಸಿದರು.

ಕನ್ನಡಪ್ರಭ ವಾರ್ತೆ ಬ್ಯಾಡಗಿ

ಹುಬ್ಬಳ್ಳಿ ಬಿವಿಬಿ ಕಾಲೇಜು ಆವರಣದಲ್ಲಿ ಮುಸ್ಲಿಂ ಯುವಕನಿಂದ ಹತ್ಯೆಗೀಡಾದ ನೇಹಾ ಹಿರೇಮಠ ಕೊಲೆ ಪ್ರಕರಣವನ್ನು ಖಂಡಿಸಿ ಶನಿವಾರ ಬೀದಿಗಿಳಿದ ಬಿಜೆಪಿ ಕಾರ್ಯಕರ್ತರು ಸಾವಿರಾರು ವಿದ್ಯಾರ್ಥಿಗಳೊಂದಿಗೆ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರಲ್ಲದೇ ಒಂದು ತಾಸಿಗೂ ಹೆಚ್ಚು ಕಾಲ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಬಿಇಎಸ್ ಕಾಲೇಜು ಆವರಣದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ, ರಟ್ಟೀಹಳ್ಳಿ ರಸ್ತೆ, ಹಳೇ ಪುರಸಭೆ, ಬಸ್ ನಿಲ್ದಾಣ ಮುಖ್ಯರಸ್ತೆ ಸುಭಾಸ್ ವೃತ್ತದ ವರೆಗೂ ಸಂಚರಿಸಿ ಬಳಿಕ ಧರಣಿ ನಡೆಸಿದರು. ವಿದ್ಯಾರ್ಥಿನಿಯರಿಗೆ ರಕ್ಷಣೆ ನೀಡದಿರುವ ರಾಜ್ಯ ಸರ್ಕಾರದ ವಿರುದ್ಧ ಹಾಗೂ ಕೊಲೆ ಆರೋಪಿ ಜಿಹಾದಿ ಮನಸ್ಥಿತಿ ಫಯಾಜ್ ನನ್ನು ಗಲ್ಲಿಗೇರಿಸುವಂತೆ ಮೆರವಣಿಗೆಯುದ್ದಕ್ಕೂ ಘೋಷಣೆ ಕೂಗಿದರು. ಇದೇ ವೇಳೆ ನೇಹಾ ಹಿರೇಮಠ ಅವರ ಭಾವಚಿತ್ರ ಪ್ರದರ್ಶಿಸಲಾಯಿತು.ತುಷ್ಟೀಕರಣದ ಮುಂದುವರಿದ ಭಾಗ

ಈ ವೇಳೆ ಮಾತನಾಡಿದ ಮುರಿಗೆಪ್ಪ ಶೆಟ್ಟರ, ಜಿಹಾದಿ ಮನಸ್ಥಿತಿಗಳು ರಾಜ್ಯದಲ್ಲಿ ಗರಿಗೆದರಿವೆ. ಲವ್ ಜಿಹಾದ್ ದೇಶಕ್ಕೆ ಅತ್ಯಂತ ಅಪಾಕಾರಿ. ಇದರಿಂದ ಹಿಂದೂ ಮಹಿಳೆಯರು ನಿರ್ಭಯವಾಗಿ ಓಡಾಡಲು ಸಾಧ್ಯವಾಗದಂತಾಗಿದೆ, ಮುಸ್ಲಿಂ ತುಷ್ಟೀಕರಣದ ಪರಿಣಾಮದಿಂದ ರಾಜ್ಯದಲ್ಲಿ ಅರಾಜಕತೆ ಉಂಟಾಗಿದೆ. ಕೂಡಲೇ ಆರೋಪಿ ಫಯಾಜ್‌ಗೆ ಗಲ್ಲು ಶಿಕ್ಷೆ ನೀಡುವಂತೆ ಆಗ್ರಹಿಸಿದರು.

