ಸಾರಾಂಶ
ಅಳ್ನಾವರ: ಸಾಹೇಬ್ರ ಸರ್ಕಾರ ಫ್ರೀ ಕರೇಂಟ್ ಕೊಟ್ಟೈತಿ ಅಂತಾರ ಆದರ ನಾವ ಮಾತ್ರ ತಿಂಗಳಾ ರೋಕ್ಕಾ ತುಂಬಾತೇವರೀ... ಇಷ್ಟದಿನಾ ನಮ್ಮ ಹತ್ರ ರೊಕ್ಕಾನೂ ಬಿಟ್ಟಿಲ್ಲಾ, ನಮಗ ರಶೀದಿನೂ ಕೊಟ್ಟಿಲ್ಲಾ...
ಇಂತಹ ಆರೋಪವೊಂದು ಅಳ್ನಾವರ ತಾಲೂಕಿನ ಹೊನ್ನಾಪೂರ ಪಂಚಾಯಿತಿ ವ್ಯಾಪ್ತಿಯ ಗೌಳಿಗರೇ ವಾಸವಾಗಿರುವ ಶಿವನಗರ ಗ್ರಾಮದಲ್ಲಿ ಕೇಳಿ ಬಂದಿತು.ಗ್ರಾಮದಲ್ಲಿ ಆಯೋಜಿಸಿದ್ದ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಗೃಹಜ್ಯೋತಿ ಯೋಜನೆಯ ವಿಷಯ ಚರ್ಚೆಗೆ ಬಂದ ಸಮಯದಲ್ಲಿ ಅಲ್ಲಿನ ನಿವಾಸಿಗಳು ಉಚಿತ ವಿದ್ಯುತ್ ನಮಗೆ ಅನ್ವಯಿಸುವುದಿಲ್ಲವೇ? ನಮ್ಮಿಂದ ನಿಯಮಿತವಾಗಿ ಹಣ ವಸೂಲಿ ಮಾಡುತ್ತಿದ್ದಾರೆ. ಹಣ ತುಂಬದಿದ್ದರೆ ಕರೆಂಟ್ ಕಟ್ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಹಣ ತುಂಬಿದ ರಸೀದಿ ಕೇಳಿದರೆ ಇಂದು ನಾಳೆ, ನಾಡಿದ್ದು, ಮುಂದಿನ ತಿಂಗಳು ಕೊಡುತ್ತೇವೆ ಎಂದು ಉತ್ತರ ನೀಡುತ್ತಾರೆ ಎನ್ನುವ ಅನೇಕ ದೂರುಗಳು ಸಭೆಯಲ್ಲಿ ಗಮನ ಸೆಳೆದರು.
ಇಲ್ಲಿ ಸುಮಾರು ೭೨ ಮನೆಗಳಿಗೆ ವಿದ್ಯುತ್ ಸಂಪರ್ಕವಿದ್ದು, ಇವರಲ್ಲಿ ಮೂರು ಸಂಪರ್ಕ ಮಾತ್ರ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿದ್ದು, ಇನ್ನುಳಿದವರು ಮಾಸಿಕ ಶುಲ್ಕ ತುಂಬುತ್ತಲೇ ಬರುತ್ತಿದ್ದಾರೆ.ಈ ಸಮಸ್ಯೆಗಳನ್ನು ಆಲಿಸಿದ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ವಿನಾಯಕ ಕುರುಬರ ಮಾತನಾಡಿ, ಗ್ರಾಮದ ಸಮಸ್ಯೆಯ ಬಗ್ಗೆ ಕುಲಂಕಷವಾಗಿ ವಿಚಾರಣೆ ಮಾಡಲು ಸಮಯ ನಿಗದಿ ಪಡಿಸಿ ಅಧಿಕಾರಿಗಳೊಂದಿಗೆ ಆಗಮಿಸಿ ಪರಿಹಾರ ಒದಗಿಸುವ ಭರವಸೆ ನೀಡಿದರು. ಹೆಸ್ಕಾಂ ಅಧಿಕಾರಿಗಳಿಗೆ ಗ್ರಾಮಕ್ಕೆ ಭೇಟಿ ನೀಡಲು ಸೂಚಿಸಿದರು.
ಸರಕಾರ ಪ್ರಾರಂಭಿಸಿರುವ ಈ ಐದು ಯೋಜನೆಗಳು ಪ್ರತಿಯೊಬ್ಬ ಅರ್ಹ ಕುಟುಂಬಕ್ಕೆ ತಲುಪಬೇಕು ಎನ್ನುವ ಮಹಾತ್ವಾಕಾಂಕ್ಷೆ ಎಲ್ಲರದ್ದಾಗಿದ್ದು, ಯೋಜನೆಗಳ ಸದುಪಯೋಗಪಡೆದುಕೊಳ್ಳುವಂತೆ ಹೇಳಿದರು.ಹೊನ್ನಾಪೂರದಿಂದ ಸುಮಾರು ಏರಡು ಕಿಮೀ ಅಂತರದಲ್ಲಿರುವ ಶಿವನಗರಕ್ಕೆ ಬಸ್ ನಿಲುಗಡೆ ಕಲ್ಪಿಸುತ್ತಿಲ್ಲ ಎನ್ನುವ ಆರೋಪಕ್ಕೆ ನಿಯಂತ್ರಣಾಧಿಕಾರಿ ಸುರೇಶ ಕಲ್ಲವಡ್ಡರ ಪ್ರತಿಕ್ರಿಯಿಸಿ, ಬಸ್ ಚಾಲಕ, ನಿರ್ವಾಹಕರಿಗೆ ಬಸ್ ನಿಲುಗಡೆಗೆ ಸೂಚನೆ ನೀಡುವುದಾಗಿ ಹೇಳಿದರು.
ಗೃಹಲಕ್ಷ್ಮಿ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆಗಳ ಬಗ್ಗೆ ಆಯಾ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು. ತಾಪಂ ಇಒ ಪ್ರಶಾಂತ ತುರಕಾಣಿ, ಸಿಡಿಪಿಒ ಉಮಾ ಬಳ್ಳೊಡಿ, ಗ್ರಾಮದ ಹಿರಿಯರಾದ ಪ್ರದೀಪ ಗಾವಡೆ, ದೊಂಡು ಶಿಂಧೆ, ಕೊಂಡು ಕೊಳಾಪಟ್ಟೆ, ಸಿದ್ದು ಯಮಕರ, ಬಮ್ಮು ಯಮಕರ, ಹೆಸ್ಕಾಂ ಅಧಿಕಾರಿಗಳು, ಸಮಿತಿ ಸದಸ್ಯರು ಉಪಸ್ಥಿತರಿದ್ದರು.