ಪಂಡಿತ ಜವಹರಲಾಲ್ ನೆಹರು ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಕೆಂಚಮಾರಯ್ಯ ಅಭಿಮತ
ಕನ್ನಡಪ್ರಭ ವಾರ್ತೆ ತುಮಕೂರುಕೆಂಬ್ರಿಡ್ಜ್ ವಿಶ್ವವಿದ್ಯಾಲಯದ ಪದವೀಧರರಾಗಿ, ಪಂಡಿತ್ ಜವಹರಲಾಲ್ ನೆಹರು ಅವರು ರೂಪಿಸಿದ ರಾಜಕೀಯ ನೀತಿ, ವಿದೇಶಾಂಗ ನೀತಿಗಳು ಇಡೀ ವಿಶ್ವಕ್ಕೆ ಮಾದರಿಯಾಗಿವೆ ಎಂದು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆಂಚಮಾರಯ್ಯ ತಿಳಿಸಿದ್ದಾರೆ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಡಿಸಿಸಿ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಪಂಡಿತ ಜವಹರಲಾಲ್ ನೆಹರು ಅವರ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅವರ ರೂಪಿಸಿದ ಅಲಿಪ್ತ ನೀತಿಗಳನ್ನು ಮೆಚ್ಚಿಕೊಂಡು ವಿಶ್ವಸಂಸ್ಥೆ ಅವರನ್ನು ಶಾಂತಿಧೂತ ಎಂಬ ಬಿರುದನ್ನು ನೀಡಿತ್ತು ಎಂದರು.ನೆಹರು ಕುಟುಂಬ ಇಡೀ ತಮ್ಮ ಜೀವನವನ್ನೇ ದೇಶದ ಸ್ವಾತಂತ್ರ ಮತ್ತು ಅಭಿವೃದ್ಧಿಗೆ ಮುಡಿಪಾಗಿಟ್ಟಿದೆ. ಭಾರತಕ್ಕೆ ಸ್ವಾತಂತ್ರ ಬಂದಾಗ ಇದ್ದ ಸಾಕ್ಷರತೆ ಪ್ರಮಾಣ ಶೇ. 14 ಮಾತ್ರ. ಪಂಚ ವಾರ್ಷಿಕ ಯೋಜನೆಗಳ ಮೂಲಕ ಶಿಕ್ಷಣ, ಕೈಗಾರಿಕೆ, ಉದ್ಯೋಗ, ಕೃಷಿಯ ಬೆಳವಣಿಗೆ ಭದ್ರಅಡಿಪಾಯ ಹಾಕಿದರು. ಬಡತನ ನಿವಾರಣೆಗೆ ಮುಂದಾಗಿದಲ್ಲದೆ, 23 ಇದ್ದ ಡ್ಯಾಂಗಳ ಸಂಖ್ಯೆಯನ್ನು 5000 ಕ್ಕೆ ಹೆಚ್ಚಿಸಿ, ನೀರಾವರಿ ಪೂರಕ ಕೃಷಿಗೆ ಒತ್ತು ನೀಡಿ, ಆಹಾರದಲ್ಲಿ ಸ್ವಾವಲಂಬನೆ ಸಾಧಿಸಲು ಸಾಧ್ಯವಾಯಿತು ಎಂದು ನುಡಿದರು.