ಸಹಕಾರ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕಿದ್ದ ನೆಹರು: ಟಿ.ಡಿ.ರಾಜೇಗೌಡ

| Published : Jan 19 2025, 02:17 AM IST

ಸಹಕಾರ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕಿದ್ದ ನೆಹರು: ಟಿ.ಡಿ.ರಾಜೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಜವಹರಲಾಲ್‌ ನೆಹರೂ ಅವರು ಸಹಕಾರ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕಿದ್ದರು. ಪ್ರತಿ ವರ್ಷ ಅವರು ಹುಟ್ಟಿದ ದಿನದಿಂದ ಸಹಕಾರ ಸಪ್ತಾಹ ಪ್ರಾರಂಭಿಸಲಾಗುತ್ತದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

- ಪಿ.ಸಿ.ಎ.ಆರ್.ಡಿ ಬ್ಯಾಂಕ್‌ ನೂತನ ಅಧ್ಯಕ್ಷ ಕೆ.ಎಂ.ಸುಂದರೇಶ್‌, ಉಪಾಧ್ಯಕ್ಷ ಎಚ್‌.ಎಸ್.ಕೌಸಿಕ್‌ ಗೆ ಅಭಿನಂದನೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಜವಹರಲಾಲ್‌ ನೆಹರೂ ಅವರು ಸಹಕಾರ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕಿದ್ದರು. ಪ್ರತಿ ವರ್ಷ ಅವರು ಹುಟ್ಟಿದ ದಿನದಿಂದ ಸಹಕಾರ ಸಪ್ತಾಹ ಪ್ರಾರಂಭಿಸಲಾಗುತ್ತದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಶನಿವಾರ ಪಿಸಿಎಆರ್‌ ಡಿ ಬ್ಯಾಂಕಿನ ನೂತನ ಅಧ್ಯಕ್ಷ ಕೆ.ಎಂ.ಸುಂದರೇಶ್, ಉಪಾಧ್ಯಕ್ಷ ಕೌಸಿಕ್ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಸಹಕಾರ ಕ್ಷೇತ್ರ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗಿ ಬಡವರು, ರೈತರು ಆರ್ಥಿಕ ವಾಗಿ ಮೇಲೆ ಬರಬಹುದು ಎಂದು ಗಾಂಧೀಜಿ, ನೆಹರೂ ಕನಸು ಕಂಡಿದ್ದರು.

ಪ್ರಸ್ತುತ ಸಹಕಾರ ಕ್ಷೇತ್ರ ಅಭಿವೃದ್ಧಿ ಕಂಡಿದೆ. ಒಂದು ಕಾಲದಲ್ಲಿ ರೈತರು ಸಾಲ ಕಟ್ಟಲಾಗದೆ ಅನೇಕರು ಸುಸ್ತಿದಾರ ರಾಗಿದ್ದರು. ಸರ್ಕಾರ ಸಾಲ ಮನ್ನಾ, ಬಡ್ಡಿ ಮನ್ನಾ ಮಾಡಿತ್ತು.ಈಗ ಬ್ಯಾಂಕುಗಳು ಸಹ ಚೇತರಿಕೆ ಕಂಡಿದೆ. ಕೊಪ್ಪ ಪಿಸಿಎಆರ್‌ ಡಿ ಬ್ಯಾಂಕ್ ಹಿಂದೆ ₹8 ಕೋಟಿ ನಷ್ಟದಲ್ಲಿತ್ತು. ಈಗ ನೂತನ ಅಧ್ಯಕ್ಷರು ಅದನ್ನು ಲಾಭದಾಯಕವಾಗಿಸಿ ಜಿಲ್ಲೆಯಲ್ಲಿಯೇ ಮೊದಲ ಸ್ಥಾನಕ್ಕೆ ತಂದಿದ್ದಾರೆ. ಆ ಬ್ಯಾಂಕಿನ ನವೀಕರಣಕ್ಕಾಗಿ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದಿಂದ ₹20 ಲಕ್ಷ ಹಾಗೂ ನನ್ನ ಶಾಸಕರ ಅನುದಾನದಿಂದ ₹10 ಲಕ್ಷ ನೀಡಿದ್ದೇನೆ ಎಂದರು.

