ಸಾರಾಂಶ
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದಿಂದ ನಾನಾಗಲಿ, ನನ್ನ ಪುತ್ರನಾಗಲಿ ಸ್ಪರ್ಧಿಸುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಸ್ಪಷ್ಟಪಡಿಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದಿಂದ ನಾನಾಗಲಿ, ನನ್ನ ಪುತ್ರನಾಗಲಿ ಸ್ಪರ್ಧಿಸುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಸ್ಪಷ್ಟಪಡಿಸಿದರು.ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕೋಡಿ ಲೋಕಸಭೆ ಟಿಕೆಟ್ ಕುರುಬ ಸಮಾಜಕ್ಕೆ ಕೊಡಿ, ನಾವು ಗೆಲ್ಲಿಸಿಕೊಂಡು ಬರುತ್ತೇವೆ ಎಂದರು.
2014ರಲ್ಲಿ ಸಿಎಂ ಸಿದ್ದರಾಮಯ್ಯ ಸೂಚನೆಯಂತೆ ಮಂತ್ರಿ ಇದ್ದರೂ ಲೋಕಸಭೆಗೆ ಸ್ಪರ್ಧಿಸಿ ಗೆದ್ದಿದ್ದೆ. ಆಗ ಪುತ್ರ ಗಣೇಶ ಹುಕ್ಕೇರಿ ಶಾಸಕರಾಗಿ ಮಾಡಿ ಮಂತ್ರಿ ಮಾಡುತ್ತೇವೆ ಎಂದು ಪಕ್ಷದ ವರಿಷ್ಠರು ಭರವಸೆ ನೀಡಿದ್ದರು. ಆದರೆ, ಪುತ್ರ ಗಣೇಶ ಶಾಸಕನಾಗಿ ಆಯ್ಕೆಯಾದರೂ ಮಂತ್ರಿ ಮಾಡಲಿಲ್ಲ. 2023ರಲ್ಲಿ ಶಾಸಕ ಗಣೇಶ 78 ಸಾವಿರ ಅಂತರದಿಂದ ಗೆದ್ದರೂ ಮಂತ್ರಿ ಮಾಡಲಿಲ್ಲ. ನಾನಾಗಲಿ, ನನ್ನ ಮಗನಾಗಲಿ ಮಂತ್ರಿ ಸ್ಥಾನವನ್ನು ಕೇಳಿಲ್ಲ, ಮಂತ್ರಿ ಸ್ಥಾನ ಕೇಳುವುದೂ ಇಲ್ಲ ಎಂದು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.ಈಗ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಡ ಬರುತ್ತಿವೆ. ನಾನು ಸ್ಪರ್ಧೆ ಮಾಡಿದರೆ ಚಿಕ್ಕೋಡಿ ಲೋಕಸಭೆಯಲ್ಲಿ ಗೆಲ್ಲುತ್ತೇನೆ ಎಂಬ ಲೆಕ್ಕಾಚಾರವಿದೆ. ಆದರೆ ನಾನು ಯಾವುದೇ ಕಾರಣಕ್ಕೂ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲ್ಲ. ನನ್ನ ವಯಸ್ಸು ಈಗ 78. ಮೇಲಾಗಿ ನನ್ನ ಎಂಎಲ್ಸಿ ಅಧಿಕಾರ ಅವಧಿ ಇನ್ನೂ 4 ವರ್ಷವಿದೆ. ನನ್ನನ್ನ ನಂಬಿ ಬೆಳಗಾವಿ, ವಿಜಯಪುರ, ಬಾಗಲಕೋಟೆ ಶಿಕ್ಷಕರು ಮತ ಹಾಕಿ ಗೆಲ್ಲಿಸಿದ್ದಾರೆ. ನನಗೆ ಮತಕೊಟ್ಟ ಶಿಕ್ಷಕರಿಗೆ ಮೋಸ ಮಾಡುವುದಿಲ್ಲ ಎಂದು ಹೇಳಿದರು.
ಈಗಾಗಲೇ ಬೆಳಗಾವಿಗೆ ಲಿಂಗಾಯತ, ಚಿಕ್ಕೋಡಿಗೆ ಕುರುಬ ಸಮುದಾಯ ಎಂದು ಚರ್ಚೆ ಆಗಿದೆ. ಚಿಕ್ಕೋಡಿ ಲೋಕಸಭೆಯಲ್ಲಿ 3 ಲಕ್ಷ ಕುರುಬ ಸಮುದಾಯದರು ಇದ್ದಾರೆ. ಕುರುಬ ಸಮುದಾಯದ ಮುಖಂಡ ಲಕ್ಷ್ಮಣರಾವ್ ಚಿಂಗಳೆಗೆ ಟಿಕೆಟ್ ಕೊಡಿ. ನಾವೆಲ್ಲರೂ ಸೇರಿ ಗೆಲ್ಲಿಸಿಕೊಂಡು ಬರುತ್ತೇವೆ ಎಂದರು.