ಶೂನ್ಯದಿಂದ ಸ್ವಾವಲಂಬನೆಯವರೆಗೆ ದೇಶವನ್ನು ತೆಗೆದುಕೊಂಡು ಹೋದ ನೆಹರು ಕುಟುಂಬವನ್ನು ದೇಶಕ್ಕಾಗಿ ಏನು ಮಾಡಿದೆ ಎಂದು ಬಿಜೆಪಿ ಕೇಳುತ್ತಿದೆ. ನೆಹರು ತಂದೆ ಮೋತಿಲಾಲ್ ನೆಹರು ತಮ್ಮ ದೆಹಲಿ ಮತ್ತು ಅಹಮದಾಬಾದ್‌ನಲ್ಲಿರುವ 3000 ಎಕರೆ ಜಾಗವನ್ನು ಸರ್ಕಾರಕ್ಕೆ ದಾನವಾಗಿ ನೀಡಿದರು. ಐಐಎಸ್ಸಿ, ವಿಜ್ಞಾನ ತಂತ್ರಜ್ಞಾನಕ್ಕೆ ಒತ್ತು ನೀಡಿ, ದೇಶವನ್ನು ಉನ್ನತ್ತಿಯತ್ತ ತೆಗೆದುಕೊಂಡು ಹೋದರು. ಆದರೆ ಇಂದು ದೇಶ ಅರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅದೋಗತಿಗೆ ತಲುಪಿದ್ದರೂ, ಎಲ್ಲದಕ್ಕೂ ನೆಹರು ಕಾರಣ ಎಂದು ಹೇಳುತ್ತಿರುವುದು ನಾಚಿಕೆಗೇಡಿನ ಸಂಗತಿ. ಇವರಿಗೆ ಕಾಂಗ್ರೆಸ್ ಕಾರ್ಯಕರ್ತರು ತಕ್ಕಉತ್ತರ ನೀಡಬೇಕಾಗಿದೆ. ರಾಹುಲ್ ಗಾಂಧಿ ಅವರ ಕೈ ಬಲಪಡಿಸುವ ಮೂಲಕ, ಈದೇಶವನ್ನು ಆಘೋಷಿತ ತುರ್ತು ಪರಿಸ್ಥಿತಿಯಿಂದ ಹೊರತರಬೇಕಾಗಿದೆ ಎಂದು ತಿಳಿಸಿದರು.ಮಾಜಿ ಶಾಸಕ ಡಾ.ಎಸ್. ಷಪಿ ಅಹಮದ್ ಮಾತನಾಡಿ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮೊದಲು ಪಕ್ಷದ ಹುಟ್ಟಿ, ಬೆಳೆದು ಬಂದ ಇತಿಹಾಸವನ್ನು ಅರಿಯಬೇಕಾಗಿದೆ. ಕಾಂಗ್ರೆಸ್ ಬಡವರ ಪರವಾಗಿ ಇರುವ ಪಕ್ಷ. ಅಧಿಕಾರಕ್ಕೆ ಅಂಟಿಕೊಂಡ ಪಕ್ಷವಲ್ಲ. ಎಸ್.ಐ.ಆರ್. ಮೂಲಕ ಕಾಂಗ್ರೆಸ್ ಪಕ್ಷದ ಸಂಪ್ರದಾಯಕ ಮತಗಳಿಗೆ ಕಡಿವಾಣ ಹಾಕಲು ಹೊರಟಿದೆ. ಎಚ್ಚೆತ್ತುಕೊಂಡು ಕೆಲಸ ಮಾಡದಿದ್ದರೆ ಅಪಾಯ ಕಟ್ಟಿಟ್ಟಬುತ್ತಿ ಎಂದರು.ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹಮದ್ ಮಾತನಾಡಿ, ದೇಶದ ಸ್ವಾತಂತ್ರ, ಅಭಿವೃದ್ಧಿಗೆ ತಮ್ಮ ತನು, ಮನ, ಧನ ಹಾಗೂ ಪ್ರಾಣವನ್ನು ಅರ್ಪಣೆ ಮಾಡಿದ ಕುಟುಂಬವೆಂದರೆ ಅದು ನೆಹರು ಮನೆತನ. ಅವರ ದೇಶ ಪ್ರೇಮವನ್ನು ಯಾರು ಅಲ್ಲಗಳೆಯಲು ಸಾಧ್ಯವಿಲ್ಲ ಎಂದರು.