ನರಸಿಂಹರಾಜಪುರ ಪಿಸಿಎಆರ್‌ ಡಿ ಬ್ಯಾಂಕಿನ ನೂತನ ಅಧ್ಯಕ್ಷರು ಸಹ ಹೆಚ್ಚು ಸಮಯವನ್ನು ಬ್ಯಾಂಕಿನ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳಬೇಕು. ರೈತರ ಮನ ಒಲಿಸಿ ಸಾಲ ಕಟ್ಟಿಸಬೇಕು. ಸರ್ಕಾರದಿಂದ ಅಗತ್ಯ ನೆರವು ನೀಡುತ್ತೇವೆ. ಸುಲಭವಾಗಿ ರೈತರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸಿಗುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನೂತನ ಅಧ್ಯಕ್ಷ ಕೆ.ಎಂ.ಸುಂದರೇಶ್‌ ಮಾತನಾಡಿ, ಶಾಸಕರು ಹಾಗೂ ಸಹಕಾರಿ ದುರೀಣರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇವೆ. ರೈತರ ಮನ ಒಲಿಸಿ ಸುಸ್ತಿದಾರರ ಸಾಲ ಕಟ್ಟಿಸುವ ಪ್ರಯತ್ನ ಮಾಡುತ್ತೇವೆ. ಎಲ್ಲಾ ನಿರ್ದೇಶಕರು ಬ್ಯಾಂಕಿನ ಅಭಿವೃದ್ಧಿಗೆ ಕೈ ಜೋಡಿಸಬೇಕು. ಮೊದಲ ಬಾರಿಗೆ ಕಾಂಗ್ರೆಸ್ ನೇತೃತ್ವದಲ್ಲಿ 7 ನಿರ್ದೇಶಕರು ಗೆದ್ದಿದ್ದೇವೆ ಎಂದರು.

ಪಿಸಿಎಆರ್ ಡಿ ಬ್ಯಾಂಕಿನ ನೂತನ ಉಪಾಧ್ಯಕ್ಷ ಕೌಸಿಕ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಆರ್‌. ಸದಾಶಿವ, ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತಶೆಟ್ಟಿ ಮಾತನಾಡಿದರು. ಸಭೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುರೈಯಾ ಭಾನು, ಮುಖಂಡರಾದ ಬಿ.ಎಸ್‌.ಸುಬ್ರಮಣ್ಯ, ಬಿಳಾಲು ಮನೆ ಉಪೇಂದ್ರ, ತೆರಿಯನ್‌, ಎಲಿಯಾಸ್, ಎಚ್.ಬಿ.ರಘುವೀರ್, ಬ್ಯಾಂಕಿನ ನಿರ್ದೇಶಕರು, ಕಾಂಗ್ರೆಸ್‌ ಪಕ್ಷದ ಮುಖಂಡರು ಇದ್ದರು.

-- ಬಾಕ್ಸ್ ---

ಅಧ್ಯಕ್ಷರ ಅವಿರೋಧ ಆಯ್ಕೆ

ಪಿಸಿಎಆರ್ ಡಿ ಬ್ಯಾಂಕಿನ ಆವರಣದಲ್ಲಿ ಶನಿವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಕೆ.ಎಂ.ಸುಂದರೇಶ್‌ ಅಧ್ಯಕ್ಷರಾಗಿ, ಎಚ್‌.ಎಸ್. ಕೌಸಿಕ್ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.

ಅಧ್ಯಕ್ಷ ಸ್ಥಾನಕ್ಕೆ ಕೆ.ಎಂ.ಸುಂದರೇಶ್‌, ಜಿ.ವಿ.ಸಂದೇಶ್‌ ನಾಮ ಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಎಚ್‌.ಎಸ್‌. ಕೌಸಿಕ್‌, ಬಿ.ಎಸ್‌.ಅಜಿತ್‌ ನಾಮ ಪತ್ರ ಸಲ್ಲಿಸಿದರು. ನಿಗದಿತ ಸಮಯದ ಒಳಗೆ ಜಿ.ವಿ.ಸಂದೇಶ್‌ ಹಾಗೂ ಬಿ.ಎಸ್‌.ಅಜಿತ್ ತಮ್ಮ ನಾಮಪತ್ರ ವಾಪಾಸು ಪಡೆದರು. ಆದ್ದರಿಂದ ಅಧ್ಯಕ್ಷರಾಗಿ ಕೆ.ಎಂ. ಸುಂದರೇಶ್ ಹಾಗೂ ಉಪಾಧ್ಯಕ್ಷರಾಗಿ ಎಚ್‌.ಎಸ್. ಕೌಸಿಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಿ.ಜೆ.ಶಿವಕುಮಾರ್ ಘೋಷಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ವ್ಯವಸ್ಥಾಪಕ ಪ್ರದ್ಯುಮ್ನ ಇದ್ದರು.