ಪುರಸಭೆ ಸದಸ್ಯ ಬಸವರಾಜ ಛತ್ರದ ಮಾತನಾಡಿ, ರಾಜ್ಯದ ಪೊಲೀಸರು ಅತ್ಯಂತ ದಕ್ಷತೆಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ, ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಪ್ರಕರಣಗಳಲ್ಲಿ ಪೊಲೀಸರು ಕಷ್ಟಪಟ್ಟು ಆರೋಪಿಗಳನ್ನು ಬಂಧಿಸಿದ್ದರು, ಆದರೆ ಪುಂಡರ ಮೇಲಿದ್ದ ಎಲ್ಲ ಕೇಸ್‌ಗಳನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆದಿದೆ. ಅಂದು ಕಾಂಗ್ರೆಸ್ ಎಂಎಲ್ಎ ಅಖಂಡ ಶ್ರೀನಿವಾಸಮೂರ್ತಿ, ಇಂದು ಕಾಂಗ್ರೆಸ್ ಕಾರ್ಪೋಟರ್ ಮಗಳ ಹತ್ಯೆ ನಡೆದಿದೆ. ಕಾನೂನು ಸುವ್ಯಸ್ಥೆಗೆ ರಾಜ್ಯದಲ್ಲಿ ಧಕ್ಕೆ ಬಂದಿದೆ ಎಂದರು.

ಅಸಮರ್ಥ ಗೃಹಮಂತ್ರಿ

ಬಿಜೆಪಿ ಮುಖಂಡ ಸುರೇಶ ಅಸಾದಿ ಮಾತನಾಡಿ, ರಾಜ್ಯದ ಗೃಹಮಂತ್ರಿ ಪರಮೇಶ್ವರ ಹೇಳಿಕೆಗಳನ್ನು ನೋಡಿದರೇ ಇವರೊಬ್ಬ ಅಸಮರ್ಥ ಆಡಳಿತಗಾರ ಎಂಬುದು ಸಾಬೀತಾಗುತ್ತದೆ. ತಮ್ಮದೇ ಪಕ್ಷದ ಕಾರ್ಪೋರೇಟರ್ ನ್ಯಾಯ ಕೊಡಿಸಲಾಗದ ಕಾಂಗ್ರೆಸ್ ಪಕ್ಷದ ನಾಯಕರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವಂತೆ ಆಗ್ರಹಿಸಿದರು.

ವಿದ್ಯಾರ್ಥಿನಿ ಸಿಂಧು ಕಲ್ಮಠ, ಎಬಿವಿಪಿ ಮುಖಂಡ ಅಭಿಷೇಕ ದೊಡ್ಮನಿ ಮಾತನಾಡಿ ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಮೃತ ನೇಹಾ ಹಿರೇಮಠ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಚಾರಣೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಿದರು. ತ್ವರಿತ ಶಿಕ್ಷೆಗೆ ಆಗ್ರಹಿಸಿ ಬಿಜೆಪಿ ಹಾಗೂ ಎಬಿವಿಪಿ ಪದಾಧಿಕಾರಿಗಳು ತಹಸೀಲ್ದಾರ್‌ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪ್ರತಿಭಟನೆಗೆ ರೇಣುಕಾಚಾರ್ಯ ಯುವ ವೇದಿಕೆ ಸಾಥ್ ನೀಡಿತಲ್ಲದೇ ವೇದಿಕೆ ಪರವಾಗಿ ಮನವಿ ಸಲ್ಲಿಸಿದರು. ಈ ವೇಳೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ಕಣ್ಣೀರಿಟ್ಟ ವಿದ್ಯಾರ್ಥಿನಿಯರು

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿನಿಯರು ನೇಹಾ ಹಿರೇಮಠ ಸಾವನ್ನು ನೆನೆದು ಕಣ್ಣೀರು ಹಾಕುತ್ತಿದ್ದ ದೃಶ್ಯಗಳು ಎಲ್ಲ ಮನವನ್ನು ಕಲಕುವಂತೆ ಮಾಡಿತು.ಎನ್ ಕೌಂಟರ್ ಕಾನೂನೇಕಿಲ್ಲ

ಇಂತಹ ಘಟನೆ ನಡೆದಾಗ ಉತ್ತರ ಪ್ರದೇಶ ಮಾದರಿಯಲ್ಲಿ ಎನಕೌಂಟರ್ ಕಾನೂನು ಎಕಿಲ್ಲ? ಕೂಡಲೇ ಕಾನೂನಿಗೆ ತಿದ್ದುಪಡಿ ತರುವ ಮೂಲಕ ವಿದ್ಯಾರ್ಥಿನಿಯರ ರಕ್ಷಣೆಗೆ ಮುಂದಾಗಬೇಕು, ಇಲ್ಲದಿದ್ದರೇ ಕಾಲೇಜುಗಳಲ್ಲಿ ಸಹಪಾಠಿಗಳನ್ನು ಮಾತನಾಡಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.

ರಂಜಿತಾ ಗಂಜೀಗಟ್ಟಿ ವಿದ್ಯಾರ್ಥಿನಿ