ಎಸ್ಟಿ ಘಟಕದ ಉಪಾಧ್ಯಕ್ಷ ಎಚ್.ಸಿ.ಹನುಮಂತಯ್ಯ ಮಾತನಾಡಿ, ಸ್ವಾತಂತ್ರ ಹೋರಾಟಕ್ಕೆ ಮುನ್ನುಡಿ ಬರೆದಿದ್ದು ನಾ.ಸು. ಹರ್ಡೀಕರ್ ನೇತೃತ್ವದ ಭಾರತ ಸೇವಾದಳ. ನಂತರದಲ್ಲಿ ಇಡೀ ದೇಶವೇ ಕಾಂಗ್ರೆಸ್ ನೇತೃತ್ವದಲ್ಲಿ ಬೀದಿಗೆ ಇಳಿದು ದೇಶವನ್ನು ಬ್ರಿಟಿಷರ ಕಪಿಮುಷ್ಟಿಯಿಂದ ಬಿಡಿಸಿ, ಅದರ ಮಂಚೂಣಿ ನಾಯಕರಾಗಿದ್ದ ನೆಹರು ಪ್ರಧಾನಿಯಾದರು. ನೆಹರು ಅವರ ಅವಹೇಳವನ್ನು ಸಹಿಸಲು ಸಾಧ್ಯವಿಲ್ಲ. ಬಿಜೆಪಿಯ ಟೀಕೆಗಳಿಗೆ ತಿರುಗೇಟು ನೀಡುವ ಕೆಲಸ ವನ್ನುಕಾರ್ಯಕರ್ತರು ಮಾಡಬೇಕೆಂದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರ್‌ಗೌಡ ಮಾತನಾಡಿ, ಭಾರತ ಪ್ರಗತಿಶೀಲ ರಾಷ್ಟ್ರವಾಗಲು ನೆಹರು ಹಾಕಿಕೊಟ್ಟ ಬುನಾಧಿಯೇ ಕಾರಣ. ತಮ್ಮ ಶಕ್ತಿ, ಸಾಮರ್ಥ್ಯವನ್ನು ದೇಶಕ್ಕಾಗಿ ಧಾರೆ ಎರೆದವರು ಎಂದರು. ಮುಖಂಡರಾದ ಷಣ್ಮುಖಪ್ಪ, ಮಹಿಳಾ ಮುಖಂಡರಾದ ಭಾಗ್ಯಮ್ಮ ಮಾತನಾಡಿದರು.ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರ ಘಟಕದ ಇರ್ಫಾನ್ ಅಹಮದ್, ಎಸ್.ಟಿ. ಘಟಕದ ಕುಮಾರಸ್ವಾಮಿ, ಎಸ್ಸಿ ಘಟಕದ ಶಿವರಾಜು, ಉಮಾಶಂಕರ್, ಪಿ.ಶಿವಾಜಿ, ಮಂಜುನಾಥ್, ಸಂಜೀವಕುಮಾರ್, ಅಂಬರೀಷ್, ಕಾರ್ಮಿಕ ಘಟಕದ ಸೈಯದ್ ದಾದಾಪೀರ್, ಕೆಪಿಸಿಸಿ ಜವಹರ್ ಬಾಲ ಮಂಚ್‌ನಜಿಲ್ಲಾ ಮತ್ತು ರಾಜ್ಯ ಸಂಚಾಲಕ ಹದೀಬ್ ಅಹಮದ್, ಡಿಸಿಸಿ ಉಪಾಧ್ಯಕ್ಷ ಶ್ರೀನಿವಾಸಮೂರ್ತಿ, ಕೆಂಪಣ್ಣ, ಶಿವಪ್ರಸಾದ್, ಸೇವಾದಳದ ಭೈಲಪ್ಪ, ಪ್ರಧಾನ ಕಾರ್ಯದರ್ಶಿ ಸುಜಾತ, ಲಕ್ಷ್ಮೀ ದೇವಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.