ನೇಹಾಳ ಹತ್ಯೆ ಪ್ರಕರಣ ಸಿಬಿಐಗೆ ವಹಿಸಲಿ: ರಂಭಾಪುರಿ ಶ್ರೀ

| Published : Apr 29 2024, 01:33 AM IST

ಸಾರಾಂಶ

ಯಾವುದೋ ಒಂದು ಸಮುದಾಯವನ್ನು ತುಷ್ಟೀಕರಣ ಮಾಡಬಾರದು. ಎಲ್ಲ ರಾಜಕಾರಣಿಗಳು ಈ ಕುಟುಂಬಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು ಎಂದು ರಂಭಾಪುರಿ ಶ್ರೀಗಳು ಹೇಳಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ನೇಹಾ ಹಿರೇಮಠ ಹತ್ಯೆ ಖಂಡನೀಯ. ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ನೀಡಿರುವುದು ಸಮಂಜಸವಲ್ಲ. ಆದಷ್ಟು ಬೇಗ ಸಿಬಿಐಗೆ ವಹಿಸಬೇಕು ಎಂದು ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ಒತ್ತಾಯಿಸಿದರು.

ಅವರು ಇಲ್ಲಿನ ನೇಹಾ ನಿವಾಸಕ್ಕೆ ಭಾನುವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ಮಾತನಾಡಿದರು.

ಇಂತಹ ಕೃತ್ಯ ಮಾಡಿದ ದುಷ್ಟ ವ್ಯಕ್ತಿಗೆ ಗಲ್ಲುಶಿಕ್ಷೆಯಾಗಬೇಕಿದೆ. ಈ ಪ್ರಕರಣವನ್ನು ಸರ್ಕಾರ ಈಗಾಗಲೇ ಸಿಐಡಿಗೆ ಹಸ್ತಾಂತರಿಸಿದೆ.‌ ಆದರೆ, ಸಿಐಡಿ ರಾಜ್ಯ ಸರ್ಕಾರದ ಅಧೀನದಲ್ಲಿ ಕೆಲಸ ಮಾಡುತ್ತದೆ.‌ ಇದು ಸಮರ್ಪಕವಾಗಿ ನ್ಯಾಯಕೊಡಿಸುವುದಿಲ್ಲ ಎಂಬುದು ನಮ್ಮ ಅಭಿಪ್ರಾಯವಾಗಿದ್ದು, ಸರ್ಕಾರ ಕೂಡಲೇ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.

ಯಾವುದೋ ಒಂದು ಸಮುದಾಯವನ್ನು ತುಷ್ಟೀಕರಣ ಮಾಡಬಾರದು. ಎಲ್ಲ ರಾಜಕಾರಣಿಗಳು ಈ ಕುಟುಂಬಕ್ಕೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕು. ಈ ಪ್ರಕರಣವನ್ನು ಆದಷ್ಟು ಬೇಗನೆ ಮುಗಿಸಿ ನ್ಯಾಯ ಕೊಡಿಸುವ ಕೆಲಸ ಆಗಬೇಕು. ಒಂದು ವೇಳೆ ನ್ಯಾಯ ಸಿಗದಿದ್ದರೆ ಎಲ್ಲ ಸಂಘಟನೆಗಳು ಒಂದಾಗಿ ಹೋರಾಟ ಮಾಡುತ್ತವೆ. ಇದರಲ್ಲಿ ಯಾವುದೇ ಲೋಪದೋಷವಾಗದ ರೀತಿ ಪ್ರಕರಣ ಮುಗಿಸಿ ನ್ಯಾಯ ಕೊಡಿಸುವ ಕೆಲಸವಾಗಬೇಕು ಎಂದರು.

ಈಗಾಗಲೇ ಮುಖ್ಯಮಂತ್ರಿಗಳು ಸೇರಿದಂತೆ ಹಲವು ರಾಜಕೀಯ ನಾಯಕರು ಬಂದು ಸಾಂತ್ವನ ಹೇಳಿದ್ದಾರೆ.‌ ನಿರಂಜನ ಕೂಡ ರಾಜಕೀಯ, ಸಾಮಾಜಿಕವಾಗಿ ಇರುವವರು. ಈಗಾಗಲೇ ಅವರು ಪಾಲಿಕೆ ಸದಸ್ಯರಿದ್ದಾರೆ. ಹಾಗಾಗಿ ಇದರಲ್ಲಿ ಯಾರು ರಾಜಕೀಯ ಮಾಡಬಾರದು. ಯಾವುದೇ ಜಾತಿ- ಭೇದ ಮಾಡದೆ ನೇಹಾ ಆತ್ಮಕ್ಕೆ ಶಾಂತಿ‌ ಕೊಡಿಸಬೇಕು ಎಂದರು.